ಕೆ.ಆರ್.ಪೇಟೆ : ತಾಲ್ಲೂಕಿನ ಅಕ್ಕಿಹೆಬ್ಬಾಳು ಹೋಬಳಿಯ ಸಾಕ್ಷಿಬೀಡು ಗ್ರಾಮದ ಗೋವಿಂದೆಗೌಡ ಹಾಗೂ ಸುಶೀಲಮ್ಮ ಅವರು ಪುತ್ರ ಅಭಿಷೇಕ್ (28) ಎಂಬ ಯುವಕ ವಿದ್ಯುತ್ ತಂತಿ ಸ್ಪರ್ಶಿಸಿ ಸಾವಿಗೀಡಾಗಿರುವ ಘಟನೆ ಶುಕ್ರವಾರ ಮದ್ಯಾಹ್ನ ನಡೆದಿದೆ.
ತೆಂಗಿನ ಮರ ಹತ್ತಿ ಎಳನೀರು ಕುಯುವ ಕೆಲಸ ಮಾಡುತ್ತಿದ್ದ ಮೃತ ಯುವ ಅಭಿಷೇಕ್ ಎಂದಿನಂತೆ ಸಾಕ್ಷಿಬೀಡು ಗ್ರಾಮದಲ್ಲಿ ತೆಂಗಿನ ಮರ ಹತ್ತಿ ಕೆಲಸ ಮಾಡುವ ಸಂದರ್ಭದಲ್ಲಿ ಮರದ ಮೇಲಿದ್ದ ವಿದ್ಯುತ್ ತಂತಿ ತಗುಲಿದ ಕೂಡಲೆ ಸ್ಥಳೀಯರು ಚಿಕಿತ್ಸೆಗಾಗಿ ಕೆ.ಆರ್.ಪೇಟೆ ತಾಲ್ಲೂಕು ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿದರೂ ಅದಾಗಲೇ ಪ್ರಾಣಪಕ್ಷಿ ಹಾರಿಹೋಗಿತ್ತು.ನಂತರ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ಮೃತದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಿದರು.
ಜೀವನಕ್ಕಾಗಿ ಮೃತ ಅಭಿಷೇಕ್ ಎಳನೀರು ಮರ ಹತ್ತಿ ಕುಟುಂಬಕ್ಕೆ ಆಧಾರವಾಗಿದ್ದ, ಎದೆಯೆತ್ತರ ಬೆಳೆದ ಮಗನನ್ನು ಕಳೆದುಕೊಂಡ ಪೋಷಕರು ದಿಕ್ಕು ತೋಚದೆ ಕಣ್ಣೀರಿಡುತ್ತಿದ್ದರೆ ಇತ್ತ ಸಂಬಂಧಿಕರು ಮತ್ತು ಸ್ನೇಹಿತರ ಆಕ್ರಂದನ ಮುಗಿಲು ಮುಟ್ಟುವಂತಿತ್ತು.ಕೆ.ಆರ್.ಪೇಟೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸುದ್ದಿಯೊಂದಿಗೆ ಮನು ಮಾಕವಳ್ಳಿ ಕೆ ಆರ್ ಪೇಟೆ
