ತುಮಕೂರು: ಪತ್ರಿಕಾ ಕ್ಷೇತ್ರಕ್ಕೆ ಬಂದವರು ಕೇವಲ ಹೆಸರಿಗೆ ಸೀಮಿತವಾಗಬಾರದು. ಸಮಾಜದ ಒಳಿತಿಗಾಗಿ ಪತ್ರಿಕೋದ್ಯಮದ ಮೂಲಕ ಅಪಾರ ಕೊಡುಗೆ ನೀಡಬೇಕು. ಸತ್ಯ ಮತ್ತು ನ್ಯಾಯದ ಪರವಾಗಿ ನಿಂತು ವೃತ್ತಿಧರ್ಮವನ್ನು ಎತ್ತಿಹಿಡಿಯಬೇಕು ಎಂದು ಸಮಾಜಸೇವಕ ಹಾಗೂ ಜೆಡಿಎಸ್ ಮುಖಂಡ ಪಿ.ಎನ್.ಕೆ. ಕೃಷ್ಣಮೂರ್ತಿ ಕರೆ ನೀಡಿದರು.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘಟನೆಯ ತುಮಕೂರು ಜಿಲ್ಲಾ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಸಂಕೇನಹಳ್ಳಿಯ ಶಿವದರ್ಶನ್ ಅವರು ತುಮಕೂರಿನಲ್ಲಿರುವ ಪಿ.ಎನ್.ಕೆ. ಕೃಷ್ಣಮೂರ್ತಿ ಅವರ ನಿವಾಸಕ್ಕೆ ಭೇಟಿ ನೀಡಿ ಮಾರ್ಗದರ್ಶನ ಹಾಗೂ ಆಶೀರ್ವಾದ ಪಡೆದು ಅಭಿನಂದಿಸಿದರು.
ಈ ಸಂದರ್ಭದಲ್ಲಿ ನೂತನ ಜಿಲ್ಲಾಧ್ಯಕ್ಷ ಶಿವದರ್ಶನ್ ಅವರನ್ನು ಸನ್ಮಾನಿಸಿ ಮಾತನಾಡಿದ ಪಿ.ಎನ್.ಕೆ. ಕೃಷ್ಣಮೂರ್ತಿ, ಇಂದಿನ ದಿನಗಳಲ್ಲಿ ಪತ್ರಕರ್ತರ ಮೇಲಿರುವ ಜವಾಬ್ದಾರಿ ಬಹಳ ದೊಡ್ಡದಾಗಿದೆ. ಸತ್ಯ, ನ್ಯಾಯದ ಪರವಾಗಿ ನಿಲ್ಲುವುದು ಪತ್ರಕರ್ತರ ಮೊದಲ ಕರ್ತವ್ಯ. ಸಮಾಜದ ಕಟ್ಟಕಡೆಯ ವ್ಯಕ್ತಿಗೂ ನ್ಯಾಯ ದೊರಕಿಸಿಕೊಡುವಲ್ಲಿ ಪತ್ರಿಕೋದ್ಯಮದ ಪಾತ್ರ ಅತ್ಯಂತ ಮಹತ್ವದ್ದಾಗಿದೆ ಎಂದರು.

ಹಣ ಮತ್ತು ಅಧಿಕಾರಕ್ಕೆ ಮಣಿಯದೆ ನಿರ್ಭೀತಿಯಿಂದ, ನಿಷ್ಪಕ್ಷಪಾತವಾಗಿ ವರದಿ ಮಾಡಬೇಕು. ಸಮಾಜದಲ್ಲಿನ ಅಂಕುಡೊಂಕುಗಳನ್ನು ತಿದ್ದುವ ಶಕ್ತಿಯಾಗಿ ಪತ್ರಕರ್ತರು ಕಾರ್ಯನಿರ್ವಹಿಸಬೇಕು. ಯಾವುದೇ ಒತ್ತಡಗಳಿಗೆ ಮಣಿಯದೆ ತಮ್ಮ ವೃತ್ತಿಧರ್ಮವನ್ನು ಮರೆಯಬಾರದು ಎಂದು ಕಿವಿಮಾತು ಹೇಳಿದರು.
ಈ ಸಂದರ್ಭದಲ್ಲಿ ವೀರಶೈವ ಲಿಂಗಾಯತ ಸೇವಾ ಟ್ರಸ್ಟ್ ಅಧ್ಯಕ್ಷ ಎಚ್.ವಿ. ಪಾಳ್ಯ ಮಂಜುನಾಥ್, ಲಂಬೂ ರಾಜಣ್ಣ, ಬುಕ್ಕಪಟ್ಟಣ ರಾಜು, ಮೆಡಿಕಲ್ ಕುಮಾರ, ದೊಡ್ಡ ನರಸಿನಪಾಳ್ಯ ಮಂಜುನಾಥ್, ಮೆಡಿಕಲ್ ಹನುಮಂತರಾಜು, ನರಸಿಂಹಯ್ಯ ಸೇರಿದಂತೆ ಪತ್ರಕರ್ತರು ಹಾಗೂ ಸಂಘಟನೆಯ ಪದಾಧಿಕಾರಿಗಳು ಉಪಸ್ಥಿತರಿದ್ದರು.
ವರದಿ: ನರಸಿಂಹಯ್ಯ, ಹೊಸಕೋಟೆ
