ಕೆ.ಆರ್.ಪೇಟೆ,ಸೆ.23: ಮಾಜಿ ಸಂಸದ ಪ್ರತಾಪ್ ಸಿಂಹ ಅವರು ಟೀ.ನರಸೀಪುರದಲ್ಲಿ ಗಣೇಶೋತ್ಸವ ಶೋಭಾಯಾತ್ರೆಯ ಸಮಾರಂಭದಲ್ಲಿ ನೀಲಿ ಶಾಲು ಮತ್ತು ದಲಿತ ಸಂಘಟನೆಗಳನ್ನು ಕುರಿತು ಹಗುರವಾಗಿ ಮಾತನಾಡಿರುವ ಹೇಳಿಕೆಗೆ ತಾಲ್ಲೂಕು ದಲಿತ ಪರ ಸಂಘಟನೆಗಳ ಒಕ್ಕೂಟವು ತೀವ್ರವಾಗಿ ಖಂಡಿಸಿದೆ.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ತಾಲ್ಲೂಕು ದಲಿತ ಪರ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ರಾಜಯ್ಯ, ರಾಜ್ಯ ಛಲವಾದಿ ಮಹಾಸಭಾ ರಾಜ್ಯ ಪರಿಷತ್ ಸದಸ್ಯ ಡಿ.ಪ್ರೇಮಕುಮಾರ್, ಛಲವಾದಿ ಮಹಾಸಭಾ ತಾಲ್ಲೂಕು ಅಧ್ಯಕ್ಷ ಊಚನಹಳ್ಳಿ ನಟರಾಜ್, ಗೌರವಾಧ್ಯಕ್ಷ ಸೋಮಸುಂದರ್, ಛಲವಾದಿ ಮಹಾಸಭಾ ಮಾಜಿ ಅಧ್ಯಕ್ಷ ಮುದುಗೆರೆ ಮಹೇಂದ್ರ, ಜಿಲ್ಲಾ ದಲಿತ ಸೇನೆ ಅಧ್ಯಕ್ಷ ಎನ್.ಜೆ.ಮಂಜು, ವಕೀಲ ಜಿ.ಜೆ.ಲೋಕೇಶ್, ತಾಲ್ಲೂಕು ದಲಿತ ಸೇನೆ ಅಧ್ಯಕ್ಷ ಚೌಡೇನಹಳ್ಳಿ ದೇವರಾಜು, ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಘಟನಾ ಸಂಚಾಲಕ ಬಂಡಿಹೊಳೆ ರಮೇಶ್, ದಲಿತ ಮುಖಂಡರಾದ ಬಂಡಿಹೊಳೆ ಕೃಷ್ಣಮೂರ್ತಿ, ಕಿಕ್ಕೇರಿ ಹೋಬಳಿ ಛಲವಾದಿ ಮಹಾಸಭಾ ಅಧ್ಯಕ್ಷ ಕಳ್ಳನಕೆರೆ ಶಂಕರ್, ತೆಂಗಿನಘಟ್ಟ ಮಹೇಶ್ ಮತ್ತಿತರರು ಮೈಸೂರು ಜಿಲ್ಲೆಯ ಟಿ.ನರಸೀಪುರದಲ್ಲಿ ನಡೆದ ಗಣೇಶೋತ್ಸವ ಶೋಭಾಯಾತ್ರೆಯ ಭಾಷಣದಲ್ಲಿ ಪ್ರತಾಪ್ ಸಿಂಹ ಅವರು ನೀವು ಕೇವಲ ನೀಲಿ ಶಾಲು ಹೊದ್ದು ಉದರ ನಿಮಿತ್ತವಾಗಿ ಬಂದು ನಿಲ್ಲುತ್ತೀರಿ, ನಿಮಗೆ ಅಂಬೇಡ್ಕರ್ ಅವರ ಬಗ್ಗೆ ಏನು ಗೊತ್ತಿಲ್ಲ” ಎಂದು ದಲಿತ ಕಾರ್ಯಕರ್ತರನ್ನು ಸಾರ್ವಜನಿಕವಾಗಿ ನಿಂದಿಸಿದ್ದಾರೆ ಇದು ಖಂಡನೀಯವಾದುದು. ನೀಲಿ ಶಾಲು ದಲಿತ ಸಮುದಾಯದ ಸಾಂಸ್ಕೃತಿಕ ಅಸ್ಮಿತೆಯಾಗಿದೆ. ಇದು ನೀಲಿ ಶಾಲು ಹಾಗೂ ಡಾ.ಬಿ.ಆರ್.ಅಂಬೇಡ್ಕರ್ ಸಂಘಟನೆಗಳಿಗೆ ಅವಮಾನ ಮಾಡಲಾಗಿದೆ ಎಂದು ಆರೋಪಿಸಿದರು.
ಕೂಡಲೇ ಮಾಜಿ ಸಂಸದ ಪ್ರತಾಪ್ ಸಿಂಹ ಅವರು ಬಹಿರಂಗ ಕ್ಷಮೆ ಕೋರಬೇಕು ಇಲ್ಲದಿದ್ದರೆ ರಾಜ್ಯಾಧ್ಯಂತ ದಲಿತ ಪರ ಸಂಘಟನೆಗಳು ಹೋರಾಟವನ್ನು ತೀವ್ರಗೊಳಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು. ಪ್ರತಾಪ್ ಸಿಂಹ ಅವರು ಟಿ.ನರಸೀಪುರ ಘಟನೆಯಲ್ಲಿ ಮೂಗು ತೂರಿಸುವ ಮೂಲಕ ತಮ್ಮ ಪಕ್ಷದ ಇಮೇಜ್ ಹೆಚ್ಚಿಸಲು ಪ್ರಯತ್ನಿಸಿದರು. ಆದರೆ ದಲಿತ ಸಂಘಟನೆಗಳ ಬಗ್ಗೆ ಹಗುರವಾಗಿ ಮಾತನಾಡುವ ಮೂಲಕ ತಾವೊಬ್ಬ ದಲಿತ ವಿರೋಧಿ ಎಂಬುದನ್ನು ತೋರಿಸಿದ್ದಾರೆ. ಕೂಡಲೇ ದಲಿತರ ಸಂಘಟನೆಗಳ ಬಗ್ಗೆ ಹಾಗೂ ದಲಿತರ ಆಸ್ಮಿತೆಯಾಗಿರುವ ನೀಲು ಶಾಲು ಬಗ್ಗೆ ಮಾತನಾಡಿರುವ ಕೀಳು ಮಾತಿಗೆ ಕೂಡಲೇ ಬಹಿರಂಗ ಕ್ಷಮೆ ಕೇಳಬೇಕು ಎಂದು ರಾಜಯ್ಯ ಮತ್ತು ಡಿ.ಪ್ರೇಮ್ ಕುಮಾರ್ ಒತ್ತಾಯ ಮಾಡಿದರು.
*ವೇದಮೂರ್ತಿಗೆ ಜಾಮೀನು ನಿರಾಕರಣೆ ಸ್ವಾಗತಾರ್ಹ*: ಸೆ.05ರಂದು ಬುದ್ದ ಬಸವ, ಅಂಬೇಡ್ಕರ್ ಅವರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿ ಫೇಸ್ಬುಕ್ ನಲ್ಲಿ ವಿಡಿಯೋ ಹಾಕಿದ್ದ ದೊಡ್ಡಯಾಚೇನಹಳ್ಳಿ ವೇದಮೂರ್ತಿಗೆ ಮಂಡ್ಯ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಆತನ ಜಾಮೀನು ಅರ್ಜಿ ತಿರಸ್ಕರಿಸಿ ಜಾಮೀನು ನಿರಾಕರಿಸಿ ಮತ್ತೆ ಜೈಲಿನಲ್ಲಿಯೇ ಕೊಳೆಯುವಂತೆ ಮಾಡಿರುವುದನ್ನು ದಲಿತ ಮುಖಂಡರಾದ ಜಿ.ಜೆ.ಲೋಕೇಶ್, ಊಚನಹಳ್ಳಿ ನಟರಾಜ್, ಡಿ.ಪ್ರೇಮಕುಮಾರ್ ಇತರರು ಸ್ವಾಗತಿಸಿದರು.
ರಾಷ್ಟç ನಾಯಕರನ್ನು ತೆಗಳಿದರೆ ಯಾರಿಗೂ ತಕ್ಕ ಶಿಕ್ಷೆ ತಪ್ಪಿದ್ದಲ್ಲ ಎಂಬುದು ಈ ಪ್ರಕರಣದಿಂದ ಸಾಬೀತಾಗಿದೆ. ವೇದಮೂರ್ತಿಗೆ ಕನಿಷ್ಠ 1ವರ್ಷ ಕಠಿಣ ಶಿಕ್ಷೆಯಾಗಬೇಕು. ಅಲ್ಲದೇ ರಾಜ್ಯದಿಂದ ಗಡಿಪಾರು ಶಿಕ್ಷೆಯನ್ನು ಮಾನ್ಯ ನ್ಯಾಯಾಲಯವು ನೀಡಬೇಕು ಎಂಬುದು ಅಂಬೇಡ್ಕರ್ ವಾದಿಗಳಾದ ನಮ್ಮೆಲ್ಲರ ಆಶಯವಾಗಿದೆ ಎಂದರು.
-ಶ್ರೀನಿವಾಸ್ ಆರ್.
