ನವದೆಹಲಿ: ಷೇರು ಮಾರುಕಟ್ಟೆಯಲ್ಲಿ ಸೋಮವಾರ ಬೆಳಿಗ್ಗೆ ಮಾರುಕಟ್ಟೆ ಸಂವೇದಿ ಸೂಚ್ಯಂಕಗಳು ದಾಖಲಿಸಿದ ಮಹಾನ್ ಕುಸಿತದಿಂದಾಗಿ ಭಾರತೀಯ ಹೂಡಿಕೆದಾರರು ಸುಮಾರು 20.16 ಲಕ್ಷ ಕೋಟಿ ರೂ. ನಷ್ಟ ಅನುಭವಿಸಿದ್ದಾರೆ.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ತೆರಿಗೆ ನೀತಿಯಿಂದಾಗಿ ಉದ್ಭವಿಸಿದ ವ್ಯಾಪಾರ ಸಮರವು ತೀವ್ರಗೊಂಡಿರುವಂತೆಯೇ, ಜಾಗತಿಕ ಮಾರುಕಟ್ಟೆಗಳ ಸಂವೇದನೆಗಳಿಗೆ ಅನುಗುಣವಾಗಿ ಭಾರತೀಯ ಮಾರುಕಟ್ಟೆಯೂ ತೀವ್ರ ಹೊಡೆತ ಅನುಭವಿಸಿತು.
ಒಂದು ಹಂತದಲ್ಲಿ 30 ಶೇರುಗಳ ಬಿಎಸ್ಇ ಸೂಚ್ಯಂಕವಾಗಿರುವ ಸೆನ್ಸೆಕ್ಸ್ ಸೋಮವಾರ ಆರಂಭಿಕ ವಹಿವಾಟುಗಳಲ್ಲಿ ಶೇ.5.22ರಷ್ಟು ಎಂದರೆ 3,939.68 ಅಂಶಗಳಷ್ಟು ಕುಸಿತ ಕಂಡು 71,425.01ಕ್ಕೆ ಇಳಿಯಿತು. ಈಕ್ವಿಟಿ ಮಾರುಕಟ್ಟೆಯ ಕರಡಿ ಕುಣಿತದಿಂದಾಗಿ ಬಿಎಸ್ಇ -ಲಿಸ್ಟೆಡ್ ಕಂಪನಿಗಳ ಮಾರುಕಟ್ಟೆ ಮೌಲ್ಯವು ಶುಕ್ರವಾರದ ವಹಿವಾಟಿಗಿಂತ 20,16,293.53 ಕೋಟಿ ರೂ. ಕುಸಿದು, 3,83,18,592.93 ಕೋಟಿ (4.50 ಟ್ರಿಲಿಯನ್ ಡಾಲರ್) ತಲುಪಿತು.
ಟಾಟಾ ಸ್ಟೀಲ್, ಟಾಟಾ ಮೋಟರ್ಸ್ ಶೇ.10ರಷ್ಟು ಕುಸಿತ ಕಂಡರೆ, ಲಾರ್ಸನ್ ಆ್ಯಂಡ್ ಟೂಬ್ರೋ, ಹೆಚ್ಸಿಎಲ್ ಟೆಕ್ನಾಲಜೀಸ್, ಅದಾನಿ ಪೋರ್ಟ್ಸ್, ಟೆಕ್ ಮಹೀಂದ್ರಾ, ಇನ್ಫೋಸಿಸ್, ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್, ರಿಲಯನ್ಸ್ ಇಂಡಸ್ಟ್ರೀಸ್, ಮಹೀಂದ್ರಾ ಆ್ಯಂಡ್ ಮಹೀಂದ್ರಾ ಮುಂತಾದವು ಭಾರಿ ನಷ್ಟ ಅನುಭವಿಸಿದವು.
ಏಷ್ಯಾ ಮಾರುಕಟ್ಟೆಯಲ್ಲಿ ಹಾಂಕಾಂಗ್ನ ಹ್ಯಾಂಗ್ ಸೆಂಗ್ ಸೂಚ್ಯಂಕವು ಶೇ.11ಕ್ಕೂ ಹೆಚ್ಚು ಕುಸಿತ ಕಂಡರೆ, ಟೋಕಿಯೋದ ನಿಕ್ಕೀ 225 ಸೂಚ್ಯಂಕವು ಶೇ.7ರಷ್ಟು, ಶಾಂಘಾಯ್ ಎಸ್ಎಸ್ಇ ಕಾಂಪೊಸಿಟ್ ಸೂಚ್ಯಂಕವು ಶೇ.7ರಷ್ಟು ಹಾಗೂ ದಕ್ಷಿಣ ಕೊರಿಯಾದ ಕೋಸ್ಪಿ ಸೂಚ್ಯಂಕವು ಶೇ.5ರಷ್ಟು ಕುಸಿತ ದಾಖಲಿಸಿತು.
ಅಮೆರಿಕ ಮಾರುಕಟ್ಟೆಯು ಶುಕ್ರವಾರ ತೀರಾ ನಷ್ಟದೊಂದಿಗೆ ವಹಿವಾಟು ಅಂತ್ಯಗೊಳಿಸಿತ್ತು. ಅದರ ಪರಿಣಾಮವು ಇಂದು ಜಾಗತಿಕ ಮಾರುಕಟ್ಟೆಗಳ ಮೇಲೆ ಕಂಡುಬಂದಿದೆ. ಅಮೆರಿಕದ S&P 500 ಶೇ.5.97 ರಷ್ಟು ಕುಸಿದಿದ್ದರೆ, ನಾಸ್ಡಾಕ್ ಕಾಂಪೊಸಿಟ್ ಸೂಚ್ಯಂಕವು ಶೇ.5.82 ಕುಸಿದಿತ್ತು. ಡೋ ಸೂಚ್ಯಂಕವು ಶೇ.5.50 ಕುಸಿತ ದಾಖಲಿಸಿತ್ತು.
“ತೀವ್ರ ಅನಿಶ್ಚಿತತೆಯಿಂದಾಗಿ ಜಾಗತಿಕ ಮಾರುಕಟ್ಟೆಯಲ್ಲಿ ತಲ್ಲಣ ಹೆಚ್ಚಾಗಿದೆ. ಟ್ರಂಪ್ ಅವರು ಸುಂಕ ವಿಧಿಸಿದ ಕ್ರಮವು ಏನೆಲ್ಲಾ ಪರಿಣಾಮ ಬೀರಲಿದೆ ಎಂಬುದನ್ನು ಊಹಿಸಲೂ ಸಾಧ್ಯವಾಗುತ್ತಿಲ್ಲ. ಮಾರುಕಟ್ಟೆಯ ಈ ತಲ್ಲಣದ ಪರಿಸ್ಥಿತಿಯಲ್ಲಿ, ಕಾದು ನೋಡುವ ತಂತ್ರವೇ ಈಗ ಅನುಸರಿಸಬೇಕಾದ ಅತ್ಯುತ್ತಮ ನಡೆಯಾಗಿದೆ” ಎಂದು ಜಿಯೋಜಿತ್ ಫೈನಾನ್ಷಿಯಲ್ ಸರ್ವಿಸಸ್ನ ಪ್ರಧಾನ ಹೂಡಿಕೆ ತಜ್ಞ ವಿ.ಕೆ.ವಿಜಯ ಕುಮಾರ್ ಅಭಿಪ್ರಾಯಪಟ್ಟಿದ್ದಾರೆ.
