ಹಾಸನ- ಸಹಕಾರ ಸಚಿವ ಕೆ.ಎನ್.ರಾಜಣ್ಣರವರ 75ನೇ ಜನ್ಮದಿನ ಅಮೃತ ಮಹೋತ್ಸವ ಹಾಗೂ ಅಭಿನಂದನಾ ಗ್ರಂಥ ಬಿಡುಗಡೆ ಕಾರ್ಯಕ್ರಮವನ್ನು ಜೂ.21 ರಂದು ಶನಿವಾರ ಬೆಳಗ್ಗೆ 11 ಗಂಟೆಗೆ ತುಮಕೂರು ಬಿ.ಹೆಚ್. ರಸ್ತೆಯ ಜೂನಿಯರ್ ಕಾಲೇಜು ಮೈದಾನದಲ್ಲಿ ಹಮ್ಮಿಕೊಂಡಿರುವುದಾಗಿ ಮಾದಿಗ ದಂಡೋರ ಜಿಲ್ಲಾಧ್ಯಕ್ಷ ಟಿ.ಆರ್. ವಿಜಯಕುಮಾರ್ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ಕಲ್ಪತರು ನಾಡು ತುಮಕೂರು ಜಿಲ್ಲೆಯ ರೈತರು ಸೇರಿದಂತೆ, ಸಾಮಾಜಿಕ, ಸಹಕಾರ ವಲಯದ ಸಮಗ್ರ ಅಭಿವೃದ್ಧಿಗೆ ಬದ್ಧತೆಯಿಂದ ತೊಡಗಿಸಿಕೊಂಡಿರುವ ನಾಯಕ, ಸಹಕಾರ ರಂಗದ ಪ್ರತಿಷ್ಠಿತ ‘ಸಹಕಾರ ರತ್ನ’ ಪುರಸ್ಕøತರು, ಕರ್ನಾಟಕ ಸರ್ಕಾರದ ಸಹಕಾರ ಸಚಿವ ಕೆ.ಎನ್. ರಾಜಣ್ಣನರವರು 75ನೇ ವರ್ಷಕ್ಕೆ ಕಾಲಿರಿಸಿದ್ದಾರೆ.
ವಿಧಾನ ಪರಿಷತ್ತಿನ ಸದಸ್ಯರಾಗಿ, ಪ್ರಸ್ತುತ ಎರಡನೇ ಅವಧಿಗೆ ಮಧುಗಿರಿ ವಿಧಾನಸಭಾ ಕ್ಷೇತ್ರದ ಶಾಸಕರೂ ಆಗಿರುವ ಕೆ.ಎನ್. ರಾಜಣ್ಣ ರವರು ಕರ್ನಾಟಕ ರಾಜ್ಯ ಸಹಕಾರ ಅಪೆಕ್ಸ್ ಬ್ಯಾಂಕಿನ ಅಧ್ಯಕ್ಷರಾಗಿ, ಹಾಲಿ ನಿರ್ದೇಶಕರಾಗಿ ಮತ್ತು ತುಮಕೂರು ಡಿಸಿಸಿ ಬ್ಯಾಂಕಿನಲ್ಲಿ ಕಳೆದ 3 ದಶಕಗಳಿಂದ ಅಧ್ಯಕ್ಷರಾಗಿ ಜಿಲ್ಲೆಯ ರೈತರ ಹಿತೈಷಿಯಾಗಿ ಅತ್ಯುತ್ತಮ ಮಾರ್ಗದರ್ಶನ ನೀಡುತ್ತಿದ್ದಾರೆ ಎಂದರು.
ನೇರ ನಡೆ ನುಡಿಯ ಕೆ.ಎನ್.ರಾಜಣ್ಣ ರವರು ಪಕ್ಷಾತೀತವಾಗಿ, ಜಾತ್ಯಾತೀತವಾಗಿ, ರೈತರ, ಅಬಲರ, ಶೋಷಿತರ ಹಾಗೂ ಎಲ್ಲಾ ಜಾತಿಯಲ್ಲಿರುವ ಬಡವರ ಏಳಿಗೆಗೆ ನಿರಂತರ ಶ್ರಮಿಸುತ್ತಿರುವ ಓರ್ವ ಸಹಕಾರಿ. ಇಂದಿರಾ ಗಾಂಧಿ, ದೇವರಾಜ ಅರಸು, ಬಂಗಾರಪ್ಪ ಮತ್ತು ಪ್ರಚಲಿತ ರಾಜಕಾರಣಿ ಸಿದ್ದರಾಮಯ್ಯ ಇವರುಗಳ ಆದರ್ಶದಂತೆ ಸಮಾಜ ಸೇವೆ ಹಾಗೂ ಗುಣಮಟ್ಟದ ವಿದ್ಯಾವಂತರನ್ನು ಮತ್ತು ಸಮಾಜದ ಬಗ್ಗೆ ಕಳಕಳಿ ಇರುವ ಯುವ ನಾಯಕರನ್ನು ಸೃಷ್ಟಿಸುವಲ್ಲಿ ಹೆಚ್ಚು ಶ್ರಮಿಸುತ್ತಿದ್ದಾರೆ. ಅನುಭವಿ ಸಹಕಾರಿ ಮುಖಂಡರಾಗಿ, ಪ್ರಸ್ತುತ ಸಿದ್ದರಾಮಯ್ಯರವರ ನೇತೃತ್ವದ ಸರ್ಕಾರದಲ್ಲಿ ಸಹಕಾರ ಸಚಿವರಾಗಿ ಇಲಾಖೆಯ, ಸಹಕಾರ ಕ್ಷೇತ್ರದ ಬಲವರ್ಧನೆಗೆ ತಮ್ಮ ದೂರದೃಷ್ಟಿ ಚಿಂತನೆಗಳೊಂದಿಗೆ ಹಲವು ಸಾಮಾಜಿಕ-ಆರ್ಥಿಕ ಬೆಳವಣಿಗೆಗೆ ಕಂಕಣ ಬದ್ಧರಾಗಿದ್ದಾರೆ ಎಂದು ಹೇಳಿದರು.
ಕೆ.ಎನ್. ರಾಜಣ್ಣರವರ ಕಳೆದ 50 ವರ್ಷಗಳ ಸಾಮಾಜಿಕ, ಸಹಕಾರ ಕ್ಷೇತ್ರಕ್ಕೆ ನೀಡಿದ ಕೊಡುಗೆಗಳನ್ನು ಗುರುತಿಸಿ, ಅವರ ಬದುಕಿನ ಸಾರ್ಥಕತೆಯ 75ನೇ ಜನ್ಮದಿನದ ಅಂಗವಾಗಿ ತುಮಕೂರು ಜಿಲ್ಲೆಯ ಆತ್ಮೀಯ ಗೆಳೆಯರು, ಅಭಿಮಾನಿಗಳು, ಹಿತೈಷಿಗಳು ಕೆ.ಎನ್. ರಾಜಣ್ಣ ರವರನ್ನು ಸಾರ್ವಜನಿಕವಾಗಿ ಗೌರವಿಸಿ, ಅಭಿನಂದಿಸಲು ತೀರ್ಮಾನಿಸಿ, “ಕೆ.ಎನ್.ಆರ್. ಅಭಿನಂದನಾ ಗ್ರಂಥ” ಬಿಡುಗಡೆಗೊಳಿಸಲು ಉತ್ಸುಕರಾಗಿದ್ದಾರೆ ಎಂದರು.
ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಗೃಹ ಸಚಿವ ಡಾ. ಜಿ.ಪರಮೇಶ್ವರ್, ಕೇಂದ್ರ ರೈಲ್ವೆ ಮತ್ತು ಜಲಶಕ್ತಿ ಖಾತೆ ಸಹಾಯಕ ಸಚಿವ ವಿ.ಸೋಮಣ್ಣ, ಜಿಲ್ಲೆಯು ಹಿರಿಯ ನಾಯಕರು ಸೇರಿದಂತೆ ಸಚಿವರು, ಶಾಸಕರು, ಸಹಕಾರಿ ಮುಖಂಡರುಗಳು, ಗಣ್ಯರುಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
ಅಂದು ನಡೆಯುವ ಸಮಾರಂಭಕ್ಕೆ ಅಧಿಕ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ಮನವಿ ಮಾಡಿದರು.
ಅಹಿಂದ ಚಳುವಳಿ ಜಂಟಿ ರಾಜ್ಯ ಸಂಚಾಲಕ ಜಗದೀಶ್ ಚೌಡಳ್ಳಿ, ಜೈಭೀಮ್ ಬ್ರಿಗೇಡ್ ಜಿಲ್ಲಾಧ್ಯಕ್ಷ ರಾಜೇಶ್, ವಾಲ್ಮೀಕಿ ಸಂಘದ ಜಿಲ್ಲಾಧ್ಯಕ್ಷ ಎನ್.ವೈ.ಶ್ರೀನಿವಾಸ್, ವಾಲ್ಮೀಕಿ ಸಮಾಜದ ನಾಯಕ ಶಿವಪ್ಪನಾಯಕ್ ಇತರರು ಉಪಸ್ಥಿತರಿದ್ದರು.
ಹೇಮಾವತಿ ಜಲಾಶಯ ಭರ್ತಿಯ ಅಂಚಿಗೆ: ನದಿಪಾತ್ರದ ಜನರಿಗೆ ಎಚ್ಚರಿಕೆ ಸೂಚನೆ

[…] […]