ಕೆ.ಆರ್.ಪೇಟೆ: ಪಟ್ಟಣದ ಕೆಪಿಎಸ್ ಶಾಲೆ ವಿರುದ್ದ ಕೆಲವರು ನಡೆಸುತ್ತಿರುವ ವ್ಯವಸ್ಥಿತ ಷಡ್ಯಂತ್ರದ ವಿರುದ್ದ ಕಠಿಣ ಕ್ರಮ ಜರುಗಿಸುವಂತೆ ಶಾಲೆಯ ಮಕ್ಕಳ ಪೋಷಕರು ಶಾಸಕರನ್ನು ಆಗ್ರಹಿಸಿದರು.
ಶಾಲಾ ಆವರಣದಲ್ಲಿ ಶಾಸಕ ಹೆಚ್.ಟಿ.ಮಂಜು ಅಧ್ಯಕ್ಷತೆಯಲ್ಲಿ ನಡೆದ ಪೋಷಕರ ಸಭೆಯಲ್ಲಿ ಭಾಗವಹಿಸಿದ್ದ ಬಹುತೇಕ ಎಲ್ಲಾ ಮಕ್ಕಳ ಪೋಷಕರು ಕೆಪಿಎಸ್ ಶಾಲೆ ವಿರುದ್ಧ ಅಪಪ್ರಚಾರ ಮತ್ತು ಆರ್.ಟಿ.ಐ ಕಾರ್ಯಕರ್ತರ ಹೆಸರಿನಲ್ಲಿ ನೀಡುತ್ತಿರುವ ಕಿರುಕುಳವನ್ನು ಖಂಡಿಸಿದರು.
ಶಾಲೆಯಲ್ಲಿ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಲು ಸರಕಾರ ಸೂಕ್ತ ಅನುದಾನ ನೀಡುತ್ತಿಲ್ಲ. ಇದನ್ನು ಮನಗಂಡು ಪೋಷಕರಾದ ನಾವುಗಳೇ ಒಂದಷ್ಟು ಹಣವನ್ನು ನಿಗಧಿಪಡಿಸಿ ಶಾಲೆ ಅಭಿವೃದ್ದಿಗೆ ನೀಡುತ್ತಿದ್ದೇವೆ. ಪೋಷಕರ ಸಭೆಯಲ್ಲಿ ನಿರ್ಧರಿಸಲಾದ ಮೊತ್ತವನ್ನು ಮಾತ್ರ ಪಡೆದು ರಸೀದಿ ನೀಡಿದ್ದಾರೆ ಎಂದರು. ಆದರೆ ಕೆಲವು ಪಟ್ಟಭದ್ರ ಹಿತಾಸಕ್ತಿಗಳು ಸರ್ಕಾರಿ ಶಾಲೆಯ ಅಬಿವೃದ್ಧಿಯನ್ನು ಸಹಿಸಲಾಗದೇ ಕೆಪಿಎಸ್ ಶಾಲೆಯ ವಿರುದ್ದ ಅಪಪ್ರಚಾರ ಮಾಡುತ್ತಿರುವುದನ್ನು ಖಂಡಿಸಿದರು. ಶಾಲೆಯ ಅಭಿವೃದ್ಧಿಗೆ ಹಾಗೂ ಮೂಲಭೂತ ಸೌಲಭ್ಯಕ್ಕೆ ಧನ ಸಹಾಯವನ್ನು ಸ್ವಯಂ ನಿರ್ಧಾರದ ಮೇರೆಗೆ ದೇಣಿಗೆ ರೂಪದಲ್ಲಿ ನೀಡುತ್ತಿದ್ದೇವೆ. ಇದಕ್ಕೂ ಶಾಲೆಯು ರಸೀದಿ ನೀಡುತ್ತಿದೆ. ಖರ್ಚಿನ್ನು ಚೆಕ್ ಮೂಲಕ ಮಾಡಲಾಗುತ್ತಿದೆ. ಶಾಲೆಯ ಅಭಿವೃದ್ಧಿಗೆ ಸಹಾಯ ಮಾಡಲು ಇಚ್ಚೆಯಿಲ್ಲದವರು ದಯಮಾಡಿ ಸುಮ್ಮನಿರಿ. ಆದರೆ, ಕೆಲವು ಪಿತೂರಿದಾರರ ಜೊತೆ ಶಾಮೀಲಾಗಿ ಸಲ್ಲದ ದೂರು ಬರೆದು ಶಿಕ್ಷಣ ಸಂಸ್ಥೆಯ ಹೆಸರಿಗೆ ಕಳಂಕ ತರಬೇಡಿ ಎಂದು ಆಗ್ರಹಿಸಿದರು.

ಎಸ್.ಡಿ.ಎಂ.ಸಿ ಪರ ಮಾತನಾಡಿದ ಸಿ.ಬಿ.ಚೇತನಕುಮಾರ್, ಕೆಪಿಎಸ್ ಶಾಲೆ ಗುಣಮಟ್ಟದ ಶಿಕ್ಷಣದ ಜೊತೆಗೆ ಪಟ್ಟಣದ ಖಾಸಗಿ ಶಾಲೆಗಳಿಗೆ ಪ್ರತಿಸ್ಪರ್ಧಿಯಾಗಿ ಕೆಲಸ ಮಾಡುತ್ತಿದೆ. ಖಾಸಗಿ ಶಾಲೆಗಳಲ್ಲಿನ ಮಿತಿಮೀರಿದ ಡೊನೇಷನ್ ಹಣ ಕಟ್ಟಲಾರದ ಸಾಕಷ್ಟು ಮಕ್ಕಳು ಈ ಶಾಲೆ ತಂದು ಸೇರಿದ್ದಾರೆ ಎಂದರು. 1 ರಿಂದ 5ನೇ ತರಗತಿಯವರೆಗೆ 316ಮಕ್ಕಳನ್ನ ದಾಖಲಾಗಿದ್ದು, 191 ಪೋಷಕರು ಮಾತ್ರ ಹಣ ನೀಡಿದ್ದಾರೆ. ಮಕ್ಕಳ ಮನೆಯಿಂದ ಪಿಯುಸಿ ವರೆಗೆ 2400 ವಿದ್ಯಾರ್ಥಿಗಳಿದ್ದಾರೆ. ಆದರೆ, ಶಾಲೆ ಶೌಚಾಲಯ ಸ್ವಚ್ಚ ಮಾಡಲು ಅಗತ್ಯ ಡಿ.ಗ್ರೂಪ್ ಸಿಬ್ಬಂದಿ ಇಲ್ಲ. ಕುಡಿಯುವ ನೀರಿನ ವ್ಯವಸ್ಥೆಯಿಲ್ಲ. 8 ಜನ ಅತಿಥಿ ಶಿಕ್ಷಕರನ್ನು ನೇಮಕ ಮಾಡಿದ್ದು ಅಗತ್ಯ ಗೌರವಧನ ನೀಡಲಾಗುತ್ತಿದೆ. ಎಲ್ಲಾ ಹಣಕಾಸಿನ ವ್ಯವಹಾರಗಳನ್ನು ಪಾರದರ್ಶಕವಾಗಿ ಮಾಡಲಾಗುತ್ತಿದೆ. ಆದರೆ ಕೆಲವರು ಶಾಲೆಯ ವಿರುದ್ದ ಇಲ್ಲ ಸಲ್ಲದ ಅಪಪ್ರಚಾರ ಮಾಡುತ್ತಿರುವುದು ಶೋಬೆ ತರುವುದಿಲ್ಲ. ಇದು ಮುಂದುವರೆದರೆ ಅಪಪ್ರಚಾರ ಮಾಡುತ್ತಿರುವವರ ಮನೆಯ ಮುಂದೆ 2400ಮಂದಿ ಪೋಷಕರ ತಂಡದೊಂದಿಗೆ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಶಾಸಕ ಹೆಚ್.ಟಿ.ಮಂಜು ಮಾತನಾಡಿ, ಶಾಲೆ ವಿರುದ್ಧದ ಆರೋಪಗಳನ್ನು ಪೋಷಕರು ಗಂಭೀರವಾಗಿ ಪರಿಗಣಿಸಬೇಕು. ನಾನು ಶಾಸಕನಾಗುವ ಮುನ್ನವೇ ಇಲ್ಲಿ ತಹಸೀಲ್ದಾರ್ ಆಗಿದ್ದ ಕೆಂಗೇರಿ ವಿಶ್ಚಒಕ್ಕಲಿಗರ ಮಠದ ಡಾ.ನಿಶ್ಚಲಾ ನಂದನಾಥ ಸ್ವಾಮೀಜಿ ಹಾಗೂ ಪ್ರಾಂಶುಪಾಲರಾಗಿದ್ದ ಡಿ.ಬಿ.ಸತ್ಯ, ಉಪಪ್ರಾಂಶುಪಾಲ ತಿಮ್ಮೇಗೌಡ ಅವರು ಸದರಿ ಕೆಪಿಎಸ್ ಶಾಲೆಯ ಅಭಿವೃದ್ಧಿಗೆ ಕಾರಣಕರ್ತರಾಗಿದ್ದಾರೆ. 120ಮಕ್ಕಳಿಗೆ ಇಳಿದಿದ್ದ ಸದರಿ ಶಾಲೆಯನ್ನು 2400ಮಕ್ಕಳಿಗೆ ಹೆಚ್ಚಿಸಲು ಎಲ್ಲರೂ ಅಪಾರವಾಗಿ ಶ್ರಮಿಸಿದ್ದಾರೆ. ಮಾಜಿ ಸಚಿವ ಕೆ.ಸಿ.ನಾರಾಯಣಗೌಡ, ಮಾಜಿ ಶಾಸಕ ಕೆ.ಬಿ.ಚಂದ್ರಶೇಖರ್ ಸಹ ಶಾಲೆಯ ಅಭಿವೃದ್ಧಿಗೆ ಕೈಜೋಡಿಸಿದ್ದಾರೆ. ಜೊತೆಗೆ ಸ್ಥಳೀಯ ಅನೇಕ ದಾನಿಗಳು, ಹಿರಿಯ ವಿದ್ಯಾರ್ಥಿಗಳು ಧನ ಸಹಾಯ ಮಾಡಿ ಶಾಲೆ ಉಳಿಸಲು ಶ್ರಮಿಸಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಶಾಲೆಯಲ್ಲಿ ಗ್ರಾಮೀಣ ಮಕ್ಕಳಿಗಾಗಿ ಗುಣಮಟ್ಟದ ಇಂಗ್ಲಿಷ್ ಶಿಕ್ಷಣ ಸೇರಿದಂತೆ ಎಲ್ಲವನ್ನೂ ನೀಡುತ್ತಿದೆ. ಕೆಲವರು ತಮಗೆ ಬೇಕಾದ ವ್ಯಕ್ತಿಗಳನ್ನು ಶಾಲಾಭಿವೃದ್ಧಿ ಸಮಿತಿಗೆ ಸೇರಿಸಲು ಪ್ರಯತ್ನಿಸಿ ವಿಫಲರಾದರು. ಹೀಗಾಗಿ ವ್ಯವಸ್ಥಿತ ಅಪಪ್ರಚಾರ ಮಾಡುತ್ತಿದ್ದಾರೆ. ಇದಕ್ಕೆ ಕಿವಿಗೊಡ ಬಾರದು ಎಂದು ಮನವಿ ಮಾಡಿದರು.
ಸಭೆಯಲ್ಲಿ ಕೆಪಿಎಸ್ ಶಾಲಾಭಿವೃದ್ಧಿ ಸಮಿತಿ ಉಪಾಧ್ಯಕ್ಷ ಸಿ.ಬಿ.ಚೇತನಕುಮಾರ್, ಸದಸ್ಯರಾದ ಎನ್.ಜೆ.ಮಂಜು, ಕೆ.ಆರ್.ಪುಟ್ಟಸ್ವಾಮಿ, ಲೋಕೇಶ್, ಲಕ್ಷ್ಮೀಪ್ರಸನ್ನ, ಜಗದೀಶ್, ಮಂಜು, ಮಮತ, ಕಾವ್ಯ, ಸುಕನ್ಯಾ, ಪ್ರಾಂಶುಪಾಲ ಪುಲಿಗೆರಯ್ಯ, ಉಪ ಪ್ರಾಂಶುಪಾಲ ರಾಘವೇಂದ್ರ, ಮುಖ್ಯ ಶಿಕ್ಷಕಕಿ ನಾಗರತ್ನ, ಪೋಷಕರಾದ ಮಹದೇವ, ನಗ್ತಾಭಾನು, ಮಹಮದ್ ಸಾದಿಕ್, ಪ್ರಭಾಕರ್, ಸುಕನ್ಯ ಮತ್ತಿತರರು ಇದ್ದರು.
– ಶ್ರೀನಿವಾಸ್ ಆರ್.
