ಹಾಸನ- ಸರ್ಕಾರ ಹಾಸನ ಜಿಲ್ಲೆಯಲ್ಲಿ ಎರಡು ವರ್ಷಗಳ ಕಾಲ ಕರ್ತವ್ಯ ನಿರ್ವಹಿಸಲು ಅವಕಾಶ ಕಲ್ಪಿಸಿದೆ. ಜಿಲ್ಲಾ ಉಸ್ತುವಾರಿ ಸಚಿವರ ಮಾರ್ಗದರ್ಶನ ಹಾಗೂ ಜಿಲ್ಲೆಯ ಎಲ್ಲಾ ಶಾಸಕರುಗಳ ಸಹಕಾರದಿಂದ ಜಿಲ್ಲೆಯಲ್ಲಿ ಉತ್ತಮ ಕೆಲಸ ಮಾಡಲು ಸಾಧ್ಯವಾಗಿದ್ದು ಜಿಲ್ಲೆಯಲ್ಲಿ ಕರ್ತವ್ಯ ನಿರ್ವಹಿಸಿರುವುದು ತೃಪ್ತಿಕರವಾಗಿದೆ ಎಂದು ನಿರ್ಗಮಿತ ಜಿಲ್ಲಾಧಿಕಾರಿ ಸಿ.ಸತ್ಯಭಾಮ ಅವರು ತಿಳಿಸಿದ್ದಾರೆ.
ಜಿಲ್ಲಾಧಿಕಾರಿಗಳ ಕಚೇರಿಯಲ್ಲಿಂದು ಬೀಳ್ಕೊಡುಗೆ ಸ್ವೀಕರಿಸಿ ಮಾತನಾಡಿದ ಅವರು ಜಿಲ್ಲೆಯ ಏಳಿಗೆಗಾಗಿ ಹಾಗೂ ಜನರ ಉದ್ಧಾರಕ್ಕೊಸ್ಕರ ಕೆಲಸವನ್ನು ಹಂಚಿಕೆ ಮಾಡುವುದರ ಮೂಲಕ ಹಗಲು ರಾತ್ರಿ ಎನ್ನದೆ ಗರಿಷ್ಠ ಮಟ್ಟದಲ್ಲಿ ಕೆಲಸ ಮಾಡಿರುವುದು ತೃಪ್ತಿಕರವಾಗಿದೆ ಎಂದರಲ್ಲದೆ ಹಾಸನ ಜನತೆ ಹೃದಯವಂತರು ಹಾಗೂ ಸಂಘ ಸಂಸ್ಥೆಗಳೊಂದಿಗೂ ಉತ್ತಮ ಒಡನಾಟವಿತ್ತು ಎಂದು ಸ್ಮರಿಸಿದರು.
ಸಾರ್ವಜನಿಕರು ಜಿಲ್ಲಾಧಿಕಾರಿಗಳ ನ್ಯಾಯಾಲಯಕ್ಕೆ ಅಲೆಯುವುದನ್ನು ತಪ್ಪಿಸುವ ನಿಟ್ಟಿನಲ್ಲಿ ಒಂದು ಸಾವಿರ ಕಂದಾಯ ಮೇಲ್ಮನವಿಗಳು ಹಾಗೂ ಐದು ವರ್ಷ ಮೇಲ್ಮಟ್ಟ 487 ಪ್ರಕರಣಗಳನ್ನು ಇತ್ಯರ್ಥ ಪಡಿಸಲಾಗಿದೆ ಎಂದು ತಿಳಿಸಿದರು.
ಹಾಸನ ಜಿಲ್ಲೆ ಭೂಮಿಯಲ್ಲಿ ಮೊದಲ ಸ್ಥಾನದಲ್ಲಿದ್ದೇವೆ ಇದಕ್ಕೂ ಮುನ್ನ 29ನೇ ಸ್ಥಾನದಲ್ಲಿತ್ತು, ಸಾರ್ವಜನಿಕರ ಹಿತಕ್ಕಾಗಿ ಪೌತಿಖಾತೆ ಆಂದೋಲನ ನಡೆಸಲಾಗುತ್ತಿದೆ. ಆಧಾರ್ ಸೀಡಿಂಗ್, ಇ-ಆಫೀಸ್ ಹೀಗೆ ವಿವಿಧ ಸ್ತರಗಳಲ್ಲಿ ಎಲ್ಲರೂ ಒಂದು ತಂಡವಾಗಿ ಕೆಲಸ ಮಾಡುವುದರ ಮೂಲಕ ಮೊದಲ ಸ್ಥಾನ ಪಡೆಯಲು ಸಾಧ್ಯವಾಗಿದೆ ಈ ಸ್ಥಾನವನ್ನು ಹೀಗೆ ಕಾಯ್ದುಕೊಳ್ಳುವಂತೆ ತಿಳಿಸಿದರು.
ಉತ್ತಮ ಜಿಲ್ಲಾಧಿಕಾರಿ ಹಾಗೂ ಅತ್ಯುತ್ತಮ ಕಂದಾಯಅಧಿಕಾರಿ ಎಂಬ ಪ್ರಶಸ್ತಿ ಪಡೆಯಲು ಬಹಳ ಶ್ರಮ ಪಟ್ಟಿದ್ದು, ಉಪ ವಿಭಾಗಾಧಿಕಾರಿ, ತಹಸೀಲ್ದಾರ್, ಭೂ ದಾಖಲೆಗಳ ಉಪ ನಿರ್ದೇಶಕರು ಹಾಗೂ ಸಹಾಯಕ ಭೂ ದಾಖಲೆಗಳ ಅಧಿಕಾರಿಗಳೆಲ್ಲರಿಂದ ಹಾಸನ ಜಿಲ್ಲೆಗೆ ಸಮಗ್ರ ಪ್ರಶಸ್ತಿ ಲಭಿಸಿದೆ ಎಂದರಲ್ಲದೆ, ಕಂದಾಯ ಒಂದು ತಂಡವಾಗಿ ಕಳೆದ 40-50 ವರ್ಷದ ಹಳೆಯದಾದ 90 ಸಾವಿರ ರೆಕಾರ್ಡ್ ತೆಗೆದು 1-5 ಮಾಡಲಾಗಿದ್ದು, 6 ಸಾವಿರ ಆರ್.ಟಿ.ಸಿ ಮಾಡಲಾಗಿದೆ ಎಂದು ತಿಳಿಸಿದರು.
ಸರ್ಕಾರ ನೌಕರನಿಗೆ 24×7 ಸರ್ಕಾರಿ ನೌಕರ ಎಂದು ವೇತನ ನೀಡುತ್ತದೆ ಇದಕ್ಕೆ ಚ್ಯುತಿ ಬರದಂತೆ ನ್ಯಾಯ ನಿಷ್ಠುರವಾಗಿ, ಬದ್ಧತೆ, ಪ್ರಮಾಣಿಕತೆಯಿಂದ “ಸರ್ಕಾರಿ ಕೆಲಸ ನನ್ನ ಕೆಲಸ” ಎಂಬ ಬಾವನೆಯಿಂದ ಕರ್ತವ್ಯ ನಿರ್ವಹಿಸಿದಲ್ಲಿ ಯಶಸ್ಸು ಕಾಣಲು ಸಾಧ್ಯ ಎಂದರು.
ನನಗೆ ದೇವರ ಮೇಲೆ ಅಪಾರವಾದ ನಂಬಿಕೆ ಇದೆ. ದೇವರು ಅತ್ಯುತ್ತಮವಾದದ್ದನ್ನು ನೀಡುತ್ತಾನೆ. ಹಾಸನಾಂಬ ದೇವಿ ಜಾತ್ರ ಮಹೋತ್ಸದಲ್ಲಿ 14 ಕೋಟಿ ಆದಾಯ ಸಂಗ್ರಹಣೆಯಾಗಿರುವುದು ಸಾರ್ವಕಾಲಿಕ ದಾಖಲೆ. ದೇಶದ ಭೂಪಟದಲ್ಲಿ ಹಾಸನಾಂಬ ದೇವಿಯ ಹಿರಿಮೆಯನ್ನು ಪ್ರಚುರ ಪಡಿಸಲಾಗಿದೆ. ಈ ಬಾರಿ ಹತ್ತು ದೇಶದಿಂದ ದೇವಿಯ ದರ್ಶನಕ್ಕೆ ಟಿಕೆಟ್ ಕಾಯ್ದಿರಿಸಿದ್ದರು ಎಂದು ತಿಳಿಸಿದರು.
ಜಿಲ್ಲೆಯಲ್ಲಿರುವ ಧಾರ್ಮಿಕದತ್ತಿ ಇಲಾಖೆಗೆ ಒಳಪಡುವ 2455 ದೇವಾಸ್ಥಾನಗಳ ಆಸ್ತಿ ಸಂರಕ್ಷಣೆ ಮಾಡಲಾಗಿದೆ. ನಗರದ ಚನ್ನಕೇಶವ ದೇವಾಲಯ ಹಾಗೂ 130 ಶಾಲೆಗಳ ದುರಸ್ಥಿ ಮಾಡಿಸಲಾಗಿದೆ. 300ಕ್ಕೂ ಹೆಚ್ಚು ಬೆಂಚ್ ಮತ್ತು ಡೆಸ್ಕ್ಗಳನ್ನು ದಾನಿಗಳಿಂದ ಪಡೆದು ಶಾಲೆಗಳಿಗೆ ಒದಗಿಸಲಾಗಿದೆ ಎಂದ ಅವರು ಪರಿಶ್ರಮದಿಂದ ಕೆಲಸ ಮಾಡುವ ಮೂಲಕ ಇತರರಿಗೆ ಮಾದರಿಯಾಗಬೇಕು ಎಂದ ಅವರು ನನ್ನಲ್ಲಿರುವ ಉತ್ತಮವಾದುದ್ದನ್ನು ತಾವು ಅಳವಡಿಸಿಕೊಂಡು ತಮ್ಮ ಕಾರ್ಯವ್ಯಾಪ್ತಿಯಲ್ಲಿ ಬಳಕೆ ಮಾಡುವ ಮೂಲಕ ಇತರರಿಗೂ ಪ್ರೇರಣೆ ನೀಡಿ ಎಂದು ತಿಳಿಸಿದರು.
ವಿಮಾನ ನಿಲ್ದಾಣದಲ್ಲಿನ ಸಮಸ್ಯೆಗಳನ್ನು ಬಗೆಹರಿಸಿ ಕಾಂಪೌಂಡ್ ಹಾಕಿಸಲಾಗಿದೆ. ಎತ್ತಿನಹೊಳೆ ಯೋಜನೆಯ ಬಹುತೇಕ ಕೆಲಸ ಪೂರ್ಣಗೊಂಡಿದೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಹಣಾಧಿಕಾರಿ, ಜಿಲ್ಲಾ ಮಟ್ಟದ ಎಲ್ಲಾ ಅಧಿಕಾರಿಗಳು, ಜಿಲ್ಲಾಧಿಕಾರಿಗಳ ಕಚೇರಿಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳು, ತಮ್ಮಕಚೇರಿಯ ಆಪ್ತ ಸಹಾಯಕರು, ರಕ್ಷಣಾ ಸಿಬ್ಬಂದಿ, ವಾಹನ ಚಾಲಕರು ತಮ್ಮ ಕರ್ತವ್ಯಕ್ಕೆ ನೀಡಿದ ಸಹಕಾರವನ್ನು ಸ್ಮರಿಸಿದರಲ್ಲದೆ, ಡಿಡಿಎಲ್ಆರ್ಅವರ ಸಹಕಾರ ಅವಿಸ್ಮರಣೀಯ ಎಂದರು.
ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಹಣಾಧಿಕಾರಿ ಬಿ.ಆರ್ ಪೂರ್ಣಿಮಾ ಮಾತನಾಡಿ ಕಂದಾಯ ಮತ್ತು ಜಿಲ್ಲಾ ಪಂಚಾಯತ್ ಸಹಯೋಗದಲ್ಲಿ ಉತ್ತಮವಾಗಿ ಕೆಲಸ ಮಾಡಲಾಗಿದೆ. ಹಾಸನ ಜಿಲ್ಲೆಯಲ್ಲಿ ಮಹಿಳಾ ಅಧಿಕಾರಿಗಳು ಆಡಳಿತದ ಚುಕ್ಕಾಣಿ ಹಿಡಿದು ಬಹಳಷ್ಟು ಒಳ್ಳೆಯ ಕೆಲಸ ಮಾಡಿದ್ದಾರೆ.
ಕಂದಾಯ ಇಲಾಖೆಯ ಅಭಿವೃದ್ಧಿ ಪಥದಲ್ಲಿ ಮುನ್ನಡೆಸಲು ತಂಡದ ನಾಯಕ ಬಹುಮುಖ್ಯ ಈ ನಿಟ್ಟಿನಲ್ಲಿ ಸತ್ಯಭಾಮ ಅವರು ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ಸಲಹೆ, ಸೂಚನೆ, ಮಾರ್ಗದರ್ಶನ ನೀಡುವ ಮೂಲಕ ಯಶಸ್ವಿ ಸಾಧಿಸಿದ್ದಾರೆ ಎಂದರಲ್ಲದೆ ಮುಂದಿನ ದಿನಗಳ ಕೆಲಸದಲ್ಲಿಯೂ ಹೀಗೆ ಯಶಸ್ಸು ಸಿಗಲಿ ಎಂದು ಶುಭ ಹಾರೈಸಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಹಮ್ಮದ್ ಸುಜೀತಾ ಮಾತನಾಡಿ ಜಿಲ್ಲಾಧಿಕಾರಿಯವರು ಪೊಲೀಸ್ ಇಲಾಖೆಗೆ ತುಂಬಾ ಸಹಕಾರ ನೀಡಿದ್ದಾರೆ. ಕೋಲಾರ ಜಿಲ್ಲೆಯಲ್ಲಿ ತಾವು ಒಟ್ಟಿಗೆ ಕೆಲಸ ಮಾಡಿರುವುದನ್ನು ಸ್ಮರಿಸಿದ ಅವರು ಸಮಗ್ರ ಶಿಕ್ಷಣ ಯೋಜನಾ ನಿರ್ದೇಶಕರ ಹುದ್ದೆಗೆ ತೆರಳಿದ ನಿರ್ಗಮಿತ ಜಿಲ್ಲಾಧಿಕಾರಿ ಅವರಿಗೆ ಶುಭಹಾರೈಸಿದರು.
ಅಪರ ಜಿಲ್ಲಾಧಿಕಾರಿ ಕೆ.ಟಿ ಶಾಂತಲ, ಉಪ ವಿಭಾಗಾಧಿಕಾರಿಗಳಾದ ಮಾರುತಿ, ಶೃತಿ, ಉಪ ಅರಣ್ಯ ಸಂರಕ್ಷಣಾಧಿಕಾರಿ ಸೌರಭ್ಕುಮಾರ್, ಭೂ ದಾಖಲೆಗಳ ಉಪ ನಿರ್ದೇಶಕ ಸುಜಯ್ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಹಾಜರಿದ್ದರು.
ನಿರ್ಗಮಿತ ಡಿಸಿ ಸಿ.ಸತ್ಯಭಾಮ ಅವರು ಡಿಸಿ ಕಚೇರಿಯಿಂದ ಬೆಂಗಳೂರಿಗೆ ತೆರಳುವಾಗ ಕೆಲ ಸಿಬ್ಬಂದಿ ಕಣ್ಣೀರು ಹಾಕಿದರು. ಈ ದೃಶ್ಯಕಂಡು ಭಾವುಕರಾದ ಸತ್ಯಭಾಮ ಸಹ ಭಾರದ ಹೃದಯದಿಂದ ಸಿಬ್ಬಂದಿಯನ್ನು ಸಂತೈಸಿ ತೆರಳಿದರು. ಈ ವೇಳೆ ನೆರೆದಿದ್ದ ವಿವಿಧ ಸಂಘಟನೆಗಳ ಮುಖಂಡರು, ಡಿಸಿ ಕಚೇರಿಯ ಸಿಬ್ಬಂದಿಯ ಕಣ್ಣಾಲಿ ಕೂಡ ತೇವವಾದವು. ಎಲ್ಲರೂ ಭಾರವಾದ ಹೃದಯದಿಂದಲೇ ಸತ್ಯಭಾಮ ಅವರನ್ನು ಜಿಲ್ಲೆಯಿಂದ ಬೀಳ್ಕೊಟ್ಟರು
ತುಮಕೂರಿನಲ್ಲಿ ಕೆ.ಎನ್. ರಾಜಣ್ಣರವರ 75ನೇ ಅಮೃತ ಮಹೋತ್ಸವ ಹಾಗೂ ಅಭಿನಂದನಾ ಗ್ರಂಥ ಬಿಡುಗಡೆ

[…] ಹಾಸನ-ಜಿಲ್ಲೆ ಅಭಿವೃದ್ಧಿಗೆ ಶ್ರಮಿಸಿದ ಡಿಸ… […]
[…] ಹಾಸನ-ಜಿಲ್ಲೆ ಅಭಿವೃದ್ಧಿಗೆ ಶ್ರಮಿಸಿದ ಡಿಸ… […]