ಹಾಸನ- ಆಲೂರು ತಾಲೂಕಿನ ಎಲ್ಲಾ ಪ್ರಾಥಮಿಕ ಶಾಲೆಗಳಿಗೆ ನೋಟ್ ಪುಸ್ತಕ ಹಾಗೂ ಬ್ಯಾಗ್ ವಿತರಣೆ ಕಾರ್ಯಕ್ರಮವನ್ನು ಗುರುವಾರ ಹಮ್ಮಿಕೊಳ್ಳಲಾಗಿದೆ ಎಂದು ಹಂಜಳಿಗೆ ಕಾಳಿಂಗಪ್ಪ ವೆಲ್ಫೇರ್ ಅಸೋಸಿಯೇಷನ್ ಸಂಸ್ಥಾಪಕ ಹಂಜಳಿಗೆ ಮಂಜುನಾಥ್ ಕಾಳಿಂಗಪ್ಪ ತಿಳಿಸಿದರು.
ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿ, ತಮ್ಮ ಸಂಸ್ಥೆಯಿಂದ 13ನೇ ವರ್ಷದ ಉಚಿತ ನೋಟ್ ಪುಸ್ತಕ ಹಾಗೂ ಬ್ಯಾಗ್ ವಿತರಣೆಯನ್ನು ಜೂ.19 ರಿಂದ ಆರಂಭಿಸಲಾಗಿದೆ.
ಈ ವರ್ಷವೂ ಕೂಡ ಆಲೂರು ತಾಲೂಕಿನ ಎಲ್ಲಾ ಪ್ರಾಥಮಿಕ ಶಾಲೆಗಳಿಗೂ ಸುಮಾರು 30 ಸಾವಿರ ನೋಟ್ ಪುಸ್ತಕ ಹಾಗೂ ಆಯ್ದ ಶಾಲೆಗಳಿಗೆ 1000 ಸ್ಕೂಲ್ ಬ್ಯಾಗ್ ವಿತರಣೆ ಮಾಡಲಾಗುತ್ತಿದೆ.
ಜೊತೆಗೆ ಪ್ರತಿ ವರ್ಷದಂತೆ ಈ ವರ್ಷವೂ ಡಿಜಿಟಲ್ ಎಜುಕೇಷನ್ಗೆ ಒತ್ತುಕೊಡುವ ಉದ್ದೇಶದಿಂದ ಗ್ರಾಮೀಣ ಭಾಗದ ಮಕ್ಕಳು ಆರಂಭದಿಂದಲೇ ಬೇಸಿಕ್ ಕಂಪ್ಯೂಟರ್ ಕಲಿಯಲು 5 ಸ್ಮಾರ್ಟ್ ಕ್ಲಾಸ್ ಪ್ರಾರಂಭಿಸುವ ಗುರಿ ಇಟ್ಟುಕೊಂಡು ಈಗಾಗಲೇ ಹಿರಿಯ ಪ್ರಾಥಮಿಕ ಶಾಲೆ ಕಣತೂರು, ಬೈರಪುರ ಹಾಗೂ ಹೋತನಹಳ್ಳಿಪುರ ಶಾಲೆಗಳಿಗೆ ಸ್ಮಾರ್ಟ್ ಕ್ಲಾಸ್ ಪ್ರಾರಂಭಿಸುವ ಯೋಜನೆ ಇಟ್ಟುಕೊಳ್ಳಲಾಗಿದೆ ಎಂದರು.
ಸರ್ಕಾರಿ ಶಾಲೆ ಉಳಿಸುವ ಮತ್ತು ಬೆಳೆಸುವ ಉದ್ದೇಶದಿಂದ ಆರಂಭವಾದ ನಮ್ಮ ನಡಿಗೆ ಸರ್ಕಾರಿ ಶಾಲೆಯ ಕಡೆಗೆ ಅಭಿಯಾನದಲ್ಲಿ ಸರ್ಕಾರಿ ಶಾಲೆ ಉಳಿಸಲು ಪಣ ತೊಟ್ಟು ಈಗಾಗಲೇ ಆಲೂರು ತಾಲೂಕಿನಲ್ಲಿ ಸಾಕಷ್ಟು ಕೆಲಸ ಮಾಡಿದ್ದಾರೆ. ಇದುವರೆಗೂ ಸುಮಾರು 1 ಲಕ್ಷಕ್ಕಿಂತ ಹೆಚ್ಚು ನೋಟ್ ಪುಸ್ತಕ, 5,000 ಬ್ಯಾಗ್, 5 ಲಕ್ಷಕ್ಕಿಂತ ಹೆಚ್ಚು ಲೇಖನ ಸಾಮಗ್ರಿ, ಸುಮಾರು 30 ಲಕ್ಷದಲ್ಲಿ 16 ಸ್ಮಾರ್ಟ್ ಕ್ಲಾಸ್, 7.5 ಲಕ್ಷ ವೆಚ್ಚದಲ್ಲಿ ಆಲೂರು ತಾಲೂಕಿನ ಎಲ್ಲಾ, ಪ್ರಾಥಮಿಕ ಶಾಲೆಗಳ ಕೊಠಡಿಗಳಿಗೆ 6X4 ಅಳತೆ ಗ್ರೀನ್ ಬೋರ್ಡ್ ಹಾಕಿಸಿ ಕೊಡಲಾಗಿದೆ. ಇದುವರೆಗೂ ಸರ್ಕಾರಿ ಶಾಲೆ ಉಳಿಸಬೇಕು ಮತ್ತು ಬೆಳೆಸಲು ಕಳೆದ 12 ವರ್ಷಗಳಲ್ಲಿ 1 ಕೋಟಿ 30 ಲಕ್ಷಕ್ಕಿಂತ ಹೆಚ್ಚು ವೆಚ್ಚ ಮಾಡಿದ್ದಾರೆ. ಏಪ್ರಿಲ್ 11 ರಂದು ಸರ್ಕಾರಿ ಹಿರಿಯ ತರಬೇತಿ ಕೇಂದ್ರ (ಐಟಿಐ) ಕಾಲೇಜಿಗೆ ಅತ್ಯಾಧುನಿಕ ತಂತ್ರಜ್ಞಾನದ ಸಿ.ಎನ್.ಸಿ. ಲ್ಯಾಬ್ ಹಾಗೂ ಸಿಮ್ಯುಲೇಶನ್ ಲ್ಯಾಬ್ ಗಳನ್ನ 46 ಲಕ್ಷಗಳ ವೆಚ್ಚದಲ್ಲಿ ಮಾಡಿಕೊಡಲಾಗಿದೆ.
ಪದ್ಮಶ್ರೀ ವಿಜೇತ ಹರೆಕಳ ಹಾಜಬ್ಬ ಅವರ ವಿನಂತಿಯ ಮೇರೆಗೆ ಅವರು ನಡೆಸುತ್ತಿರುವ ಸರ್ಕಾರಿ ಶಾಲೆಗೆ ಉಚಿತವಾಗಿ ಒಂದು ಪ್ರಿಂಟರ್ ಕೂಡ ನೀಡಲಾಗಿದೆ ಎಂದರು.
ಗ್ರಾಮೀಣ ಭಾಗದ ಪ್ರೌಢಶಾಲೆಯಲ್ಲಿ ಓದುತ್ತಿರುವ 10 ವಿದ್ಯಾರ್ಥಿನಿಯರನ್ನು ಗುರುತಿಸಿ ಮುಂದಿನವಾರ ಸೈಕಲ್ ವಿತರಣೆ ಮಾಡುವ ಉದ್ದೇಶ ಹೊಂದಲಾಗಿದೆ ಎಂದರು.
ಈ ವೇಳೆ ಸಂಸ್ಥೆ ನಿರ್ದೇಶಕ ಹಲಸೂರು ಕಾಂತರಾಜು, ದಾಸೇಗೌಡ, ಸತೀಶ್ ಇದ್ದರು.

[…] […]
[…] […]