ಕೊರಟಗೆರೆ: ತಾಲ್ಲೂಕಿನ ಪಾತ್ಗಾನಹಳ್ಳಿ ಕ್ಷೇತ್ರದ ಪ್ರಸಿದ್ಧ ಶ್ರೀ ಕಾಟಮ್ಮ ಲಿಂಗೇಶ್ವರ ಸ್ವಾಮಿ ಹಾಗೂ ಗೊಲ್ಲಹಳ್ಳಿ ಮಾರಮ್ಮ ದೇವಸ್ಥಾನದಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತ ಅಮಾವಾಸ್ಯೆ ಮತ್ತು ಬಲಿಪಾಡ್ಯಮಿ ದಿನದಂದು ವಿವಿಧ ಧಾರ್ಮಿಕ ಪೂಜಾ ಕೈಂಕರ್ಯಗಳು ಭಕ್ತಿಭಾವದಿಂದ ನೆರವೇರಿದವು.
ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ದೇವಾಲಯವನ್ನು ವಿವಿಧ ಬಗೆಯ ಬಣ್ಣಬಣ್ಣದ ಹೂವುಗಳಿಂದ ಸುಂದರವಾಗಿ ಅಲಂಕರಿಸಲಾಗಿತ್ತು. ದೇವಾಲಯದ ಸುತ್ತಮುತ್ತ ತಳಿರು ತೋರಣಗಳನ್ನು ಕಟ್ಟಿ ಹಬ್ಬದ ಸಂಭ್ರಮಕ್ಕೆ ವಿಶೇಷ ಮೆರುಗು ನೀಡಲಾಗಿತ್ತು. ಶ್ರೀ ಕಾಟಮ್ಮ ಲಿಂಗೇಶ್ವರ ಸ್ವಾಮಿ ಹಾಗೂ ಗೊಲ್ಲಹಳ್ಳಿ ಮಾರಮ್ಮನಿಗೆ ವಿಶೇಷ ಹೂವಿನ ಅಲಂಕಾರ, ಅಭಿಷೇಕ, ಅರ್ಚನೆ, ದೀಪಾರಾಧನೆ ಮತ್ತು ಮಹಾಮಂಗಳಾರತಿ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಸಾಂಪ್ರದಾಯಿಕವಾಗಿ ನೆರವೇರಿಸಲಾಯಿತು.
ಈ ಸಂದರ್ಭದಲ್ಲಿ ಪಾತ್ಗಾನಹಳ್ಳಿ ಗೊಲ್ಲರಹಟ್ಟಿ, ಹೊಸಕೋಟೆ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ನೂರಾರು ಭಕ್ತರು ಹಾಗೂ ವಿವಿಧ ಸಮುದಾಯಗಳ ಜನರು ದೇವಸ್ಥಾನಕ್ಕೆ ಆಗಮಿಸಿ ದೇವರ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು. ಕುಟುಂಬದ ಸುಖ, ಶಾಂತಿ, ಆರೋಗ್ಯ ಹಾಗೂ ಸಮೃದ್ಧಿಗಾಗಿ ದೇವರಲ್ಲಿ ಪ್ರಾರ್ಥನೆ ಸಲ್ಲಿಸಿದರು.
ಇನ್ನು ಹೊಸಕೋಟೆ ಗೊಲ್ಲರಹಟ್ಟಿಯ ಯುವಕರಿಂದ ಪ್ರದರ್ಶಿಸಲಾದ ಸಾಂಪ್ರದಾಯಿಕ ಕೋಲಾಟ ಕಾರ್ಯಕ್ರಮವು ಭಕ್ತರು ಹಾಗೂ ಗ್ರಾಮಸ್ಥರ ಗಮನ ಸೆಳೆಯಿತು. ಕೋಲಾಟದ ಮೂಲಕ ಗ್ರಾಮೀಣ ಸಂಸ್ಕೃತಿ ಮತ್ತು ಸಂಪ್ರದಾಯದ ಸೊಗಡನ್ನು ಅನಾವರಣಗೊಳಿಸಲಾಯಿತು.
ಒಟ್ಟಾರೆ, ದೀಪಾವಳಿ ಹಬ್ಬದ ಪ್ರಯುಕ್ತ ಪಾತ್ಗಾನಹಳ್ಳಿ ಕ್ಷೇತ್ರದಲ್ಲಿ ನಡೆದ ವಿಶೇಷ ಪೂಜಾ ಕಾರ್ಯಕ್ರಮಗಳು ಭಕ್ತರಲ್ಲಿ ಧಾರ್ಮಿಕ ಉತ್ಸಾಹ ಮೂಡಿಸಿದವು. ಧಾರ್ಮಿಕ ಆಚರಣೆಗಳೊಂದಿಗೆ ಸಾಂಸ್ಕೃತಿಕ ಕಾರ್ಯಕ್ರಮಗಳೂ ಮೇಳೈಸಿ, ಗ್ರಾಮಸ್ಥರು ಒಗ್ಗಟ್ಟಿನಿಂದ ಹಬ್ಬವನ್ನು ಸಂಭ್ರಮದಿಂದ ಆಚರಿಸಿದರು.
ವರದಿ : ನರಸಿಂಹಯ್ಯ, ಹೊಸಕೋಟೆ
