ಬೆಂಗಳೂರು, ಆ.14: ಸಂತಾನೋತ್ಪತ್ತಿ ಆರೋಗ್ಯದ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಓಯಸಿಸ್ ಫರ್ಟಿಲಿಟಿ ಸಂಸ್ಥೆಯ ದೇಶವ್ಯಾಪಿ ಫರ್ಟಿಲಿಟಿ ಜಾಗೃತಿ ಅಭಿಯಾನ ‘ಓಯಸಿಸ್ ಜನನಿ ಯಾತ್ರೆ’ ಬೆಂಗಳೂರಿನಲ್ಲಿ ಯಶಸ್ವಿಯಾಗಿ ನಡೆಯಿತು.
ಕರ್ನಾಟಕ ಸೇರಿದಂತೆ ಆಂಧ್ರಪ್ರದೇಶ, ತೆಲಂಗಾಣ, ತಮಿಳುನಾಡು, ಮಹಾರಾಷ್ಟ್ರ, ಒಡಿಶಾ, ಛತ್ತೀಸ್ಗಢ, ಜಾರ್ಖಂಡ್ ಮತ್ತು ಗುಜರಾತ್ ರಾಜ್ಯಗಳಲ್ಲಿ ಈಗಾಗಲೇ ಈ ಅಭಿಯಾನವನ್ನು ನಡೆಸಲಾಗಿದೆ. ಒಂದನೇ, ಎರಡನೇ ಹಾಗೂ ಮೂರನೇ ಹಂತದ ನಗರಗಳು ಮತ್ತು ಗ್ರಾಮೀಣ ಪ್ರದೇಶಗಳ ಜನರಿಗೆ ಸಂತಾನೋತ್ಪತ್ತಿ ಆರೋಗ್ಯದ ಕುರಿತು ವೈಜ್ಞಾನಿಕ ಮಾಹಿತಿ, ತಜ್ಞರ ಮಾರ್ಗದರ್ಶನ ಹಾಗೂ ಆರಂಭಿಕ ತಪಾಸಣಾ ಸೌಲಭ್ಯಗಳನ್ನು ತಲುಪಿಸುವುದು ಅಭಿಯಾನದ ಪ್ರಮುಖ ಉದ್ದೇಶವಾಗಿದೆ.
ಕಾರ್ಯಕ್ರಮದ ಉದ್ಘಾಟನಾ ಸಮಾರಂಭದಲ್ಲಿ ಜಿಗಣಿಯ ನೋಬೆಲ್ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯ ಸಂಸ್ಥಾಪಕಿ ಹಾಗೂ ವೈದ್ಯಕೀಯ ನಿರ್ದೇಶಕಿ ಡಾ. ತ್ರಿವೇಣಿ, ಆಸ್ಪತ್ರೆಯ ನಿರ್ದೇಶಕ ಡಾ. ಉಮಾ ಶಂಕರ್, ಜಿಗಣಿ ಪ್ರಾಥಮಿಕ ಆರೋಗ್ಯ ಕೇಂದ್ರದ ಡಾ. ಕಾರ್ತಿಕ್ ಆರ್., ಜಿಗಣಿ ಪೊಲೀಸ್ ಠಾಣೆಯ ಸಬ್ಇನ್ಸ್ಪೆಕ್ಟರ್ ಫಹಮಿದುನ್ನಿಸಾ, ಆನೇಕಲ್ ತಾಲೂಕು ಆರೋಗ್ಯ ಕಚೇರಿಯ ಆಶಾ ಕಾರ್ಯಕರ್ತೆಯರ ಮಾರ್ಗದರ್ಶಕಿ ನಂಜಮ್ಮ ಹಾಗೂ ಕರ್ನಾಟಕ ಮಹಿಳಾ ಕಾಂಗ್ರೆಸ್ ಪದಾಧಿಕಾರಿ ಸರೋಜಾ ದಿನೇಶ್ ಸೇರಿದಂತೆ ಗಣ್ಯರು ಉಪಸ್ಥಿತರಿದ್ದರು.
ಉಚಿತ ತಜ್ಞರ ಸಲಹೆ, ಆರಂಭಿಕ ತಪಾಸಣೆ
ಬದಲಾಗುತ್ತಿರುವ ಜೀವನಶೈಲಿ, ತಡವಾಗಿ ಪೋಷಕರಾಗುವ ಪ್ರವೃತ್ತಿ ಹಾಗೂ ವೈಜ್ಞಾನಿಕ ಮಾಹಿತಿಯ ಕೊರತೆಯಿಂದ ಸಂತಾನೋತ್ಪತ್ತಿಗೆ ಸಂಬಂಧಿಸಿದ ಸವಾಲುಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ‘ಜನನಿ ಯಾತ್ರೆ’ ಬಸ್ ಮೂಲಕ ಸಾರ್ವಜನಿಕರಿಗೆ ಉಚಿತ ಫರ್ಟಿಲಿಟಿ ಸಲಹೆ, ಹಿಮೋಗ್ಲೋಬಿನ್ ಪರೀಕ್ಷೆ ಹಾಗೂ ಸುರಕ್ಷಿತ ಮತ್ತು ನೈರ್ಮಲ್ಯಯುತ ಮಾದರಿ ಸಂಗ್ರಹಣಾ ಸೌಲಭ್ಯ ಒದಗಿಸಲಾಗುತ್ತಿದೆ.
ಇದರಿಂದ ದಂಪತಿಗಳಿಗೆ ಆರಂಭಿಕ ಹಂತದಲ್ಲಿಯೇ ನಿಖರವಾದ ಮಾಹಿತಿ ಹಾಗೂ ತಜ್ಞರ ಮಾರ್ಗದರ್ಶನ ಪಡೆಯಲು ಅವಕಾಶ ಕಲ್ಪಿಸಲಾಗಿದೆ. ಹೆಚ್ಚಿನ ಸಮುದಾಯಗಳಿಗೆ ಈ ಸೇವೆ ತಲುಪಿಸುವ ಉದ್ದೇಶದಿಂದ ಜನನಿ ಯಾತ್ರೆಯ ಬಸ್ ಸೆಪ್ಟೆಂಬರ್ 20ರವರೆಗೆ ಬೆಂಗಳೂರಿನ ವಿವಿಧ ಪ್ರದೇಶಗಳಲ್ಲಿ ಸಂಚರಿಸಲಿದೆ.
‘ಜಾಗೃತಿ ಮತ್ತು ಸೌಲಭ್ಯಗಳಿಂದ ಸಂತಾನೋತ್ಪತ್ತಿ ಸವಾಲು ಎದುರಿಸಬಹುದು’
ಕರ್ನಾಟಕ ಪ್ರದೇಶ ಮಹಿಳಾ ಕಾಂಗ್ರೆಸ್ ಪದಾಧಿಕಾರಿ ಸರೋಜ ದಿನೇಶ್ ಮಾತನಾಡಿ, ದೇಶದ ಒಂಬತ್ತು ರಾಜ್ಯಗಳಲ್ಲಿ ಸಂಚರಿಸಿರುವ ‘ಓಯಸಿಸ್ ಜನನಿ ಯಾತ್ರೆ’ ಇದೀಗ ಹೆಚ್ಚಿನ ಜನರನ್ನು ತಲುಪುವ ಉದ್ದೇಶದಿಂದ ಕರ್ನಾಟಕಕ್ಕೆ ಮರಳಿದೆ. ರಾಜ್ಯದಲ್ಲಿ ಒಟ್ಟು ಫಲವತ್ತತೆ ದರ ಕುಸಿಯುತ್ತಿರುವ ಸಂದರ್ಭದಲ್ಲಿ ಜಾಗೃತಿ ಮತ್ತು ಆರೋಗ್ಯ ಸೌಲಭ್ಯಗಳ ಲಭ್ಯತೆ ಅತ್ಯಂತ ಮುಖ್ಯವಾಗಿದೆ. ವಿಜ್ಞಾನ ಮತ್ತು ಮಾನವೀಯ ಕಾಳಜಿಯೊಂದಿಗೆ ಸಮುದಾಯಗಳನ್ನು ತಲುಪುತ್ತಿರುವ ಈ ಅಭಿಯಾನವು ಕುಟುಂಬಗಳು ಸೂಕ್ತ ನಿರ್ಧಾರಗಳನ್ನು ತೆಗೆದುಕೊಳ್ಳಲು ನೆರವಾಗುತ್ತಿದೆ ಎಂದು ಹೇಳಿದರು.

ಓಯಸಿಸ್ ಫರ್ಟಿಲಿಟಿಯ ವೈದ್ಯಕೀಯ ನಿರ್ದೇಶಕಿ ಹಾಗೂ ಸಹ-ಸಂಸ್ಥಾಪಕಿ ಡಾ. ದುರ್ಗಾ ಜಿ. ರಾವ್ ಮಾತನಾಡಿ, ಸಂತಾನೋತ್ಪತ್ತಿ ವಿಜ್ಞಾನ ವೇಗವಾಗಿ ಅಭಿವೃದ್ಧಿಯಾಗುತ್ತಿರುವ ಹಿನ್ನೆಲೆಯಲ್ಲಿ ಆಧುನಿಕ ಮತ್ತು ಸಾಕ್ಷ್ಯಾಧಾರಿತ ವೈದ್ಯಕೀಯ ಮಾಹಿತಿಯನ್ನು ಜನರ ಬಳಿಗೆ ನೇರವಾಗಿ ತಲುಪಿಸುವುದು ಅಗತ್ಯವಾಗಿದೆ. ಈಗಾಗಲೇ ದೇಶಾದ್ಯಂತ ನೂರಾರು ಜನರನ್ನು ಅಭಿಯಾನದ ಮೂಲಕ ತಲುಪಲಾಗಿದೆ. ಆರಂಭಿಕ ಹಂತದಲ್ಲಿಯೇ ಸೂಕ್ತ ವೈದ್ಯಕೀಯ ಸಲಹೆ ದೊರೆತರೆ ದಂಪತಿಗಳಿಗೆ ಪೋಷಕರಾಗುವ ಪ್ರಯಾಣದಲ್ಲಿ ನೆರವಾಗಬಹುದು ಎಂದು ತಿಳಿಸಿದರು.
ಓಯಸಿಸ್ ಫರ್ಟಿಲಿಟಿಯ ಹಿರಿಯ ಸಲಹೆಗಾರ್ತಿ ಡಾ. ಪ್ರಿಂಕಾ ಬಜಾಜ್ ಮಾತನಾಡಿ, ‘ಜನನಿ ಯಾತ್ರೆ’ ಆರಂಭವಾಗಿ ಸುಮಾರು ಒಂದು ವರ್ಷವಾಗಿದ್ದು, ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಫಲವತ್ತತೆ ಸಮಸ್ಯೆಗಳು ಮತ್ತು ಲಭ್ಯವಿರುವ ಆಧುನಿಕ ಚಿಕಿತ್ಸೆಗಳ ಕುರಿತು ಜನರಿಗೆ ಸಮಯೋಚಿತ ಮಾಹಿತಿ ಹಾಗೂ ಕಾಳಜಿಯುಕ್ತ ಮಾರ್ಗದರ್ಶನ ನೀಡುವುದು ಅಭಿಯಾನದ ಉದ್ದೇಶವಾಗಿದೆ ಎಂದು ಹೇಳಿದರು.
40ಕ್ಕೂ ಹೆಚ್ಚು ಕೇಂದ್ರಗಳಲ್ಲಿ ಸೇವೆ
2009ರಲ್ಲಿ ಸ್ಥಾಪನೆಯಾದ ಓಯಸಿಸ್ ಫರ್ಟಿಲಿಟಿ ದೇಶಾದ್ಯಂತ 40ಕ್ಕೂ ಹೆಚ್ಚು ಕೇಂದ್ರಗಳನ್ನು ಹೊಂದಿದೆ. ಐವಿಎಫ್, ಐಯುಐ, ಐಸಿಎಸ್ಐ, ಸಿಎಪಿಎ-ಐವಿಎಂ, ಪಿಜಿಟಿ-ಎ ಹಾಗೂ ಫರ್ಟಿಲಿಟಿ ಪ್ರಿಸರ್ವೇಶನ್ ಸೇರಿದಂತೆ ಪುರುಷರು ಮತ್ತು ಮಹಿಳೆಯರ ಸಂತಾನೋತ್ಪತ್ತಿ ಆರೋಗ್ಯಕ್ಕೆ ಸಂಬಂಧಿಸಿದ ವಿವಿಧ ವೈದ್ಯಕೀಯ ಸೇವೆಗಳನ್ನು ಸಂಸ್ಥೆ ಒದಗಿಸುತ್ತಿದೆ.
