ಕೊರಟಗೆರೆ:- ತಾಲ್ಲೂಕಿನ ಜಂಪೆನಹಳ್ಳಿ ಶಿವಪುರ ಗ್ರಾಮದಲ್ಲಿ ಗಣಪತಿ ಹಬ್ಬದ ಪ್ರಯುಕ್ತ ಗಜಪಡೆ ಗೆಳೆಯರ ಬಳಗದ ವತಿಯಿಂದ ಎರಡನೇ ವರ್ಷದ ಅದ್ದೂರಿ ಆರ್ಕೆಸ್ಟ್ರಾ ರಸ ಸಂಜೆ ಕಾರ್ಯಕ್ರಮವನ್ನು ಸಂಭ್ರಮದಿಂದ ಆಯೋಜಿಸಲಾಗಿತ್ತು.
ಗಣಪತಿ ಹಬ್ಬದ ಅಂಗವಾಗಿ ವಿನಾಯಕ ಮೂರ್ತಿಗೆ ವಿಶೇಷ ಪೂಜೆ ಹಾಗೂ ಧಾರ್ಮಿಕ ಕಾರ್ಯಕ್ರಮಗಳನ್ನು ನೆರವೇರಿಸಿದ ಬಳಿಕ ರಾತ್ರಿ ಆರ್ಕೆಸ್ಟ್ರಾ ಕಾರ್ಯಕ್ರಮ ನಡೆಯಿತು.
ಸಂಗೀತ ತಂಡದ ಕಲಾವಿದರು ಕನ್ನಡದ ಜನಪ್ರಿಯ ಚಲನಚಿತ್ರ ಗೀತೆಗಳು, ಭಾವಗೀತೆಗಳು ಹಾಗೂ ವಿವಿಧ ಮನರಂಜನಾ ಗೀತೆಗಳನ್ನು ಹಾಡಿ ರಂಜಿಸಿದರು. ಸಂಗೀತದ ತಾಳಕ್ಕೆ ಯುವಕರು ಹಾಗೂ ಗ್ರಾಮಸ್ಥರು ಕುಣಿದು ಸಂಭ್ರಮಿಸಿದರು.
ಕಾರ್ಯಕ್ರಮದಲ್ಲಿ ಜೆಡಿಎಸ್ ಮುಖಂಡ ಹಾಗೂ ಸಮಾಜ ಸೇವಕ ಪಿ.ಎನ್. ಕೃಷ್ಣಮೂರ್ತಿ ಮಾತನಾಡಿ, ಗಣಪತಿ ಹಬ್ಬವು ಭಕ್ತಿ, ಸಂಸ್ಕೃತಿ ಹಾಗೂ ಗ್ರಾಮಸ್ಥರ ಒಗ್ಗಟ್ಟನ್ನು ಸಾರುವ ಹಬ್ಬವಾಗಿದೆ. ಯುವಕರು ಒಗ್ಗೂಡಿ ಇಂತಹ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸುತ್ತಿರುವುದು ಶ್ಲಾಘನೀಯ ಎಂದರು.
ಗ್ರಾಮದ ಇತಿಹಾಸ ಪ್ರಸಿದ್ಧ ಶ್ರೀ ಆಂಜನೇಯಸ್ವಾಮಿ ದೇವಾಲಯದ ಜೀರ್ಣೋದ್ಧಾರಕ್ಕಾಗಿ ₹1 ಲಕ್ಷ ನೆರವು ನೀಡುವುದಾಗಿ ಪಿ.ಎನ್. ಕೃಷ್ಣಮೂರ್ತಿ ಘೋಷಿಸಿದರು.
ಸಾಮಾಜಿಕ ಹೋರಾಟಗಾರ ಟೈಗರ್ ನಾಗ್ ಮಾತನಾಡಿ, ಹಬ್ಬಗಳು ಧಾರ್ಮಿಕ ಆಚರಣೆಯ ಜತೆಗೆ ಜನರನ್ನು ಒಗ್ಗೂಡಿಸುವ ಸಾಂಸ್ಕೃತಿಕ ವೇದಿಕೆಗಳಾಗಿವೆ. ಯುವಕರು ಸಂಘಟಿತರಾಗಿ ಗ್ರಾಮದ ಅಭಿವೃದ್ಧಿ ಹಾಗೂ ಸಾಮಾಜಿಕ ಕಾರ್ಯಗಳಲ್ಲಿಯೂ ತೊಡಗಿಸಿಕೊಳ್ಳಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಕೈಮರ ಗ್ರಾಮದ ಹಿರಿಯ ಮುಖಂಡರು ಬುದಾನಿ ಉಮಾಶಂಕರ್, ಅಗ್ರಹಾರ ಗ್ರಾಮ ಪಂಚಾಯಿತಿ ಮಾಜಿ ಉಪಾಧ್ಯಕ್ಷ ರವಿಕುಮಾರ್, ಪತ್ರಕರ್ತ ಸತೀಶ್,ಲಾರಿ ಬಸವರಾಜಪ್ಪ. ಎಲೆಕ್ಟ್ರಿಕಲ್ ಕಂಟ್ರಾಕ್ಟರ್ ರಮೇಶ್, ದಿಯಾ ಸೌಂಡ್ಸ್ ಮಾಲೀಕರಾದ ಸಂಜೀವ್ ಮೂರ್ತಿ, ಶ್ರಬಂಡೆ ಉದ್ಯಮಿ ಮಂಜುನಾಥ್,ಮೋಹನ, ಶ್ರೀಧರ,ಅರ್ಚಕರಾದ ಜಯಸಿಂಹ ಸೇರಿದಂತೆ ಸುತ್ತಮುತ್ತಲಿನ ಗ್ರಾಮಸ್ಥರು ಭಾಗಿಯಾಗಿದ್ದರು.
– ಶ್ರೀನಿವಾಸ್ ಕೊರಟಗೆರೆ.
