ಕೆ.ಆರ್.ಪೇಟೆ,ಜ.13: ತಾಲ್ಲೂಕಿನ ಶೀಳನೆರೆ ಹೋಬಳಿಯ ಚನ್ನಾಪುರ, ಅತ್ತಿಮರುವನಹಳ್ಳಿ, ಉಯ್ಗೋನಹಳ್ಳಿ, ಮರುವನಹಳ್ಳಿ, ಹರಳಹಳ್ಳಿ, ನೀತಿಮಂಗಲ, ಮೈಲನಹಳ್ಳಿ, ವಸಂತಪುರ, ಹೆಮ್ಮಡಹಳ್ಳಿ, ಗುಡಗನಹಳ್ಳಿ, ರಾಜಘಟ್ಟ, ರಾಮನಹಳ್ಳಿ, ಹಿರಳಹಳ್ಳಿ, ಶಿವಪುರ, ಗವೀಗೌಡನಕೊಪ್ಪಲು ಗ್ರಾಮಗಳಲ್ಲಿ ಶಾಸಕರ ಪ್ರದೇಶಾಭಿವೃದ್ದಿ ನಿಧಿ ಅನುಧಾನದಲ್ಲಿ ಕೈಗೊಳ್ಳಲಾಗುತ್ತಿರುವ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಾಸಕ ಹೆಚ್.ಟಿ.ಮಂಜು ಅವರು ಭೂಮಿ ಪೂಜೆ ನೆರವೇರಿಸಿದರು.
ಬಳಿಕ ಮಾತನಾಡಿದ ಶಾಸಕರು ಒಂದು ತಾಲ್ಲೂಕು ಅಭಿವೃದ್ಧಿಯಾಗಿದೆ ಎಂದು ಹೊರ ತಾಲ್ಲೂಕಿನವರಿಗೆ ತಿಳಿಯಲು ಮೊದಲು ರಸ್ತೆಗಳ ಅಭಿವೃದ್ಧಿಯಾಗಬೇಕು.
ರಸ್ತೆ ಅಭಿವೃದ್ಧಿಯಾದರೆ ಸದರಿ ರಸ್ತೆಯಲ್ಲಿ ಹೋಗುವವರು ಯಾರಪ್ಪ ಎಂ.ಎಲ್.ಎ.ಪುಣ್ಯಾತ್ಮ ಎಂದು ಹೇಳುತ್ತಾರೆ. ಹಾಗಾಗಿ ರಸ್ತೆಗಳ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಿ ಕೆಲಸ ಮಾಡುತ್ತಿದ್ದೇನೆ. ತಾಲ್ಲೂಕಿನಲ್ಲಿ ಸುಮಾರು 400ಹಳ್ಳಿಗಳಿವೆ ಎಲ್ಲಾ ಹಳ್ಳಿಗಳ ಸಂಪರ್ಕ ರಸ್ತೆಗಳು ಡಾಂಬರು ಕಂಡು ಹತ್ತಾರು ವರ್ಷಗಳೇ ಕಳೆದಿವೆ. ಇದಕ್ಕೆ ಸೂಕ್ತ ಅನುಧಾನ ನೀಡುವಂತೆ ಮುಖ್ಯಮಂತ್ರಿಗಳು, ಉಪಮುಖ್ಯಮಂತ್ರಿಗಳು, ಜಿಲ್ಲಾ ಉಸ್ತುವಾರಿ ಮಂತ್ರಿಗಳು ಸೇರಿದಂತೆ ವಿವಿಧ ಇಲಾಖೆಗಳ ಸಚಿವರಿಗೆ ತಾಲ್ಲೂಕಿಗೆ ಸೂಕ್ತ ಅನುಧಾನ ನೀಡುವಂತೆ ಮನವಿ ಮಾಡಿದ್ದೇನೆ ಆದರೂ ಸಹ ಸರ್ಕಾರವು ಹಾಗೂ ಮುಖ್ಯಮಂತ್ರಿಗಳು ನನ್ನ ಮನವಿ ಸ್ಪಂದಿಸುತ್ತಿಲ್ಲ. ಇದರಿಂದಾಗಿ ತಾಲ್ಲೂಕಿನ ಅಭಿವೃದ್ಧಿಗೆ ಹಿನ್ನೆಡೆಯಾಗುತ್ತಿದೆ.

ಕಾಂಗ್ರೆಸ್ ಶಾಸಕರಿಗೆ ನೀಡುವಷ್ಟು ಅನುಧಾನವನ್ನಾದರೂ ನೀಡಿದರೆ ತಕ್ಕ ಮಟ್ಟಿಗೆ ತಾಲ್ಲೂಕಿನ ಅಭಿವೃದ್ದಿಗೆ ಅನುಧಾನವನ್ನು ಹಂಚಿಕೆ ಮಾಡಿ ಅಭಿವೃದ್ಧಿ ಕೈಗೊಳ್ಳಬಹುದು. ಆದರೆ ಈಗ ವಿರೋಧ ಪಕ್ಷದ ಶಾಸಕನಾದ ನನಗೆ ನೀಡುತ್ತಿರುವ ಕೇವಲ 25ಕೋಟಿ ಅನುಧಾನ ಆನೆ ಹೊಟ್ಟಿಗೆ ಅರೆಕಾಸಿನ ಮಜ್ಜಿಗೆ ನೀಡಿದಂತಾಗಿದೆ. ಹಾಗಾಗಿ ಮುಖ್ಯಮಂತ್ರಿಗಳು ನಮ್ಮ ಕೆ.ಆರ್.ಪೇಟೆ ಕ್ಷೇತ್ರದ ಜನಸಾಮಾನ್ಯರ ಹಿತದೃಷ್ಠಿಯಿಂದ ರಸ್ತೆ ಮತ್ತು ಇತರೆ ಮೂಲಭೂತ ಸೌಲಭ್ಯಗಳಿಗೆ ವಿಶೇಷ ಅನುಧಾನ ನೀಡಬೇಕು ಎಂದು ಶಾಸಕ ಹೆಚ್.ಟಿ.ಮಂಜು ಒತ್ತಾಯ ಮಾಡಿದರು.
ಗ್ರಾಮೀಣ ರಸ್ತೆಗಳು ಸಾಕಷ್ಟು ಅದ್ವಾನಗೊಂಡಿದ್ದು ಎಲ್ಲಾ ಕಡೆಯಿಂದ ರಸ್ತೆ ಅಭಿವೃದ್ಧಿಗೆ ಅನುದಾನ ನೀಡುವಂತೆ ಒತ್ತಾಯ ಮಾಡುತ್ತಿದ್ದಾರೆ. ಹಾಗಾಗಿ ಸಂವಿಧಾನ ಬದ್ದವಾಗಿ ನೀಡಬೇಕಾದ ಶಾಸಕರ ಪ್ರದೇಶಾಭಿವೃದ್ಧಿ ನಿಧಿಯನ್ನು ಕಾಂಗ್ರೆಸ್ ಶಾಸಕರಿಗೆ ನೀಡುವ ಮಾದರಿಯಲ್ಲಿ ನನ್ನ ಕೆ.ಆರ್.ಪೇಟೆ ಕ್ಷೇತ್ರಕ್ಕೂ ನೀಡುವ ಮೂಲಕ ನನ್ನ ಕ್ಷೇತ್ರದ ಜನತೆಗೆ ಅನುಕೂಲ ಮಾಡಿಕೊಡಬೇಕು ಎಂದು ಶಾಸಕರು ಸರ್ಕಾರವನ್ನು ಒತ್ತಾಯ ಮಾಡಿದ್ದಾರೆ.

ಈ ಸಂದರ್ಭದಲ್ಲಿ ಶೀಳನೆರೆ ಹೋಬಳಿ ಜೆಡಿಎಸ್ ಅಧ್ಯಕ್ಷ ಸ್ವಾಮೀಗೌಡ, ಗ್ರಾ.ಪಂ.ಮಾಜಿ ಅಧ್ಯಕ್ಷರಾದ ಭೈರಾಪುರ ಹರೀಶ್, ರಾಯಸಮುದ್ರ ಯೋಗೇಶ್, ಸಿಂಧುಘಟ್ಟ ಗ್ರಾ.ಪಂ.ಅಧ್ಯಕ್ಷ ರೂಪಾಮಹಾದೇವ್, ಹರಳಹಳ್ಳಿ ಗ್ರಾ.ಪಂ.ಅಧ್ಯಕ್ಷೆ ಕಾವ್ಯಚಂದ್ರು, ಶೀಳನೆರೆ ಗ್ರಾ.ಪಂ.ಸದಸ್ಯರಾದ ಎಸ್.ಪಿ.ಸಿದ್ದೇಶ್, ಗಾಯಿತ್ರಿಸಿದ್ದೇಶ್, ನವಿಲುಮಾರನಹಳ್ಳಿ ರಮ್ಯ ಹರೀಶ್, ಮುಖಂಡರಾದ ಬೇಲದಕೆರೆ ಮರೀಗೌಡ, ಭೈರಾಪುರ ಶಿವಣ್ಣಶೆಟ್ಟಿ, ಕೇಶವಮೂರ್ತಿ, ನವಿಲುಮಾರನಹಳ್ಳಿ ಹರೀಶ್, ಮರಡಹಳ್ಳಿ ಪ್ರದೀಪ್, ಗುಡುಗನಹಳ್ಳಿ ಶ್ರೀನಿವಾಸಗೌಡ, ಹಿರಳಹಳ್ಳಿ ರೇಷ್ಮೆ ತಿಮ್ಮೇಗೌಡ, ವಿಜಯ್ಕುಮಾರ್, ಕುಮಾರಸ್ವಾಮಿ, ಶಂಕರೇಗೌಡ, ಉಪನ್ಯಾಸಕ ಶ್ರೀನಿವಾಸ್, ಅತ್ತಿಮರವನಹಳ್ಳಿ ಆನಂದ್, ಉಯ್ಗೋನಹಳ್ಳಿ ಕಿಟ್ಟಿ, ಶ್ರೀಧರ್, ಸಿಂಧುಘಟ್ಟ ಗ್ರಾ.ಪಂ.ಪಿಡಿಓ ವಾಣಿ, ಹರಳಹಳ್ಳಿ ಪಿಡಿಓ ಬಸವಶೆಟ್ಟಿ, ಶೀಳನೆರೆ ಗ್ರಾ.ಪಂ.ಪಿಡಿಓ ನವೀನ್, ಶಾಸಕರ ಆಪ್ತ ಸಹಾಯಕ ಕುಮಾರಸ್ವಾಮಿ ಮತ್ತಿತರರು ಉಪಸ್ಥಿತರಿದ್ದರು.
– ಶ್ರೀನಿವಾಸ್ ಆರ್.
