ರಾಮನಾಥಪುರ: ಇಲ್ಲಿನ ಪ್ರಸನ್ನ ಶ್ರೀ ಸುಬ್ರಹ್ಮಣ್ಯಸ್ವಾಮಿ ದೇವಾಲಯದಲ್ಲಿ ಆಯುಧಪೂಜೆಯ ಮೂರನೇ ದಿನದ ಅಂಗವಾಗಿ ಸಾಮೂಹಿಕ ಚಂಡಿಕಾಹೋಮವನ್ನು ಶ್ರದ್ಧಾಭಕ್ತಿಯಿಂದ ನೆರವೇರಿಸಲಾಯಿತು. ದೇವಾಲಯದ ತಂತ್ರಿಗಳಾದ ಭಾರತೀ ರಮಣ ಆಚಾರ್ಯ ಅವರು ಧಾರ್ಮಿಕ ವಿಧಿವಿಧಾನಗಳನ್ನು ನಡೆಸಿಕೊಟ್ಟರು.
ಸನಾತನ ಧರ್ಮದ ಪರಂಪರೆ ಹಾಗೂ ಸಂಸ್ಕೃತಿಯನ್ನು ಸಾರುವ ಉದ್ದೇಶದಿಂದ ದೇವಾಲಯದಲ್ಲಿ ಪ್ರತಿವರ್ಷ ಆಶ್ವಯುಜ ಮಾಸದ ಶುಕ್ಲ ತದಿಗೆಯಂದು ಸಾಮೂಹಿಕ ಚಂಡಿಕಾಯಾಗವನ್ನು ಆಯೋಜಿಸಿಕೊಂಡು ಬರಲಾಗುತ್ತಿದೆ. ದೇವಾಲಯದ ಸಭಾಂಗಣದಲ್ಲಿ ನಡೆದ ಹೋಮದ ಬಳಿಕ ಮಹಾಮಂಗಳಾರತಿ ನೆರವೇರಿಸಲಾಯಿತು.

ನಂತರ ಪ್ರವಚನ ನೀಡಿದ ದೇವಾಲಯದ ತಂತ್ರಿಗಳಾದ ಭಾರತೀ ರಮಣ ಆಚಾರ್ಯ ಅವರು, ದೇವಾಲಯಗಳಲ್ಲಿ ನಡೆಯುವ ಇಂತಹ ಪೂಜಾ-ಸಂಸ್ಕಾರಗಳಲ್ಲಿ ಭಕ್ತರು ಭಾಗವಹಿಸುವ ಮೂಲಕ ತಮ್ಮ ಜೀವನದಲ್ಲಿ ಕೆಟ್ಟ ಆಲೋಚನೆಗಳನ್ನು ದೂರಮಾಡಿ, ಒಳ್ಳೆಯ ಗುಣಗಳನ್ನು ಅಳವಡಿಸಿಕೊಳ್ಳಲು ಪ್ರೇರಣೆ ಪಡೆಯಬೇಕು ಎಂದು ತಿಳಿಸಿದರು.

ಜೀವನದಲ್ಲಿ ಎದುರಾಗುವ ಕಷ್ಟಗಳು ನಿವಾರಣೆಯಾಗಲು ದೈವಭಕ್ತಿಯ ಮೇಲೆ ನಂಬಿಕೆ ಇರಿಸಿಕೊಂಡು, ನಿರಂತರವಾಗಿ ದೇವರ ಆರಾಧನೆ ಹಾಗೂ ಸತ್ಕಾರ್ಯಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದು ಅವರು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ದೇವಾಲಯದ ಹಿಂದಿನ ದೀವಾನರು, ವೇದಮೂರ್ತಿಗಳಾದ ಆಚಾರ್ಯರು, ವೇ. ನಿತೀಶ್, ವ್ಯವಸ್ಥಾಪಕರಾದ ವೇ. ಸೋಮಶೇಖರ್, ಸಹಾಯಕ ವ್ಯವಸ್ಥಾಪಕರಾದ ವೇ. ಅಭಿಷೇಕ್, ಪ್ರದೀಪ್ ಬನ್ನಿತಾಯ, ವೇ. ವರ್ಷ ಕಾರ್ತಿಕ ಸೋಮಯಾಜಿ ಸೇರಿದಂತೆ ಶಿಷ್ಯವೃಂದದವರು ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಪ್ರತಿದಿನ ಭಕ್ತರಿಗೆ ಅನ್ನದಾಸೋಹ
ರಾಮನಾಥಪುರದ ಶ್ರೀ ಸುಬ್ರಹ್ಮಣ್ಯಸ್ವಾಮಿ ದೇವಾಲಯಕ್ಕೆ ಆಗಮಿಸುವ ಭಕ್ತರಿಗಾಗಿ ಪ್ರತಿದಿನ ಅನ್ನದಾಸೋಹದ ವ್ಯವಸ್ಥೆ ಮಾಡಲಾಗಿದೆ. ಮಧ್ಯಾಹ್ನ 12 ಗಂಟೆಗೆ ಆರಂಭವಾಗುವ ಮಹಾಪೂಜೆಯ ಬಳಿಕ ಭಕ್ತರಿಗೆ ಮಧ್ಯಾಹ್ನ 2 ಗಂಟೆಯವರೆಗೆ ಅನ್ನಪ್ರಸಾದ ವಿತರಿಸಲಾಗುತ್ತದೆ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ
ದೇವಾಲಯದಲ್ಲಿ ನಡೆಯುವ ಪೂಜೆ ಹಾಗೂ ವಿವಿಧ ಸೇವೆಗಳ ಕುರಿತು ಹೆಚ್ಚಿನ ಮಾಹಿತಿಗಾಗಿ ಭಕ್ತರು ಈ ಕೆಳಗಿನ ದೂರವಾಣಿ ಸಂಖ್ಯೆಗಳ ಮೂಲಕ ಸಂಪರ್ಕಿಸಬಹುದು.
- ದೇವಾಲಯದ ಕಚೇರಿ: 9481012399
- ವ್ಯವಸ್ಥಾಪಕರಾದ ವೇ. ಸೋಮಶೇಖರ್: 9964546947, 8660436527
- ಸಹಾಯಕ ವ್ಯವಸ್ಥಾಪಕರಾದ ವೇ. ಅಭಿಷೇಕ್: 9482033754
ದೇವಾಲಯದ ವತಿಯಿಂದ ಭಕ್ತರಿಗೆ ಈ ಮನವಿ ಮಾಡಲಾಗಿದೆ.
– ಕುಮಾರಸ್ವಾಮಿ ಎಂ.ಎನ್.
