ಕೆ.ಆರ್.ಪೇಟೆ: ಮಹಿಳೆಯರ ಸ್ವಾವಲಂಬಿ ಜೀವನ ನಿರ್ವಹಣೆಗೆ ಮಹಿಳಾ ಸಬಲೀಕರಣದಂತಹ ಕಾರ್ಯಕ್ರಮ ಅವಶ್ಯಕ. ಈ ನಿಟ್ಟಿನಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಜ್ಞಾನ ವಿಕಾಸ ಕೇಂದ್ರದ ಕಾರ್ಯಕ್ರಮ ಮಹಿಳೆಯರ ಸ್ವಾವಲಂಬಿ ಮತ್ತು ಸ್ವಾಭಿಮಾನಿ ಬದುಕಿಗೆ ಸಹಕಾರಿ ಎಂದು ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಚನ್ನರಾಯಪಟ್ಟಣ ಜಿಲ್ಲಾ ನಿರ್ದೇಶಕ ಡಾ.ಯೋಗೇಶ್ ತಿಳಿಸಿದರು.
ತಾಲ್ಲೂಕಿನ ಕಸಬಾ ಹೋಬಳಿಯ ಬಿಬಿ ಕಾವಲು ಗ್ರಾಮದಲ್ಲಿ ಕಿಕ್ಕೇರಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಹರಿಹರಪುರ ವಲಯ ವತಿಯಿಂದ ಜ್ಞಾನವಿಕಾಸ ಸಂಯುಕ್ತ ಆಶ್ರಯದಲ್ಲಿ ನೂತನ ಮಹಿಳಾ ಜ್ಞಾನ ವಿಕಾಸ ಕೇಂದ್ರ ಉದ್ಘಾಟನಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು
ಮಹಿಳೆ ನಿಶ್ಚಿಂತೆಯಿಂದ ತನ್ನ ಬದುಕು ಕಟ್ಟಿಕೊಳ್ಳಲು ಲೋಕ ಜ್ಞಾನ ಹೊಂದಿರಬೇಕು ಈ ಕಾರಣದಿಂದ ಮಹಿಳಾ ಜ್ಞಾನ ವಿಕಾಸ ಕೇಂದ್ರ ಮಹಿಳೆಯರಿಗೆ ಶಿಕ್ಷಣ, ಆರೋಗ್ಯ, ನೈರ್ಮಲ್ಯ, ಸ್ವಯಂ ಉದ್ಯೋಗ ಸೇರಿದಂತೆ ವಿವಿಧ ಸಾಮಾಜಿಕ ಜ್ಞಾನದ ಮಾಹಿತಿ ನೀಡಿ ಜಾಗೃತಿಗೊಳಿಸುವ, ನಿರ್ಗತಿಕರರಿಗೆ ಮನೆ ರಚನೆಯ ವಾತ್ಸಲ್ಯ ಕಾರ್ಯಕ್ರಮ, ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮ ನಮ್ಮ ಸಮಾಜಕ್ಕೆ ಮಾದರಿ ಎಂದು ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಗ್ರಾ.ಪಂ ಸದಸ್ಯ ಮೋಹನ್ ಗ್ರಾಮೀಣ ಭಾಗದಲ್ಲಿ ಪೋಕ್ಸೊ ಪ್ರಕರಣಗಳು ಹೆಚ್ಚಾಗಿ ದಾಖಲಾಗುತ್ತಿದ್ದು, ಮಹಿಳೆಯರು ಈ ಬಗ್ಗೆ ಗಂಭೀರವಾಗಿ ಆಲೋಚಿಸಬೇಕಾಗಿದೆ. ಹೆಣ್ಣು ಮಕ್ಕಳು ವಯಸ್ಸಿಗೆ ಬಾರದೆ ವಿವಾಹ ಮಾಡುವುದರಿಂದ ದೈಹಿಕವಾಗಿ ಸೊರಗುವರು. ಇದರಿಂದ ಅನೇಕ ಕಾಯಿಲೆಗೆ ತುತ್ತಾಗುತ್ತಾರೆ,ಇಂದಿನ ಮಕ್ಕಳು ಮೊಬೈಲ್ ಗಳ ಬಳಕೆ ಮತ್ತು ಸಾಮಾಜಿಕ ಜಾಲತಾಣಗಳ ಬಳಕೆ ಬಗ್ಗೆ ಮಹಿಳೆಯರು ಮತ್ತು ಪೋಷಕರು ಈ ಸಂಬಂಧ ಗಂಭೀರವಾಗಿ ಆಲೋಚಿಸಬೇಕು ಎಂದು ತಿಳಿಸಿದರು.
ಬಳಿಕ ಮಾತನಾಡಿದ ಶ್ರೀ ಮಲ್ಲಿಕಾರ್ಜುನ ಚಾರಿಟೇಬಲ್ ಟ್ರಸ್ಟ್ ನ ಟ್ರಸ್ಟಿ ಗಂಜಿಗೆರೆ ಮಹೇಶ್ ಮಹಿಳೆಯರು ಜ್ಞಾನ-ವಿಜ್ಞಾನ, ಕಾರ್ಮಿಕ ಕ್ಷೇತ್ರ, ಸೇವಾ ಕ್ಷೇತ್ರ, ಉದ್ಯಮ, ಪುರುಷರಿಗಷ್ಟೇ ಎಂದೇ ನಂಬಲಾದ ವೃತ್ತಿಗಳಲ್ಲೂ ಸ್ಥಾನವನ್ನು ನಿರ್ಮಿಸಿ ಕೊಂಡಿದ್ದಾರೆ. ಮಹಿಳೆಯರು ಶಿಕ್ಷಣ, ಉದ್ಯೋಗ, ವೈಜ್ಞಾನಿಕ ಸಂಶೋಧನೆ, ಸಮಾಜಸೇವಾ ಕ್ಷೇತ್ರಗಳಲ್ಲಿ ಮುಂಚೂಣಿಯಲ್ಲಿದ್ದಾರೆ .ಮನೆ ಕೆಲಸ ಮಾತ್ರ ಮಹಿಳೆ ಕೆಲಸ ಎಂಬ ನಂಬಿಕೆ ಕಾಣೆಯಾಗುತ್ತಿದೆ. ಮಹಿಳೆಯರು ಪುರುಷರಂತೆ ಸಮಾನಾಗಿ ಎಲ್ಲಾ ಕ್ಷೇತ್ರಗಳಲ್ಲೂ ತೊಡಗಿಸಿಕೊಂಡಿರುವುದು ಒಳ್ಳೆಯ ಬೆಳವಣಿಗೆ.ಇತ್ತೀಚಿನ ದಿನಗಳಲ್ಲಿ ಮಹಿಳೆಯರು ಕೂಡ ವ್ಯಾಪಾರ, ಕೈಗಾರಿಕೆ ಯಂತಹ ಸ್ವಯಂ ಉದ್ಯೋಗಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ ಆರ್ಥಿಕವಾಗಿ ಉತ್ತಮ ಸ್ಥಾನಮಾನ ಗಳಿಸಿದ್ದಾರೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಕಿಕ್ಕೇರಿ ಶ್ರೀ ಧರ್ಮಸ್ಥಳ ಯೋಜನಧಿಕಾರಿ ಪ್ರಸಾದ್, ಗ್ರಾ.ಪಂ ಮಾಜಿ ಅಧ್ಯಕ್ಷ ಡೊಂಕಯ್ಯ, ಹಿರಿಯ ಮುಖಂಡ ಸಿಂಗಯ್ಯ,ಶ್ರೀ ಮಲ್ಲಿಕಾರ್ಜುನ ಚಾರಿಟೇಬಲ್ ಟ್ರಸ್ಟ್ ನ ಟ್ರಸ್ಟಿ ಗಂಜಿಗೆರೆ ಮಹೇಶ್, ಸಂಸ್ಥೆಯ ಮೇಲ್ವಿಚಾರಕಿ ಸಂಗೀತ ದಿನೇಶ್, ಸಮನ್ವಯ ಅಧಿಕಾರಿ ನಂದಿನಿ,ಸೇವಾಪ್ರತಿನಿಧಿ ವೀಣಾ, ಮಂಜುಳ, ಶ್ರುತಿ, ಪೂರ್ಣಿಮಾ, ಗೀತಾ,ರೇಖಾ, ಸೇರಿದಂತೆ ಗ್ರಾಮಸ್ಥರು ಇದ್ದರು.
ಸುದ್ದಿಯೊಂದಿಗೆ ಮನು ಮಾಕವಳ್ಳಿ ಕೆ ಆರ್ ಪೇಟೆ
