ಕೆ.ಆರ್.ಪೇಟೆ, ಸೆ.27: ಕಬ್ಬಿನ ಎಫ್ಆರ್ಪಿ ದರವನ್ನು ಪ್ರತಿ ಟನ್ಗೆ ₹4,500ಕ್ಕೆ ಹೆಚ್ಚಿಸಬೇಕು, ಎಂಎಫ್ಪಿ ದರವನ್ನು ₹30ರಿಂದ ₹60ಕ್ಕೆ ಏರಿಸಬೇಕು ಹಾಗೂ ಕಬ್ಬು ಕಟಾವು ಮತ್ತು ಸಾಗಾಣಿಕೆ ವೆಚ್ಚವನ್ನು ಸಕ್ಕರೆ ಕಾರ್ಖಾನೆಗಳೇ ಭರಿಸಬೇಕು ಎಂದು ಆಗ್ರಹಿಸಿ ಕರ್ನಾಟಕ ರಾಜ್ಯ ಕಬ್ಬು ಬೆಳೆಗಾರರ ಸಂಘದ ವತಿಯಿಂದ ಸೆ.29ರಂದು ಹುಬ್ಬಳ್ಳಿಯ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರ ನಿವಾಸದ ಮುಂದೆ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ.
ಕೆ.ಆರ್.ಪೇಟೆ ತಾಲ್ಲೂಕಿನ ಎಲ್ಲ ಕಬ್ಬು ಬೆಳೆಗಾರರು ಹೆಚ್ಚಿನ ಸಂಖ್ಯೆಯಲ್ಲಿ ಪ್ರತಿಭಟನೆಯಲ್ಲಿ ಭಾಗವಹಿಸಬೇಕು ಎಂದು ತಾಲ್ಲೂಕು ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕಾರಿಗನಹಳ್ಳಿ ಕುಮಾರ್ ಮನವಿ ಮಾಡಿದ್ದಾರೆ.
ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರ ಸರ್ಕಾರ ನಿಗದಿಪಡಿಸಿರುವ ಕಬ್ಬಿನ ನ್ಯಾಯಯುತ ಮತ್ತು ಲಾಭದಾಯಕ ಬೆಲೆ (ಎಫ್ಆರ್ಪಿ) ರೈತರ ಉತ್ಪಾದನಾ ವೆಚ್ಚಕ್ಕೆ ಹೋಲಿಸಿದರೆ ಕಡಿಮೆಯಾಗಿದೆ. ಸಕ್ಕರೆ ಕಾರ್ಖಾನೆಗಳು ರೈತರ ಸಮಸ್ಯೆಗಳಿಗೆ ಸ್ಪಂದಿಸಬೇಕು ಎಂದು ಆಗ್ರಹಿಸಿದರು.
ಪ್ರಸ್ತುತ ಶೇ.10.25ರಷ್ಟು ಇಳುವರಿಗೆ ₹3,400ರಿಂದ ₹3,550ರವರೆಗೆ ಎಫ್ಆರ್ಪಿ ನಿಗದಿಪಡಿಸಲಾಗಿದೆ. ಆದರೆ ಒಂದು ಟನ್ ಕಬ್ಬು ಬೆಳೆಯಲು ರೈತರಿಗೆ ₹4,000ಕ್ಕೂ ಹೆಚ್ಚು ವೆಚ್ಚವಾಗುತ್ತಿದೆ. ಕೂಲಿ, ಗೊಬ್ಬರ, ಡೀಸೆಲ್ ಸೇರಿದಂತೆ ಕೃಷಿ ವೆಚ್ಚಗಳು ನಿರಂತರವಾಗಿ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಎಫ್ಆರ್ಪಿ ದರವನ್ನು ಕೂಡಲೇ ಪ್ರತಿ ಟನ್ಗೆ ₹4,500ಕ್ಕೆ ಹೆಚ್ಚಿಸಬೇಕು ಎಂದು ಒತ್ತಾಯಿಸಿದರು.

ಉತ್ತರ ಕರ್ನಾಟಕದ ಹಲವು ಸಕ್ಕರೆ ಕಾರ್ಖಾನೆಗಳು ಕಬ್ಬು ಕಟಾವು ಮತ್ತು ಸಾಗಾಣಿಕೆ ವೆಚ್ಚವನ್ನು ಭರಿಸುತ್ತಿರುವ ಮಾದರಿಯಲ್ಲಿ ದಕ್ಷಿಣ ಕರ್ನಾಟಕದಲ್ಲಿಯೂ ಕಾರ್ಖಾನೆಗಳೇ ಈ ವೆಚ್ಚವನ್ನು ಭರಿಸಬೇಕು. ಪ್ರಸ್ತುತ ಕಟಾವು ಹೆಸರಿನಲ್ಲಿ ಪ್ರತಿ ಟನ್ಗೆ ₹400ರಿಂದ ₹600ರವರೆಗೆ ಕಡಿತ ಮಾಡಲಾಗುತ್ತಿದ್ದು, ಈ ಪದ್ಧತಿಯನ್ನು ನಿಲ್ಲಿಸಬೇಕು ಎಂದು ಆಗ್ರಹಿಸಿದರು.
ಕಳೆದ ಸಾಲಿನ ಕಬ್ಬಿನ ಬಿಲ್ ಹಣವನ್ನು ಹಲವು ಕಾರ್ಖಾನೆಗಳು ಇನ್ನೂ ಪಾವತಿಸಿಲ್ಲ. ಕಬ್ಬಿನ ಬಿಲ್ ಅನ್ನು 14 ದಿನಗಳೊಳಗೆ ಪಾವತಿಸಬೇಕು ಎಂಬ ನಿಯಮವನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು. ಬಾಕಿ ಹಣವನ್ನು ಬಡ್ಡಿ ಸಹಿತ ಪಾವತಿಸಲು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಇದಲ್ಲದೆ, ಕಾರ್ಖಾನೆಗಳು ಇಳುವರಿಯನ್ನು ತಪ್ಪಾಗಿ ತೋರಿಸಿ ರೈತರಿಗೆ ಅನ್ಯಾಯ ಮಾಡುತ್ತಿರುವ ಆರೋಪಗಳ ಹಿನ್ನೆಲೆಯಲ್ಲಿ ವೈಜ್ಞಾನಿಕವಾಗಿ ಇಳುವರಿ ಪರೀಕ್ಷೆ ನಡೆಸುವ ವ್ಯವಸ್ಥೆ ಜಾರಿಗೆ ತರಬೇಕು ಎಂದು ಅವರು ಆಗ್ರಹಿಸಿದರು.
ಕರ್ನಾಟಕ ರಾಜ್ಯ ಕಬ್ಬು ಬೆಳೆಗಾರರ ಸಂಘದ ಗೌರವಾಧ್ಯಕ್ಷ ಶಶಿಕಾಂತ್ ಗುರೂಜಿ ಹಾಗೂ ರಾಜ್ಯಾಧ್ಯಕ್ಷ ಚೂನಪ್ಪ ಪೂಜಾರಿ ಅವರ ನೇತೃತ್ವದಲ್ಲಿ ಪ್ರತಿಭಟನೆ ನಡೆಯಲಿದೆ. ಸೆ.29ರಂದು ಬೆಳಿಗ್ಗೆ 11 ಗಂಟೆಗೆ ಹುಬ್ಬಳ್ಳಿಯ ವಿದ್ಯಾನಗರದಲ್ಲಿರುವ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರ ನಿವಾಸದ ಮುಂದೆ ರಾಜ್ಯದ ವಿವಿಧ ಜಿಲ್ಲೆಗಳಿಂದ ಸಾವಿರಾರು ಕಬ್ಬು ಬೆಳೆಗಾರರು ಟ್ರ್ಯಾಕ್ಟರ್ಗಳೊಂದಿಗೆ ಆಗಮಿಸಿ ಪ್ರತಿಭಟನೆ ನಡೆಸಲಿದ್ದಾರೆ.
ಕೆ.ಆರ್.ಪೇಟೆ ತಾಲ್ಲೂಕಿನ ಕಬ್ಬು ಬೆಳೆಗಾರರು ಸ್ವಯಂಪ್ರೇರಿತರಾಗಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಪ್ರತಿಭಟನೆಯನ್ನು ಯಶಸ್ವಿಗೊಳಿಸಬೇಕು ಎಂದು ಕಾರಿಗನಹಳ್ಳಿ ಕುಮಾರ್ ಮನವಿ ಮಾಡಿದರು.
– ಶ್ರೀನಿವಾಸ್ ಆರ್.
