ಕೆ.ಆರ್.ಪೇಟೆ: ಜಿಲ್ಲಾ ಪಂಚಾಯತ್ ಮಾಜಿ ಸದಸ್ಯರು ಹಾಗೂ ಸಮಾಜ ಸೇವಕರಾದ ಡಾ.ಎಸ್. ಕೃಷ್ಣಮೂರ್ತಿ (85) ಅವರು ಇಂದು ಮುಂಜಾನೆ ಪಟ್ಟಣದ ಜಯನಗರ ಬಡಾವಣೆಯಲ್ಲಿರುವ ನಿವಾಸದಲ್ಲಿ ನಿಧನ ಹೊಂದಿದ್ದಾರೆ.ಅವರಿಗೆ ಸುಮಾರು 85ವರ್ಷ ವಯಸ್ಸಾಗಿತ್ತು.
ಮಂಡ್ಯ ಮೂಲದವರಾಗಿದ್ದರೂ ಸಹ ತಮ್ಮ ವೈದ್ಯಕೀಯ ವೃತ್ತಿ ಸೇವೆಯನ್ನು ಹೆಚ್ಚು ವರ್ಷಗಳ ಕಾಲ ಕೆ.ಆರ್.ಪೇಟೆ ತಾಲ್ಲೂಕಿನ ವಿವಿಧ ಸರಕಾರಿ ಆಸ್ಪತ್ರೆಗಳಲ್ಲಿಯೇ ಸಲ್ಲಿಸಿದ ಕಾರಣ ಹಾಗೂ ವೈದ್ಯಕೀಯ ವೃತ್ತಿಯ ಜೊತೆ ಜೊತೆಗೆ ಸಮಾಜ ಸೇವೆಯಲ್ಲಿಯೂ ತೊಡಗಿಸಿಕೊಂಡ ಕಾರಣ ಕೆ.ಆರ್.ಪೇಟೆ ತಾಲ್ಲೂಕಿನ ಮನೆಯ ಮಗನಾಗಿ ಹೊರ ಹೊಮ್ಮಿದ್ದರು. ಇವರ ಜನಪ್ರಿಯತೆಯು ಇವರನ್ನು 2009ರಲ್ಲಿ ಹಿರಿಕಳಲೆ ಜಿಲ್ಲಾ ಪಂಚಾಯಿತಿ ಕ್ಷೇತ್ರದಿಂದ ಜನರು ಬಹಳ ಪ್ರೀತಿಯಿಂದ ಹೆಚ್ಚು ಮತಗಳ ಅಂತರದಿಂದ ಗೆಲುವು ನೀಡಿ ಜನಸೇವೆ ಮಾಡಲು ಅವಕಾಶ ನೀಡಿದ್ದರು.
ಸುಮಾರು 35 ವರ್ಷಗಳ ಕಾಲ ತಾಲ್ಲೂಕಿನ ವಿವಿಧ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಸರ್ಕಾರಿ ವೈದ್ಯರಾಗಿ ಅತ್ಯುತ್ತಮ ಸೇವೆ ಸಲ್ಲಿಸಿದ್ದರು. ಇಳಿವಯಸ್ಸಿನಲ್ಲೂ ವೈದ್ಯ ವೃತ್ತಿಯನ್ನು ಮುಂದುವರಿಸಿ, ತಮ್ಮ ಖಾಸಗಿ ಆಸ್ಪತ್ರೆ ಮೂಲಕ ಬಡ ಜನರಿಗೆ ಉತ್ತಮ ಚಿಕಿತ್ಸೆ ನೀಡುತ್ತಿದ್ದರು. ಶುಕ್ರವಾರವೂ ರೋಗಿಗಳಿಗೆ ಚಿಕಿತ್ಸೆ ನೀಡಿ ಮನೆಗೆ ಬಂದಿದ್ದರು ಎನ್ನಲಾಗಿದೆ.
ಮೃತರಿಗೆ ಪುತ್ರರಾದ ಡಾ. ಪ್ರಯಾಗ್ ರಾಜ್, ಡಾ. ಪ್ರೊ. ನಿರೀಕ್ಷಣ್, ಸೊಸೆಯಂದಿರು, ಮೊಮ್ಮಕ್ಕಳು ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.
*ಆಸ್ಪತ್ರೆಗೆ ದೇಹದಾನ: ಸಾವಿನಲ್ಲೂ ಸಾರ್ಥಕತೆ ಮೆರೆದ ಡಾ.ಎಸ್.ಕೃಷ್ಣಮೂರ್ತಿ*
ಸಾರ್ವಜನಿಕರ ಅಂತಿಮ ದರ್ಶನಕ್ಕಾಗಿ ಮೃತದೇಹವನ್ನು ಇಂದು ಬೆಳಿಗ್ಗೆ 10 ಗಂಟೆಯವರೆಗೆ ಕೆ.ಆರ್.ಪೇಟೆ ತಾಲ್ಲೂಕು ಆಸ್ಪತ್ರೆಯ ಹಿಂಭಾಗ ಇರುವ ಅವರ ಬಾಡಿಗೆ ಮನೆಯ ಬಳಿ ನಿವಾಸದಲ್ಲಿ ಇರಿಸಲಾಗಿತ್ತು. 10.30ರಿಂದ 12ಗಂಟೆವರೆಗೆ ಕೆ.ಆರ್.ಪೇಟೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಿ ಅನಂತರ ಮಂಡ್ಯದಲ್ಲಿರುವ ಅವರ ನಿವಾಸದ ಬಳಿ ಮಧ್ಯಾಹ್ನ 3ಗಂಟೆಯವರೆಗೆ ಸಾರ್ವಜನಿಕರ ದರ್ಶನಕ್ಕೆ ಇಡಲಾಗಿತ್ತು. ನಂತರ ಸಾಂಪ್ರದಾಯಿಕ ಪೂಜೆ ಸಲ್ಲಿಸಿ ಮೃತರ ಇಚ್ಚೆಯಂತೆ ಮಂಡ್ಯ ಮೆಡಿಕಲ್ ಆಸ್ಪತ್ರೆಗೆ ದೇಹದಾನ ಮಾಡಲಾಡಲಾಯಿತು.
ನಿಧನಕ್ಕೆ ತಾಲ್ಲೂಕಿನ ವಿವಿಧ ಗಣ್ಯರು ಸಂತಾಪ ಸೂಚಿಸಿದ್ದಾರೆ.
– ಶ್ರೀನಿವಾಸ್ ಆರ್.
