ನವದೆಹಲಿ: ವಿಮಾನ ಪ್ರಯಾಣದ ವೇಳೆ ಪವರ್ ಬ್ಯಾಂಕ್ ಬಳಸಿಕೊಂಡು ಮೊಬೈಲ್, ಟ್ಯಾಬ್ ಸೇರಿದಂತೆ ಇತರ ಎಲೆಕ್ಟ್ರಾನಿಕ್ ಸಾಧನಗಳನ್ನು ಚಾರ್ಜ್ ಮಾಡುವುದನ್ನು ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ (DGCA) ಸಂಪೂರ್ಣವಾಗಿ ನಿಷೇಧಿಸಿದೆ. ಜನವರಿ 2026ರಿಂದ ಈ ಹೊಸ ಸುರಕ್ಷತಾ ನಿಯಮಗಳು ದೇಶದ ಎಲ್ಲಾ ವಿಮಾನಯಾನ ಸಂಸ್ಥೆಗಳಲ್ಲಿ ಕಟ್ಟುನಿಟ್ಟಾಗಿ ಜಾರಿಯಾಗಿವೆ.
ಡಿಜಿಸಿಎ ಈ ನಿರ್ಧಾರ ಕೈಗೊಳ್ಳಲು ಪ್ರಮುಖ ಕಾರಣವೆಂದರೆ ಪವರ್ ಬ್ಯಾಂಕ್ಗಳಲ್ಲಿ ಬಳಕೆಯಾಗುವ ಲಿಥಿಯಂ ಬ್ಯಾಟರಿಗಳಿಂದ ಉಂಟಾಗುವ ಅಗ್ನಿ ಅಪಾಯ. ಲಿಥಿಯಂ ಬ್ಯಾಟರಿಗಳು ಓವರ್ಹೀಟ್ ಆಗಿ ಬೆಂಕಿ ಹತ್ತಿಕೊಳ್ಳುವ ಸಾಧ್ಯತೆ ಹೆಚ್ಚಿದ್ದು, ಇತ್ತೀಚಿನ ವರ್ಷಗಳಲ್ಲಿ ದೇಶ–ವಿದೇಶಗಳಲ್ಲಿ ಹಲವು ಅಪಾಯಕಾರಿ ಘಟನೆಗಳು ವರದಿಯಾಗಿವೆ. ಇಂಡಿಗೋ ವಿಮಾನದಲ್ಲಿ ಪವರ್ ಬ್ಯಾಂಕ್ನಿಂದ ಬೆಂಕಿ ಕಾಣಿಸಿಕೊಂಡ ಘಟನೆ ಹಾಗೂ ದಕ್ಷಿಣ ಕೊರಿಯಾದಲ್ಲಿ ಸಂಭವಿಸಿದ ಘಟನೆಗಳು ಡಿಜಿಸಿಎ ಗಮನಕ್ಕೆ ಬಂದ ಹಿನ್ನೆಲೆಯಲ್ಲಿ, ನವೆಂಬರ್ 2025ರಲ್ಲಿ Dangerous Goods Advisory Circular ಹೊರಡಿಸಲಾಗಿತ್ತು.
ಇದನ್ನು ಓದಿ: ಭಾರತದ ಮೊದಲ ದೊಡ್ಡ ಕೊಳೆಗೇರಿ ಮುಕ್ತ ನಗರವಾಗಲು ಸೂರತ್ ಸಜ್ಜು- ಡೈಮಂಡ್ ಕ್ಯಾಪಿಟಲ್ಗೆ ಐತಿಹಾಸಿಕ ಸಾಧನೆ
ಡಿಜಿಸಿಎ ಹೊಸ ಮಾರ್ಗಸೂಚಿಗಳ ಪ್ರಮುಖ ಅಂಶಗಳು
- ವಿಮಾನದಲ್ಲಿ ಪವರ್ ಬ್ಯಾಂಕ್ ಬಳಸಿ ಯಾವುದೇ ಸಾಧನವನ್ನು ಚಾರ್ಜ್ ಮಾಡುವುದು ಸಂಪೂರ್ಣ ನಿಷೇಧ.
- ವಿಮಾನದ ಸೀಟ್ನಲ್ಲಿರುವ USB ಅಥವಾ ಚಾರ್ಜಿಂಗ್ ಪಾಯಿಂಟ್ ಮೂಲಕವೂ ಪವರ್ ಬ್ಯಾಂಕ್ ಚಾರ್ಜ್ ಮಾಡುವುದು ಅಥವಾ ಬಳಸುವುದು ಬೇಡ.
- ಪವರ್ ಬ್ಯಾಂಕ್ ಹಾಗೂ ಸ್ಪೇರ್ ಲಿಥಿಯಂ ಬ್ಯಾಟರಿಗಳನ್ನು ಕೇವಲ ಹ್ಯಾಂಡ್ ಬ್ಯಾಗೇಜ್ನಲ್ಲೇ ಇಟ್ಟುಕೊಳ್ಳಬೇಕು.
- ಓವರ್ಹೆಡ್ ಬಿನ್ಗಳಲ್ಲಿ (ಮೇಲಿನ ಶೆಲ್ಫ್) ಪವರ್ ಬ್ಯಾಂಕ್ ಇಡುವುದು ನಿಷೇಧಿಸಲಾಗಿದೆ, ಏಕೆಂದರೆ ಅಗ್ನಿ ಅವಘಡವಾದರೆ ತಕ್ಷಣ ಗಮನಿಸಲು ಸಾಧ್ಯವಾಗುವುದಿಲ್ಲ.
- ಯಾವುದೇ ಸಾಧನದಿಂದ ಹೊಗೆ, ಅತಿಯಾದ ಬಿಸಿ ಅಥವಾ ದುರ್ವಾಸನೆ ಕಂಡುಬಂದರೆ ತಕ್ಷಣವೇ ಕ್ಯಾಬಿನ್ ಕ್ರೂಗೆ ಮಾಹಿತಿ ನೀಡಬೇಕು.
ಡಿಜಿಸಿಎ ಅಧಿಕಾರಿಗಳ ಪ್ರಕಾರ, ಈ ನಿಯಮಗಳ ಉದ್ದೇಶ ಪ್ರಯಾಣಿಕರ ಜೀವಭದ್ರತೆಯನ್ನು ಹೆಚ್ಚಿಸುವುದು. ವಿಮಾನಯಾನ ಸಂಸ್ಥೆಗಳು ಹಾಗೂ ಕ್ಯಾಬಿನ್ ಸಿಬ್ಬಂದಿಗೆ ಈಗಾಗಲೇ ಈ ಕುರಿತು ಸ್ಪಷ್ಟ ನಿರ್ದೇಶನ ನೀಡಲಾಗಿದೆ. ಪ್ರಯಾಣಿಕರು ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಡಿಜಿಸಿಎ ಮನವಿ ಮಾಡಿದೆ.

[…] ಇದನ್ನು ಓದು: ನವದೆಹಲಿ:ವಿಮಾನದಲ್ಲಿ ಪವರ್ ಬ್ಯಾಂಕ್ ಬಳಕೆ… […]