ಕೆ.ಆರ್.ಪೇಟೆ: ರಾಷ್ಟ್ರಕವಿ ಕುವೆಂಪು ಅವರ ವಿಚಾರಧಾರೆಗಳಿಂದ ಪ್ರಭಾವಿತರಾದ ಅನೇಕರು ಮಹಾಕವಿಗಳಾಗಿ ನಮ್ಮ ನಡುವೆ ಗುರುತಿಸಲ್ಪಡುವ ಕವಿಗಳಲ್ಲಿ ಅಗ್ರಗಣ್ಯರಾಗಿರುವ ನಮ್ಮ ಗುರುಗಳು ಕೆ.ಆರ್.ಪೇಟೆ ಸುಪುತ್ರ ಕವಿ ಸಾಹಿತಿ ಸುಜನಾ ಅವರ ಹೆಸರಿನಲ್ಲಿ ಸಾಧನೆ ಪ್ರಶಸ್ತಿ ಪ್ರತಿಷ್ಠಾನ ರೂಪಿಸುವುದು ಅವಶ್ಯಕ ಎಂದು ಪ್ರೊ.ಜಿ.ಟಿ ವೀರಪ್ಪ ತಿಳಿಸಿದರು.
ಪಟ್ಟಣದ ಜಯನಗರ ಬಡವಣೆಯಲ್ಲಿರುವ ಶ್ರೀ ಮಲ್ಲಿಕಾರ್ಜುನ ಚಾರಿಟೇಬಲ್ ಟ್ರಸ್ಟ್ ಕಚೇರಿಯಲ್ಲಿ ಕರ್ನಾಟಕ ಸಂಘ ಮಂಡ್ಯ,ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಶ್ರೀ ಮಲ್ಲಿಕಾರ್ಜುನ ಚಾರಿಟೇಬಲ್ ಟ್ರಸ್ಟ್ ಸಹಯೋಗದೊಂದಿಗೆ ಮಹಾಕಾವ್ಯದ ಮೂಲಕ ಕನ್ನಡ ಸಾಹಿತ್ಯ ಲೋಕದ ಮೌಲ್ಯವನ್ನು ಹೆಚ್ಚಿಸಿರುವ ಹಾಗೂ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ, ಕವಿ,ಸಾಹಿತಿ ಡಾ.ಸುಜನಾ ಒಂದು ನೆನಪು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಸುಜನಾ ಅವರು ಮಗುವಿನ ಮುಗ್ಧ ಮನಸ್ಸು. ಅವರ ಸಂಪರ್ಕಕ್ಕೆ ಬಂದ ಯಾರೇ ಆದರೂ ಸಜ್ಜನಿಕೆ, ಪ್ರೀತಿ, ಆತ್ಮೀಯತೆ , ಭಾವುಕತೆಗಳ ಸಿಂಚನದಿಂದ ಹೊರಗೆ ಬರಲು ಸಾಧ್ಯ ಆಗುತ್ತಿರಲಿಲ್ಲ. ಕುವೆಂಪು ಅವರ ಪರಮ ಅಭಿಮಾನಿ ಆಗಿದ್ದ ಸುಜನಾ ಕುವೆಂಪು ಸಾಹಿತ್ಯದ ಬಗ್ಗೆ , ವಿಶೇಷವಾಗಿ ‘ಶ್ರೀ ರಾಮಾಯಣ ದರ್ಶನಂ’ ಮಹಾಕಾವ್ಯದ ಬಗ್ಗೆ ಮಾಡಿದ ಅನೇಕ ಅವರ ಉಪನ್ಯಾಸಗಳನ್ನು ಕೇಳುವ ಅವಕಾಶ ಹಲವು ವರ್ಷಗಳ ಹಿಂದೆ ಕೇಳುವ ಸದವಕಾಶ ನನಗೆ ದೊರೆತಿತ್ತು.ಮಹಾಭಾರತದ ಬಗ್ಗೆ ಜನರಿಗೆ ಕೇವಲ ಯುದ್ಧದವರೆಗೆ ಮಾತ್ರ ಮಾಹಿತಿಯನ್ನು ಇದುವರೆಗೆ ಕಟ್ಟಿಕೊಡಲಾಗಿತ್ತು. ಆದರೆ ಸುಜನಾ ಅವರು ಯುದ್ಧದ ನಂತರ ಮಹಾಭಾರತದ ಕಥೆಯನ್ನು ಹೃದಯಂಗಮವಾಗಿ ಚಿತ್ರಿಸಿದ್ದಾರೆ. ಕಾವ್ಯ,ಕೃಷಿಯಲ್ಲಿ ಈ ರೀತಿಯ ಪ್ರಯತ್ನ ಯಾವ ಲೇಖಕರೂ ಮಾಡಿರಲಿಲ್ಲ. ಅಂತಹ ವಿಶಿಷ್ಟ ಪ್ರಯೋಗವನ್ನು ಮಾಡಿ ಓದುಗರ ಮನಕ್ಕೆ ಮುಟ್ಟಿದ ಸುಜನಾರವರು ಎಂದೆಂದಿಗೂ ಚಿರಸ್ಥಾಯಿ.ಕುವೆಂಪುರವರ ಶಿಷ್ಯರಾಗಿ ಅವರು ಬಿಟ್ಟು ಹೋದ ಮೌಲ್ಯಗಳನ್ನು ಮತ್ತು ಪರಂಪರೆಯನ್ನು ಮುಂದುವರಿಸಿದ ಕೀರ್ತಿ ಅವರಿಗೆ ಸೇರುತ್ತದೆ. ಆದರೆ, ಇವರಿಗೆ ಸಲ್ಲಬೇಕಾದ ಗೌರವ ಸಮರ್ಪಣೆಯಾಗದಿರುವುದು ಸಾಹಿತ್ಯಲೋಕದ ದುರಂತ ಎಂದರು.

ಕರ್ನಾಟಕ ಸಂಘ ಅಧ್ಯಕ್ಷ ಪ್ರೊ.ಬಿ. ಜಯಪ್ರಕಾಶಗೌಡ ಮಾತನಾಡಿ ಕನ್ನಡ ವಿದ್ಯಾರ್ಥಿಗಳ ಓದುಗರ ಆತ್ಮೀಯರ ಪಾಲಿಗೆ ಅವರು ಎಲ್ಲ ಅರ್ಥದಲ್ಲೂ ಸುಜನಾ. ಅವರು ಕವಿ ಅಷ್ಟೇ ಅಲ್ಲ, ನಿಜವಾದ ಅರ್ಥದಲ್ಲಿ ಕವಿ ಹೃದಯದವರು ಆಗಿದ್ದರು. ಹೃದಯ ಸಂವಾದ’ಅವರ ವಿಮರ್ಶೆಯ ಲೇಖನಗಳ ಒಂದು ಸಂಕಲನ. ನಾನು ಕಾಲೇಜು ವಿದ್ಯಾರ್ಥಿಯಾಗಿ ಇರುವಾಗಲೇ ಓದಿ ,ಬಹಳವಾಗಿ ಇಷ್ಟಪಟ್ಟ ,ಅಪೂರ್ವ ಸಾಹಿತ್ಯಕ ಒಳನೋಟ ಉಳ್ಳ ಬರಹಗಳ ಪುಸ್ತಕ. ಕನ್ನಡದಲ್ಲೇ ಒಂದು ಅಪೂರ್ವ ವಿಮರ್ಶಾ ಗ್ರಂಥ. ಸುಜನಾ ನಾಣ್ಯಯಾತ್ರೆ ಮಂಗಳಾರತಿ ,ಸೊನ್ನೆ ಎರಡರ ನಡುವೆ ಮುಂತಾದ ಕವನಸಂಕಲನಗಳ ಜೊತೆಗೆ ‘ಚಿಲಿಪಿಲಿ’ಎಂಬ ಮಕ್ಕಳ ಸಂಕಲನವನ್ನೂ ಕನ್ನಡಕ್ಕೆ ಕೊಟ್ಟಿರುವ ಅಪರೂಪದ ನಮ್ಮ ಜಿಲ್ಲೆಯ ಹೆಮ್ಮೆಯ ಪುತ್ರ ಸುಜನಾ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಮಾಜ ಸೇವಕ ಆರ್ಟಿಓ ಮಲ್ಲಿಕಾರ್ಜುನ್ ಸುಜನಾ ಅಂತಹ ಮಹಾನ್ ಕವಿ ಸಾಹಿತಿ ಜ್ಞಾನಿ ನಮ್ಮ ತಾಲೂಕಿನಲ್ಲಿ ಜನಿಸಿರುವುದು ನಮ್ಮೆಲ್ಲರ ಸೌಭಾಗ್ಯ ಮೇರು ಪ್ರಶಸ್ತಿ ಪುರಸ್ಕೃತರು ನಮ್ಮೊಡನೆ ಸದಾ ಇರುವೆಕಿಗಾಗಿ ಅವರ ಹೆಸರಿನಲ್ಲಿ ಪ್ರಶಸ್ತಿ ಮತ್ತು ಪ್ರತಿಷ್ಠಾನ ಅವಶ್ಯಕತೆ ಇದೆ ಹಾಗಾಗಿ ಶ್ರೀ ಮಲ್ಲಿಕಾರ್ಜುನ ಚಾರಿಟಬಲ್ ಟ್ರಸ್ಟ್ ವತಿಯಿಂದ ಸುಜನಾ ಪ್ರತಿಷ್ಠಾನಕ್ಕೆ ಸಹಾಯ ನೀಡುತ್ತೇವೆ ಎಂದರು.

ಸುಜನಾ ನೆನಪನ್ನು ಸವಿಸ್ತಾರವಾಗಿ ವಿವರಿಸಿ ಮಾತನಾಡಿದ ವಿಶ್ರಾಂತ ಪ್ರಾಧ್ಯಾಪಕ ಡಾ:ಮ ರಾಮಕೃಷ್ಣೇಗೌಡ* ಕುವೆಂಪುರವರ ಚಿಂತನೆಗಳನ್ನು ಕೇವಲ ಕಾವ್ಯರೂಪದಲ್ಲಿ ಮಾತ್ರ ಸ್ವೀಕರಿಸದೆ ಅವರಂತೆ ಆದರ್ಶಗಳ ಪ್ರತಿರೂಪವಾಗಿ ಬದುಕಿ ತೋರಿಸಿದವರು. ಬದುಕಿನುದ್ದಕ್ಕೂ ಎಂತಹ ಸಂದರ್ಭದಲ್ಲೂ ತಮ್ಮ ಸಿದ್ಧಾಂತಗಳೊಂದಿಗೆ ಇತರೆ ಸಿದ್ಧಾಂತಗಳನ್ನು ಸೇರಿಸಿಕೊಂಡವರಲ್ಲ,ರಾಜಿ ಮಾಡಿಕೊಂಡವರೂ ಅಲ್ಲ. ಅಧಿಕಾರಕ್ಕೆ ಆಸೆಪಟ್ಟು ಅಂಟಿಕೂರದೆ ತಮ್ಮ ಕಾವ್ಯ ಕೃಷಿಯನ್ನು ಮಾಡಿದ ಅವರು ಕನ್ನಡ ಸಾಹಿತ್ಯ ಲೋಕದಲ್ಲಿ ಎಂದೂ ಪ್ರಸ್ತುತರಾಗಿದ್ದಾರೆ. ಸಾಹಿತ್ಯ ಅಕಾಡೆಮಿ ಪುರಸ್ಕಾರ ಸೇರಿದಂತೆ ಅನೇಕ ಪುರಸ್ಕಾರಗಳನ್ನು ಪಡೆದರೂ ಈ ತಲೆಮಾರಿನ ಲೇಖಕರಿಗೆ ಅವರ ಬಗ್ಗೆ ಮಾಹಿತಿಯೇ ಇಲ್ಲದಿರುವುದು ವಿಪರ್ಯಾಸ ಎಂದರು.
ಕಾರ್ಯಕ್ರಮದಲ್ಲಿ ಸುಜನಾ ಪ್ರಶಸ್ತಿ ಮತ್ತು ಪ್ರತಿಷ್ಠಾನ ಸ್ಥಾಪನೆ ಬಗ್ಗೆ ಚರ್ಚಿಸಿ ಪ್ರತಿಷ್ಠಾನ ಆಗಮಿಸಿದ ಗಣ್ಯರಿಂದ ಧಣಿಗೆ ಸಂಗ್ರಹಿಸಲಾಯಿತು.
ಈ ಸಂದರ್ಭದಲ್ಲಿ ಕಾರ್ಯಕ್ರಮದ ಅದ್ಯಕ್ಷತೆ ವಹಿಸಿದ್ದ ಸಮಾಜ ಸೇವಕ ಆರ್.ಟಿ.ಓ ಮಲ್ಲಿಕಾರ್ಜುನ್,ಮಾಜಿ ಸ್ಪೀಕರ್ ಕೃಷ್ಣ ಪ್ರತಿಷ್ಠಾನ ಗೌರವಾಧ್ಯಕ್ಷೆ ಇಂದ್ರಮ್ಮ ಕೃಷ್ಣಪ್ಪ, ರಾಜ್ಯ ಮಾರಾಟ ಮಹಾಮಂಡಳಿ ನಿರ್ದೇಶಕ ಶೀಳನೆರೆ ಮೋಹನ್,ಕೆ.ಜೆ ನಾರಾಯಣ್, ಬಸವರಾಜು,ನಾರಾಯಣಶೆಟ್ಟಿ,ಕಿಕ್ಕೇರಿ ಕೃಷ್ಣಮೂರ್ತಿ,ಶಿ.ಕುಮಾರಸ್ವಾಮಿ, ಉದಯರವಿ ಟ್ರಸ್ಟ್ ಅಧ್ಯಕ್ಷ ಕೆ ಎಸ್ ಸೋಮಶೇಖರ್,ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಪೂರ್ಣ ಚಂದ್ರ ತೇಜಸ್ವಿ, ಚಾ.ಶಿ ಜಯಕುಮಾರ್, ಕತ್ತರಘಟ್ಟ ವಾಸು,ಸೇರಿದಂತೆ ಗಣ್ಯರಿದ್ದರು.
ಸುದ್ದಿಯೊಂದಿಗೆ ಮನು ಮಾಕವಳ್ಳಿ ಕೆ ಆರ್ ಪೇಟೆ
