ಕೆ.ಆರ್.ಪೇಟೆ: ಕಬ್ಬು ಬೆಳೆಗಾರರಿಗೆ 2026-27ನೇ ಸಾಲಿನ ಎಫ್ಆರ್ಪಿ ದರದ ಜೊತೆಗೆ ಪ್ರತಿ ಟನ್ಗೆ ಹೆಚ್ಚುವರಿಯಾಗಿ ₹1,350 ನೀಡಬೇಕು. ಒಂದು ವಾರದೊಳಗೆ ಬೇಡಿಕೆ ಈಡೇರಿಸದಿದ್ದರೆ ನವೆಂಬರ್ 25ರಿಂದ ಹೇಮಗಿರಿ ಸಕ್ಕರೆ ಕಾರ್ಖಾನೆಯ ಸಕ್ಕರೆ ಮಾರಾಟಕ್ಕೆ ತಡೆವೊಡ್ಡುವ ಚಳವಳಿ ನಡೆಸಲಾಗುವುದು ಎಂದು ಕೃಷ್ಣರಾಜಪೇಟೆ ತಾಲ್ಲೂಕು ಕಬ್ಬು ಬೆಳೆಗಾರರ ಸಂಘ ಎಚ್ಚರಿಕೆ ನೀಡಿದೆ.
ಈ ಸಂಬಂಧ ತಾಲ್ಲೂಕು ಕಬ್ಬು ಬೆಳೆಗಾರರ ಸಂಘದ ಪದಾಧಿಕಾರಿಗಳು ಹೇಮಗಿರಿ ಸಕ್ಕರೆ ಕಾರ್ಖಾನೆಯ ವ್ಯವಸ್ಥಾಪಕ ನಿರ್ದೇಶಕರಿಗೆ ಮನವಿ ಪತ್ರ ಸಲ್ಲಿಸಿ, ರೈತರ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿದರು.

2026-27ನೇ ಸಾಲಿನ ಕಬ್ಬಿನ ಎಫ್ಆರ್ಪಿ ದರ ಪ್ರತಿ ಟನ್ಗೆ ₹3,383 ನಿಗದಿಯಾಗಿದೆ. ಆದರೆ ಕಡಿಮೆ ಮಳೆ, ಕಬ್ಬಿನ ಇಳುವರಿ ಕುಸಿತ, ರಸಗೊಬ್ಬರಗಳ ಬೆಲೆ ಏರಿಕೆ, ಕಟಾವು ಮತ್ತು ಸಾಗಾಣಿಕೆ ವೆಚ್ಚ ಹಾಗೂ ಕೃಷಿ ಕೂಲಿ ಕಾರ್ಮಿಕರ ಸಂಬಳ ಹೆಚ್ಚಳದಿಂದ ರೈತರು ತೀವ್ರ ನಷ್ಟ ಅನುಭವಿಸುತ್ತಿದ್ದಾರೆ. ಕೃಷ್ಣರಾಜಪೇಟೆ ತಾಲ್ಲೂಕು ಬರಪೀಡಿತ ಪ್ರದೇಶವೆಂದು ಘೋಷಣೆಯಾಗಿರುವುದರಿಂದ ರೈತರ ಸಂಕಷ್ಟ ಮತ್ತಷ್ಟು ಹೆಚ್ಚಾಗಿದೆ ಎಂದು ಸಂಘದ ಪದಾಧಿಕಾರಿಗಳು ಮನವಿಯಲ್ಲಿ ತಿಳಿಸಿದ್ದಾರೆ.
ಉತ್ತರ ಕರ್ನಾಟಕದ ಬೆಳಗಾವಿ, ಬಾಗಲಕೋಟೆ, ಬೀದರ್ ಸೇರಿದಂತೆ ಹಲವು ಜಿಲ್ಲೆಗಳ ಸಕ್ಕರೆ ಕಾರ್ಖಾನೆಗಳು ಎಫ್ಆರ್ಪಿ ದರಕ್ಕಿಂತ ಹೆಚ್ಚುವರಿ ಹಣ ಘೋಷಿಸಿವೆ. ಅದೇ ಮಾದರಿಯಲ್ಲಿ ಹೇಮಗಿರಿ ಸಕ್ಕರೆ ಕಾರ್ಖಾನೆಯೂ ಪ್ರತಿ ಟನ್ಗೆ ₹1,350 ಹೆಚ್ಚುವರಿ ದರ ನೀಡಬೇಕು. ಅಲ್ಲದೆ, ಸಕ್ಕರೆಯನ್ನು ಪ್ರತಿ ಕೆ.ಜಿ.ಗೆ ₹50ಕ್ಕಿಂತ ಹೆಚ್ಚಿನ ದರದಲ್ಲಿ ಮಾರಾಟ ಮಾಡಿದರೆ ಅದರಿಂದ ಬರುವ ಲಾಭಾಂಶದಲ್ಲಿ ಶೇ.75ರಷ್ಟು ಪಾಲನ್ನು ರೈತರಿಗೆ ನೀಡಬೇಕು ಎಂದು ಸಂಘ ಒತ್ತಾಯಿಸಿದೆ.

₹50 ಪ್ರೋತ್ಸಾಹಧನದ ಬಾಕಿ ಪಾವತಿಗೂ ಆಗ್ರಹ
2025-26ನೇ ಸಾಲಿನಲ್ಲಿ ಸರ್ಕಾರ ಘೋಷಿಸಿದ್ದ ಪ್ರತಿ ಟನ್ ಕಬ್ಬಿಗೆ ₹100 ಪ್ರೋತ್ಸಾಹಧನದಲ್ಲಿ ಸರ್ಕಾರ ತನ್ನ ಪಾಲಿನ ₹50 ಪಾವತಿಸಿದೆ. ಆದರೆ ಕಾರ್ಖಾನೆ ಮಾಲೀಕರು ತಮ್ಮ ಪಾಲಿನ ₹50 ಪಾವತಿಸದೆ ನ್ಯಾಯಾಲಯದ ಮೊರೆ ಹೋಗಿ ತಡೆಯಾಜ್ಞೆ ತಂದಿದ್ದಾರೆ ಎಂದು ಸಂಘ ಆರೋಪಿಸಿದೆ. ಸಂಬಂಧಪಟ್ಟ ಪ್ರಕರಣವನ್ನು ಹಿಂಪಡೆದು ರೈತರಿಗೆ ಬಾಕಿ ಇರುವ ಪ್ರೋತ್ಸಾಹಧನವನ್ನು ಪಾವತಿಸಬೇಕು ಎಂದು ಆಗ್ರಹಿಸಿದೆ.
ಈ ಎರಡೂ ಬೇಡಿಕೆಗಳು ಈಡೇರುವವರೆಗೂ ಹೋರಾಟ ಹಿಂಪಡೆಯುವುದಿಲ್ಲ. ರೈತರ ಬೇಡಿಕೆಗಳಿಗೆ ಸ್ಪಂದಿಸದಿದ್ದರೆ ಮುಂದಿನ ಹಂಗಾಮಿನಲ್ಲಿ ಕಾರ್ಖಾನೆಗೆ ಕಬ್ಬು ಸರಬರಾಜು ಮಾಡದಂತೆ ಬೆಳೆಗಾರರಿಗೆ ಕರೆ ನೀಡಲಾಗುವುದು. ರೈತರು ತಮ್ಮ ಆಯ್ಕೆಯಂತೆ ಹೆಚ್ಚಿನ ದರ ನೀಡುವ ಇತರೆ ಕಾರ್ಖಾನೆಗಳಿಗೆ ಕಬ್ಬು ಪೂರೈಸಲಿದ್ದಾರೆ ಎಂದು ಸಂಘದ ಪದಾಧಿಕಾರಿಗಳು ಎಚ್ಚರಿಕೆ ನೀಡಿದರು.

ತಾಲ್ಲೂಕು ತಹಶೀಲ್ದಾರ್ ಹಾಗೂ ಜಿಲ್ಲಾಧಿಕಾರಿಗಳು ಕೂಡಲೇ ಮಧ್ಯಪ್ರವೇಶಿಸಿ ಕಬ್ಬು ಬೆಳೆಗಾರರಿಗೆ ನ್ಯಾಯಯುತ ಬೆಲೆ ದೊರಕಿಸಿಕೊಡಬೇಕು ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ತಾಲ್ಲೂಕು ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕಾರಿಗನಹಳ್ಳಿ ಕುಮಾರ್, ಕಾರ್ಯದರ್ಶಿ ಬೋರಾಪುರ ಎಸ್.ಬಿ. ಮಂಜುನಾಥ್, ಖಜಾಂಚಿ ಕಾಯಿ ಮಂಜೇಗೌಡ, ನಿರ್ದೇಶಕರಾದ ವಡಕಹಳ್ಳಿ ಮಂಜೇಗೌಡ, ಚಿನ್ನೇನಹಳ್ಳಿ ದೇವರಾಜು, ಬೀರುವಳ್ಳಿ ಕುಮಾರ್, ಎಂ.ಸಿ. ರಾಮೇಗೌಡ, ಬಿ.ವಿ. ನಾಗೇಶ್, ದೊಡ್ಡತಾರಹಳ್ಳಿ ವೇಣು, ಚಿಕ್ಕತಾರಹಳ್ಳಿ ಮಧು, ಅಕ್ಕಿಹೆಬ್ಬಾಳು ಭೋಜನಾಯಕ್, ಮೋದೂರು ಮಂಜುನಾಥ್ ಸೇರಿದಂತೆ ಹಲವರು ಭಾಗವಹಿಸಿದ್ದರು.
ಕರ್ನಾಟಕ ರಾಜ್ಯ ರೈತಪರ ಹೋರಾಟಗಾರರ ಸಂಘದ ಜಿಲ್ಲಾ ಅಧ್ಯಕ್ಷ ಚಿಕ್ಕಳಲೆ ಮಂಜೇಗೌಡ, ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ಶಾರದಮ್ಮ, ಪ್ರಧಾನ ಕಾರ್ಯದರ್ಶಿ ಚಿಕ್ಕಳಲೆ ಉಮೇಶ್, ಕಾರ್ಯದರ್ಶಿ ರಾಘವೇಂದ್ರ, ಜಾನಕಮ್ಮ ಹಾಗೂ ಸಂಚಾಲಕ ಚಂದ್ರು ಉಪಸ್ಥಿತರಿದ್ದರು.
ಪ್ರತಿಭಟನೆಯ ಬಳಿಕ ಹೇಮಗಿರಿ ಸಕ್ಕರೆ ಕಾರ್ಖಾನೆಯ ವರದರಾಜನ್, ಹಿರಿಯ ಕಬ್ಬು ಅಭಿವೃದ್ಧಿ ಅಧಿಕಾರಿ ದತ್ತಾತ್ರೇಯ ಹಾಗೂ ರವಿಚಂದ್ರನ್ ಅವರು ರೈತರ ಮನವಿ ಸ್ವೀಕರಿಸಿ, ಆಡಳಿತ ಮಂಡಳಿಯ ಗಮನಕ್ಕೆ ತಂದು ಬೇಡಿಕೆಗಳನ್ನು ಈಡೇರಿಸಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಭರವಸೆ ನೀಡಿದರು.
– ಶ್ರೀನಿವಾಸ್ ಆರ್.
