ಟಿ.ನರಸೀಪುರ : ವರ್ಷದ ಮೊದಲ ಹಬ್ಬ ಸಂಕ್ರಾತಿ ಸಡಗರ. ದನ,ಕರುಗಳ ಸಿಂಗರಿಸಲು ಪೇಟೆ ಬೀದಿಗೆ ಮುಗಿ ಬಿದ್ದ ರೈತಾಪಿ ವರ್ಗ. ತರಕಾರಿ…ಹೂ…ಹಣ್ಣು…ಎಳ್ಳು..ಬೆಲ್ಲ..ಸಕ್ಕರೆ ಮಿಠಾಯಿ ಸೇರಿದಂತೆ ಹಸಿ ಅವರೇಕಾಯಿಗೆ ಮುಗಿ ಬಿದ್ದ ಗ್ರಾಹಕರು. ಪಟ್ಟಣದ ಲಿಂಕ್ ರಸ್ತೆಯಿಂದ ಮಾರುಕಟ್ಟೆ,ಚಿಕ್ಕ ಅಂಗಡಿ ಬೀದಿ,ಭಗವಾನ್ ವೃತ್ತದಿಂದ ಸರ್ಕಾರಿ ಬಸ್ ನಿಲ್ದಾಣದವರೆವಿಗೂ ಜನವೋ…ಜನ.ನೆನ್ನೆ,ಮೊನ್ನೆಯವರೆವಿಗೂ ತರಕಾರಿ ಬೆಲೆ ಗಗನಕ್ಕೇರಿ ಗ್ರಾಹಕರ ಕಣ್ಣಲ್ಲಿ ನೀರು ತರಿಸಿತ್ತು.ಹಬ್ಬದ ಮುನ್ನಾ ದಿನವಾದ ಇಂದು ಈರುಳ್ಳಿ,ಬೆಳ್ಳುಳ್ಳಿ,ತರಕಾರಿ,ಹಣ್ಣು ಹಂಪಲುಗಳ ಬೆಲೆ ಗ್ರಾಹಕರ ಮುಖದಲ್ಲಿ ಮಂದಹಾಸ ಮೂಡುವಂತೆ ಮಾಡಿದೆ.ಕೈ ಗೆಟುಕುವ ದರದಲ್ಲಿ ವಸ್ತುಗಳು ಸಿಗುತ್ತಿದ್ದು ವರ್ಷ ಪೂರ್ತಿ ದರಗಳು ಗಗನಕ್ಕೇರದಿರಲಿ ಎಂದು ತಮ್ಮ ಬ್ಯಾಗುಗಳ ತುಂಬಾ ತರಕಾರಿ, ಹಣ್ಣು,ಹಂಪಲು,ಹಸಿ ಕಾಳುಗಳನ್ನು ತುಂಬಿಕೊಂಡು ಹೋಗುತ್ತಿದ್ದಾರೆ.

ರೈತರು ತಮ್ಮ ಮನೆಯ ದನ,ಹಸು,ಕರುಗಳಿಗೆ ಸಿಂಗರಿಸಲು ಬೇಕಿರುವ ವಸ್ತುಗಳನ್ನು ಹೆಚ್ಚಿನ ರೀತಿಯಲ್ಲಿ ಖರೀದಿಸುತ್ತಿದ್ದರೆ ಮನೆಯ ಯಜಮಾನತಿ ದೇವರ ಪೂಜೆ,ಎಳ್ಳು,ಬೆಲ್ಲ ಹಾಗೂ ಅಡುಗೆಗೆ ಬೇಕಾದ ವಸ್ತುಗಳನ್ನು ಖರೀದಿಸುತ್ತಾ ಖುಷಿಯಿಂದ ಹಬ್ಬ ಆಚರಿಸಲು ಮುಂದಾಗಿದ್ದು,ರಂಗೋಲಿಗೂ ಹೆಚ್ಚಿನ ಖರೀದಿ ಜೋರಾಗಿತ್ತು.ಇದರ ಜೊತೆಗೆ ರಂಗೋಲಿಗೆ ತರೇವಾರಿ ಬಣ್ಣಗಳನ್ನು ತುಂಬಲು ಬಣ್ಣ ಅಂಗಡಿಗಳಲ್ಲಿ ರಷ್ಸೋ…ರಷ್ಸು.ಬಟ್ಟೆ ಅಂಗಡಿಗಳಲ್ಲಿ ಹೆಚ್ಚು ಹೆಣ್ಣು ಮಕ್ಕಳು ತುಂಬಿ ತುಳುಕುತ್ತಿದ್ದು ಎಲ್ಲಾ ಬಟ್ಟೆ ಅಂಗಡಿಗಳಲ್ಲಿ ಭರ್ಜರಿ ವ್ಯಾಪಾರ ನಡೆದಿದೆ.ಗ್ರಾಹಕರ ಜೇಬು ಸುಡದೆ ಹೆಚ್ಚು ವ್ಯಾಪಾರ ಮಾಡುತ್ತಿದ್ದು ಇದೇ ಮೊದಲ ಭಾರಿಗೆ ಮಾರುಕಟ್ಟೆಯಲ್ಲಿ ಬೆಲೆಗಳ ಏರಿಕೆ ಬಿಸಿ ತಾಗದೆ ಸಂತೃಪ್ತಿಯಿಂದ ವ್ಯಾಪಾರ ಮಾಡಿದ್ದಾರೆ.
ಪುಣ್ಯ ಸಂಪಾದನೆಗೆ ಉತ್ತಮ ಅವಕಾಶ:-
2026 ರ ಮಕರ ಸಂಕ್ರಾಂತಿ ಧಾರ್ಮಿಕವಾಗಿ ಅತ್ಯಂತ ವಿಶೇಷ ದಿನವಾಗಿದೆ. ಸಾಮಾನ್ಯ ದಿನಗಳಿಗಿಂತ ಹೆಚ್ಚು ಪುಣ್ಯ ನೀಡುತ್ತವೆ.ಸೂರ್ಯ ದೇವ ಮತ್ತು ವಿಷ್ಣುವಿನ ಆರಾಧನೆಯ ಮೂಲಕ ಪುಣ್ಯ ಸಂಪಾಧಿಸಲು ಉತ್ತಮ ಅವಕಾಶ. 23 ವರ್ಷಗಳ ನಂತರ ಅಪರೂಪದ ಧಾರ್ಮಿಕ ಸಂಯೋಗ ಸಂಭವಿಸಿದೆ.ವಿಷ್ಣುವಿಗೆ ಅರ್ಪಿತವಾದ ಏಕಾದಶಿ ಮತ್ತು ಸಂಕ್ರಾಂತಿ ಒಟ್ಟಿಗೆ ಬರುವುದು ಅಪರೂಪ.ಧಾರ್ಮಿಕ ನಂಬಿಕೆಯ ಪ್ರಕಾರ ಪೂಜೆ,ದಾನ ಮತ್ತು ವೃತಗಳು ಸಾಮಾನ್ಯ ದಿನಗಳಿಗಿಂತ ಹೆಚ್ಚು ಪುಣ್ಯ ನೀಡುತ್ತದೆಂದು ಜ್ಯೋತಿಷಿಗಳು ಹೇಳಿದ್ದಾರೆ.
-ಎಂ.ನಾಗೇಂದ್ರಕುಮಾರ್
