ಕೊರಟಗೆರೆ:- ತಾಲೂಕಿನ ಎಲೆರಾಂಪುರದ ಕುಂಚಿಟಿಗ ಮಹಾ ಸಂಸ್ಥಾನ ಮಠದಲ್ಲಿ ಶ್ರೀ ಶ್ರೀ ಶ್ರೀ ಹನುಮಂತನಾಥ ಸ್ವಾಮೀಜಿಗಳ ಜನ್ಮದಿನವನ್ನು ಭಕ್ತಿಭಾವದಿಂದ ಹಾಗೂ ಸಂಭ್ರಮದಿಂದ ಆಚರಿಸಲಾಯಿತು.
ಈ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳ ಗಣ್ಯರು, ಸಮಾಜದ ಮುಖಂಡರು, ಭಕ್ತಾದಿಗಳು ಹಾಗೂ ಮಠದ ಶಿಷ್ಯರು ಸ್ವಾಮೀಜಿಗಳಿಗೆ ಪುಷ್ಪಾರ್ಚನೆ ಸಲ್ಲಿಸಿ, ಶಾಲು ಹೊದಿಸಿ ಗೌರವಿಸಿ ಜನ್ಮದಿನದ ಶುಭಾಶಯಗಳನ್ನು ಕೋರಿದರು.
ಸಿದ್ದರಬೆಟ್ಟದ ಶ್ರೀ ರಂಭಾಪುರಿ ಶಾಖಾ ಮಠದ ಶ್ರೀ ವೀರಭದ್ರ ಶಿವಾಚಾರ್ಯ ಸ್ವಾಮೀಜಿಗಳು ಶುಭ ಹಾರೈಸಿದರು.
ಮಾಜಿ ಕೌಶಲ್ಯ ಅಭಿವೃದ್ಧಿ ನಿಗಮ ಮಂಡಳಿ ಅಧ್ಯಕ್ಷ ಮುರಳಿದರ ಹಾಲಪ್ಪ, ಕೋಳಾಲ ಮಾಜಿ ಜಿಲ್ಲಾ ಪಂಚಾಯತಿ ಸದಸ್ಯ ಶಿವರಾಮಯ್ಯ, ಕಾಂಗ್ರೆಸ್ ಮುಖಂಡರಾದ ಮಾಲಿಂಗಪ್ಪ, ಪಿಎನ್ ಕೃಷ್ಣಮೂರ್ತಿ, ಎಂ ಎನ್ ಜೆ ಮಂಜುನಾಥ್, ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಹನುಮಂತ ರಾಯಪ್ಪ ಸೇರಿದಂತೆ ಹಲವು ಮುಖಂಡರು ಹಾಜರಿದ್ದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಗಣ್ಯರು, ಶ್ರೀ ಹನುಮಂತನಾಥ ಸ್ವಾಮೀಜಿಗಳು ಸಮಾಜದ ಶೈಕ್ಷಣಿಕ, ಧಾರ್ಮಿಕ ಹಾಗೂ ಸಾಮಾಜಿಕ ಅಭಿವೃದ್ಧಿಗೆ ನೀಡುತ್ತಿರುವ ಮಾರ್ಗದರ್ಶನ ಮತ್ತು ಸೇವೆಯನ್ನು ಶ್ಲಾಘಿಸಿದರು. ಅವರ ಆಶೀರ್ವಾದದಿಂದ ಸಮಾಜದಲ್ಲಿ ಸೌಹಾರ್ದತೆ, ಸಹಕಾರ ಮತ್ತು ಮಾನವೀಯ ಮೌಲ್ಯಗಳು ಮತ್ತಷ್ಟು ಬಲಗೊಳ್ಳಲಿ ಎಂದು ಹಾರೈಸಿದರು.
ಈ ಸಂದರ್ಭದಲ್ಲಿ ವಿಶೇಷ ಪೂಜೆ, ಮಂಗಳಾರತಿ ಹಾಗೂ ಪ್ರಸಾದ ವಿತರಣೆ ನಡೆಯಿತು. ಮಠದ ಆವರಣದಲ್ಲಿ ಭಕ್ತರ ಸಮ್ಮುಖದಲ್ಲಿ ಸರಳ ಹಾಗೂ ಅರ್ಥಪೂರ್ಣವಾಗಿ ಜನ್ಮದಿನ ಕಾರ್ಯಕ್ರಮ ನೆರವೇರಿತು.
ಕಾರ್ಯಕ್ರಮದಲ್ಲಿ ಮಠದ ಆಡಳಿತ ಮಂಡಳಿಯ ಸದಸ್ಯರು, ಕುಂಚಿಟಿಗ ಸಮಾಜದ ಮುಖಂಡರು, ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು, ಗ್ರಾಮಸ್ಥರು ಹಾಗೂ ಅಪಾರ ಸಂಖ್ಯೆಯ ಭಕ್ತಾದಿಗಳು ಉಪಸ್ಥಿತರಿದ್ದರು.
ಸ್ವಾಮೀಜಿಗಳ ಆರೋಗ್ಯ, ಆಯುಷ್ಯ ಮತ್ತು ಸಮಾಜಸೇವೆಯ ಕಾರ್ಯಗಳು ಇನ್ನಷ್ಟು ವಿಸ್ತಾರವಾಗಲೆಂದು ಎಲ್ಲರೂ ಪ್ರಾರ್ಥಿಸಿದರು.
– ಶ್ರೀನಿವಾಸ್ ಕೊರಟಗೆರೆ.
