ಮರುಭೂಮಿಯ ಹಡಗು ಎಂದೇ ಖ್ಯಾತಿನಾಮದ ಒಂಟೆ ಸುಂದರವಾದ ಮರಳುಗಾಡಿನ ತೋಟದಲ್ಲಿ ಸಾಕಷ್ಟು ನೀರು ಕುಡಿದು ತನ್ನ ಒಡೆಯನನ್ನು ನೋಡಿ ತಾನು ಕರೆದೋಯ್ಯಲು ಸಿದ್ದನಿದ್ದೇನೆ ಎನ್ನುವ ಸೂಚನೆ ನೀಡಿತು. ಇವನು ಸಹ ಅವನ ಬಾಯಾರಿಕೆ ನೀಗಿಸಿ ದೂರವಿದ್ದ ವ್ಯಾಪಾರ ಸ್ಥಳದ ಕಡೆ ತನ್ನ ಒಂಟೆಯ ಮೇಲೆ ಏರಿ ಸಂತೋಷವಾಗಿ ಹೊರಟ. ಉರಿ ಬಿಸಿಲಿನ ಧಗೆ ಮತ್ತು ಕಣ್ಣು ಕೊರೈಸುವ ಮರಳಿನ ಬಿರುಗಾಳಿ ಅವನ ಉತ್ಸಾಹವನ್ನು ಕಡಿಮೆ ಮಾಡಿರಲಿಲ್ಲ. ದಾರಿ ಮಬ್ಬಾಗಿದ್ದರು ಆತನ ಶಿಳ್ಳೆ ಒಂಟೆಗೆ ಮುದವನ್ನು ನೀಡುತ್ತಿತ್ತು. ಗಾಳಿಯ ಶಬ್ದ ಮತ್ತು ಒಡೆಯನ ಶಿಳ್ಳೆ ಒಂಟೆಗೆ ಖುಶಿ ನೀಡಿ ನರ್ತೈಸುತ್ತಾ ನಡಿಗೆ ಹಾಕುತ್ತಿತ್ತು. ದಿನಗಳೇ ಕಳೆದಿರಬಹುದು, ಈ ವ್ಯಕ್ತಿ ತಾನು ಸೇರಬೇಕಾದ ಸ್ಥಳಕ್ಕೆ ಬಂದು ಸೇರಿದ. ವ್ಯಾಪಾರಿಗಳು ಸುತ್ತುವರಿದು ಇವನು ತಂದ ಖರ್ಜೂರ ಮತ್ತು ಜೇನುತುಪ್ಪವನ್ನು ಪರೀಕ್ಷಿಸಲಾರಂಬಿಸಿದರು. ಇವನು ತನ್ನ ಡೇರೆಯನ್ನು ಸಿದ್ಧಗೊಳಿಸಿದ.
ರಾತ್ರಿ ಸರಿದೊಡನೆ ವ್ಯಾಪಾರಕ್ಕೆ ಅಣಿಯಾದ. ಹಣವಿರಲಿಲ್ಲ, ಅಹಂಕಾರವಿರಲಿಲ್ಲ, ದ್ವೇಷವಿರಲಿಲ್ಲ, ಎಲ್ಲೆಲ್ಲೂ ಸೌಹಾರ್ದತೆ ಮತ್ತು ಬಂಧತ್ವದ ವಾತವರಣ ಅಲ್ಲಿಯದಾಗಿತ್ತು. ವಸ್ತುಗಳ ವಿನಮಯವೇ ಅಂದಿನ ವ್ಯಾಪಾರ. ತಂದಿದ್ದ ಖರ್ಜೂರ ಮತ್ತು ಜೇನುತುಪ್ಪ ಕೊಟ್ಟು ಕೆಲವು ತಿಂಗಳಿಗೆ ಅಗುವಷ್ಟು ಇವನಿಗೆ ಮತ್ತು ಈತನ ಒಂಟೆಗೆ ಅಹಾರವನ್ನು ಬೇರೆ ವರ್ತಕರ ಜೊತೆ ವಿನಮಯ ಮಾಡಿಕೊಂಡ. ಅಷ್ಟು ಹೊತ್ತಿಗೆ ಜನರು ಅತ್ತ ಇತ್ತ ಓಡಾಡಲು ಶುರು ಮಾಡಿದರು. ಗುಸು ಗುಸು ಮಾತನಾಡಲು ಪ್ರಾರಂಭಿಸಿದರು. ಎಲ್ಲರ ದೃಷ್ಟಿ ಒಂದು ದಿಕ್ಕಿಗೆ ನೆಟ್ಟಿತು. ತಮ್ಮ ತಮ್ಮ ಕೈ ಬೆರಳು ಆ ದಿಕ್ಕಿನ ಕಡೆ ಸನ್ನೆ ಮಾಡಿದವು. ಕುತೂಹಲದಿಂದ ನೋಡಿದ ಈತನಿಗೆ ಆಶ್ಚರ್ಯ ಕಾದಿತ್ತು.
ಶುಬ್ರ ಬಿಳಿ ನಿಲುವಂಗಿ ಧರಿಸಿದ್ದ ಒಬ್ಬ ಅಜಾನು ಬಾಹು ವ್ಯಕ್ತಿ ಉನ್ಮಾದ ಬರಿತನಾಗಿ, ತಲೆ ಮೇಲೇತ್ತಿ, ಎರಡು ಕೈ ಚಾಚಿ ಅರ್ಥವಾಗದ ಭಾಷೆಯಲ್ಲಿ ಪಡುವಣ ದಿಕ್ಕಿಗೆ ನಿಧಾನವಾಗಿ ಸಾಗುತ್ತಾ ಅಲ್ಲೇ ಮೈಲುಗಳ ದೂರದಲ್ಲಿರುವ ಬೆಟ್ಟದ ಕಡೆ ನೆಡೆದ. ಅಲ್ಲಿದ್ದ ವರ್ತಕರು ಮತ್ತು ನಾಗರಿಕರು ಏನೂ ತೋಚದೆ ಆತನನ್ನೆ ಹತ್ತಿರದಿಂದ ಆಶ್ಚರ್ಯವಾಗಿ ನೋಡುತ್ತಿದ್ದರು. ಅರ್ಥವಾಗದ ಭಾಷೆ, ಪರವಶೆಯ ಸ್ಥಿತಿ ಮತ್ತು ಮುಗುಳ್ನಗೆಯಿಂದ ಕೂಡಿದ ಮುಖ ಕಂಡು ನೆರೆದಿದ್ದ ಜನ ಭಾವಪರವಶರಾದರು. ಅಲ್ಲಿಯವರೆಲ್ಲಾ ಆತನನ್ನು ಕುರಿತು ಅಸಾಧಾರಣ, ಅಸಾಮಾನ್ಯ ಮತ್ತು ವಿಸ್ಮಯ ವ್ಯಕ್ತಿಯೆಂದು ಪರಾಕ್ ಹೇಳುತ್ತಿದ್ದರು. ಹತ್ತು ಜನ ಇದ್ದವರು ನೂರಾದರು. ನೂರಾದವರು ಸಹಸ್ರರಾದರು. ಸಂಖ್ಯೆ ಬೆಳೆಯುತ್ತಾಹೋಯಿತು. ಆದರೆ ಆವನ ಭಂಗಿ ಹಾಗೇ ಇತ್ತು. ಅಲ್ಲಾಡಿಸಿದರೂ ಅಲ್ಲಾಡಲಿಲ್ಲ. ಆ ಭಂಗಿಯಲ್ಲೇ ಗೊಂಬೆಯಂತಿದ್ದ. ಯಾಂತ್ರಿಕವಾಗಿ ಬೆಟ್ಟದ ಕಡೆ ನಡೆಯುತ್ತಿದ್ದ.
ಅವನಿಗೆ ಅವನ ಅರಿವೇ ಇರಲಿಲ್ಲ. ಆತನಿಗೆ ಪ್ರಪಂಚವೇ ಶೂನ್ಯವಾಗಿ ತೋರುತಿತ್ತು. ಅವನ ತಲೆಯ ತುಂಬ ಬೆಟ್ಟವೇ ಇತ್ತು. ನಡೆಯುತ್ತಿದ್ದ ಇವನಿಗೆ ಯಾರು ಮುಂದೆ ಇದ್ದಾರೆ, ಯಾವ ವಸ್ತು ಮುಂದೆ ಇದೆ, ಕಲ್ಲು ಇದೆಯಾ, ಬಂಡೆ ಇದೆಯಾ, ಗಿಡ ಮರಗಳು ಇವೆಯಾ, ಹುಳ ಉಪ್ಪಟ ಇದೆಯಾ, ಹಾವು ಚೇಳು ಇದ್ದಾವ ಹೀಗೆ ಯಾವ ಪರಿವೇ ಇರಲಿಲ್ಲ. ಅಲ್ಲಿದ್ದವರು ಇವನ ಮುಗುಳ್ನಗೆ ನೋಡಿ ಇವನಲ್ಲಿ ಯಾವುದೋ ಶಕ್ತಿ ಒಳ ಸೇರಿದೆ ಎನ್ನುವ ಬಲವಾದ ನಂಬಿಕೆಗೆ ಬಂದರು. ಆತನಿಗೆ ಸುಸ್ತು ಕಾಣಲಿಲ್ಲ, ಯಾರೇ ನಿಲ್ಲಿಸಲು ಬಂದರೂ ಜಗ್ಗಲಿಲ್ಲ, ಮುನ್ನುಗ್ಗುತ್ತಿದ್ದ ಈತನಿಗೆ ಯಾರು ಸಾಟಿ ಇರಲಿಲ್ಲ. ಬೆಟ್ಟವನ್ನು ಎಕಾಗ್ರತೆಯಿಂದ ಹತ್ತಿ ನೆಡೆದ. ತುದಿಗೆ ಬಂದು ನಿಂತ. ನಿಂತು ಪಕ್ಕನೇ ಹಿಂಬಾಲಕರನ್ನು ನೋಡಿದ. ಎಲ್ಲರಿಗೂ ವಿದ್ಯುತ್ತ ಶಕ್ತಿ ಪ್ರವಹಿಸಿದಂತೆ ಬಾಸವಾಯಿತು.
ಈತನ ತಲೆಯ ಹಿಂಭಾಗದಲ್ಲಿ ಸೂರ್ಯ ಮುಳುಗುತಿದ್ದ. ಈ ದೃಶ್ಯ ನೋಡಿದವರು ಆತನ ತಲೆಯಿಂದ ಬೆಳಕು ಹೊಮ್ಮುತ್ತಿದೆನ್ನುವ ನಿರ್ಣಯಕ್ಕೆ ಬಂದರು. ಅಲ್ಲಿ ಇದ್ದವರು ದೇವರೇ ಕೆಳಗೆ ಇಳಿದಿರುವನು ಮತ್ತು ಅವನ ಅರ್ಥವಾಗದ ಬಾಷೆ ದೇವರ ಸಂದೇಶ ಎಂದರು. ಆದರೆ ಅವನ ನಿಲುವು ಅಥವ ಭಂಗಿ ಭಂಗವಾಗಲಿಲ್ಲ. ಎಲ್ಲರೂ ತಲೆ ಬಾಗಿ ದೇವತಾ ಮನುಷ್ಯನನ್ನು ಹೆಗಲ ಮೇಲೆ ಕೂರಿಸಿಕೊಂಡು ಕೆಳಗೆ ಇಳಿದರು. ದೇವರೇ ಬಂದನೆಂದು ಕುಣಿದು ಕುಪ್ಪಳಿಸಿದರು. ಕುಡಿದು ನರ್ತನ ಮಾಡಿದರು. ಇವೆಲ್ಲದರ ನಡುವೆ ಪರಮಾತ್ಮ ಸಂಭೂತಿ ಮತ್ತು ಸಂದೇಶವನ್ನು ತಂದ ನರ ಮಾನವ ಗೊಂಬೆಯಾಗಿಯೇ ಉಳಿದಿದ್ದ. ಅರ್ಥವಾಗದ ಭಾಷೆಯನ್ನು ಹತ್ತಿರ ಇದ್ದವರು ತರ್ಜಮೆ ಮಾಡಿ ತಮಗೆ ಬೇಕಾದಂತಹ ಅರ್ಥಗಳನ್ನು ನೀಡುತ್ತಾ ಬಂದರು. ಸಂಕ್ಷಿಪ್ತವಾಗಿ ವರ್ಷಗಳು ಕಳೆದಂತೆ ಅನುಯಾಯಿಗಳು ಅರ್ಥವಾಗದ ಆತನ ಭಾಷೆಯನ್ನು ತಿದ್ದಿ ತಿದ್ದಿ ನಾವೇ ಶ್ರೇಷ್ಠರು, ನಮ್ಮ ಆಚರಣೆಯೇ ಸರ್ವ ಶ್ರೇಷ್ಠ, ನಾವು ಹೇಳಿದಂತೆ ಕೇಳಬೇಕು ಇತ್ಯಾದಿ. ಆದರೆ ಈ ದೇವತಾ ಸ್ವರೂಪಿ ಗೊಂಬೆಯಾಗೇ ಇದ್ದ.
ಹತ್ತಿರ ಇದ್ದವರು ಇವನ ಅನುಯಾಯಿಗಳಾದರು. ಇವರು ಆರಿಸಿದವರು ರಾಜರಾದರು. ರಾಜರು ನಾಗರಿಕರನ್ನು ಸೈನಿಕರನ್ನಾಗಿ ಆಯ್ದುಕೊಂಡರು. ಕೇಳದೆ ಇರುವವರನ್ನು ಬಂಧಿಸಿದರು. ವಿರುದ್ಧ ನಡೆದುಕೊಂಡವರನ್ನು ಕೊಂದರು. ಚಿಕ್ಕ ಸಾಮ್ರಾಜ್ಯವನ್ನು ದೊಡ್ಡದಾಗಿ ಮಾಡುತ್ತಾ ಬಂದರು. ಹೆಂಗಸರನ್ನು ತಮ್ಮ ವಶಕ್ಕೆ ತೆಗೆದುಕೊಂಡು ಉಪಯೋಗಿಸಿದರು ಮತ್ತು ಮಕ್ಕಳನ್ನು ಗುಲಾಮಗಿರಿಗೆ ತಳ್ಳಿದರು. ಆದರೇ ಸಂದೇಶವನ್ನು ಹೊತ್ತ ದೇವ ಮಾನವ ಕಲ್ಲಿನ ಗೊಂಬೆಯಾಗಿದ್ದ. ಈ ಕಲ್ಲಿನ ಮೂರ್ತಿಯನ್ನು ಯಾರೂ ವಿಚಾರಿಸಲಿಲ್ಲ, ಹಲ್ಲು ಉಜ್ಜಿದ್ದಾನೋ ಇಲ್ಲವೋ, ತಿಂದನೋ ಇಲ್ಲವೋ, ನೀರು ಕುಡಿದನೋ ಇಲ್ಲವೋ, ಬಟ್ಟೆ ಬದಲಿಸಿದನೋ ಇಲ್ಲವೋ ಆದರೆ ಅಲ್ಲಿದ್ದವರಿಗೆ ಬೇಕಾಗಿತ್ತು ಈ ಅಲಂಕಾರವಿಲ್ಲದ ಮೂರ್ತಿ.
ರಾಜರು ದೇವರನ್ನು ಹುಟ್ಟಿ ಹಾಕಿದರು. ಈ ದೇವ ಬಲಿಷ್ಠನಾದ. ಬೇರೆ ದೇವರುಗಳ ಶಕ್ತಿ ಕಮ್ಮಿ ಆಗುತ್ತಾ ಬಂದಿತು. ತಮ್ಮ ತಮ್ಮ ದೇವತೆಗಳನ್ನು ಉಳಿಸಿಕೊಳ್ಳಲು ಮಹಾ ಯುದ್ದಗಳೇ ನಡೆದುಹೋದವು. ಲಕ್ಷಗಟ್ಟಲೆ ಅಮಾಯಕರು ಹತರಾದರು. ಇವೆಲ್ಲದರ ನಡುವೆ “Messenger of God” ಕಲ್ಲಿನ ಹಾಗೆಯೇ ಕೂತಿದ್ದ. ಒಂದು ದಿವಸ ಈತನ ಸುತ್ತಲು ಯುದ್ಧ ರಣ ಕಹಳೆ ಆಗುತ್ತಿತ್ತು, ತನ್ನ ಅರಿವಿಗೆ ಬಾರದ ನರಮೇಧಗಳು ಆದವು, ಸೈನಿಕರ ರಣ ಕೇಕೆಗಳು ಕಂಡುಬಂದವು, ಜನರ ಉತ್ತುಂಗ ಉನ್ಮಾದಗಳ ನಡುವೆ ಶಾಶ್ವತವಾಗಿ ಈ GOD ಕಣ್ಣು ಮುಚ್ಚಿದ್ದ. ಇವಲ್ಲೆವನ್ನು ಕಂಡಿದ್ದ ವರ್ತಕ ಮೂಖ ಪ್ರೇಕ್ಷಕನಿಗಿದ್ದ. ತನ್ನ ಮನಸ್ಸಿನಲ್ಲೇ ಹೀಗೂ ಆಗಬಹುದೇನ್ನುವ ಆಲೋಚನೆಯಲ್ಲೇ ಸಾವಿಗೆ ಜಾರಿದ್ದ.
ನನ್ನಲ್ಲಿಗೆ “ಕೆಟಟೋನಿಕ್ (Catatonic) ಸ್ಕಿಜೋಫ್ರೇನಿಯ (ಇಚ್ಚಿತ ವಿಕಲತೆ)” ಕಾಯಿಲೆಗೆ ತುತ್ತಾದವರು ಬಂದಿರುತ್ತಾರೆ. ರೋಗಿಗಳು ಪೋಶ್ಚರಿಂಗ್ (posturing) ಅಥವ ವಿವಿದ ಭಂಗಿಯಲ್ಲಿ ಕಂಡುಬರುತ್ತಾರೆ. ಇವರ ಮಾತುಗಳು ಅರ್ಥವಾಗುವುದಿಲ್ಲ. ಇದನ್ನು “ನಿಯಾಲಾಲಿಸಮ್ (neololism)” ಅಥವ “ಫಾರ್ಮಲ್ ತಾಟ್ ಡಿಸಾರ್ಡರ್ (Formal thought disorder)” ಎಂದೆನ್ನುತ್ತೇವೆ. ಇಂದು ಈ ಕಾಯಿಲೆಗೆ ಔಷದಿ ಇದೆ. ವಿದ್ಯುತ್ ಕಂಪನ ಚಿಕಿತ್ಸೆಗೆ ಬೇಗ ಸ್ಪಂದಿಸಿ ಗುಣಮುಖರಾಗುತ್ತಾರೆ. ಹಿಂದೆ ಇಂತಹ ಕಾಯಿಲೆಗಳಿಗೆ ಔಷಧ ಇರಲಿಲ್ಲ. ಇಂದು ನಮ್ಮ ಧರ್ಮಾಧಂತೆಯ ಭ್ರಮೆಗಳ ನಂಬಿಕೆಗೆ ಔಷಧಿ ಇಲ್ಲ….
ಮುಂದುವರಿಯುವುದು…
-ಡಾ॥ ಎ.ಎಂ.ನಾಗೇಶ್
ಖ್ಯಾತ ಮನೋವೈದ್ಯ

