ತುಮಕೂರು:ಗುಬ್ಬಿ ತಾಲೂಕು ಬಿದರೆಹಳ್ಳ ಕಾವಲ್ ನಲ್ಲಿರುವ ಹೆಚ್.ಎ.ಎಲ್.ಗೆ ಹೆಚ್ಚುವರಿ ಭೂಮಿಗಾಗಿ ರೈತರ ಫಲವತ್ತಾದ ಭೂಮಿಯ ಬದಲು, ಲಭ್ಯವಿರುವ ಸಾಮಾಜಿಕ ಅರಣ್ಯ,ಹುಲ್ಲುಬಂದಿ,ಗೋಮಾಳ ಜಮೀನು ಬಳಕೆ ಮಾಡುವಂತೆ ಇಂದು ಹಾಲಪ್ಪ ಪ್ರತಿಷ್ಠಾನದ ನೇತೃತ್ವದಲ್ಲಿ ಮುರುಳೀಧರ ಹಾಲಪ್ಪ ಹಾಗೂ ತುಮುಲ್ ನಿರ್ದೇಶಕರಾದ ಶ್ರೀಮತಿ ಭಾರತೀ ಶ್ರೀನಿವಾಸ್ ರವರುಗಳು ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಯ ಅಧಿಕಾರಿಗಳಿಗೆ ನೂರಾರು ರೈತರೊಂದಿಗೆ ನಿಯೋಗ ತೆರಳಿ ಮನವಿ ಸಲ್ಲಿಸಿದರು.
ಕಳೆದ ಹತ್ತು ವರ್ಷಗಳ ಹಿಂದೆ ಸುಮಾರು 660 ಎಕರೆ ಪ್ರದೇಶದಲ್ಲಿ ದೇಶದ ಪ್ರತಿಷ್ಠಿತ ಕಂಪನಿಗಳಲ್ಲಿ ಒಂದಾದ ಹೆಚ್.ಎ.ಎಲ್ನ ಬಹು ಉಪಯೋಗಿ ಹೆಲಿಕ್ಯಾಪ್ಟರ್ ನಿರ್ಮಾಣ ಘಟಕ ಆರಂಭಗೊಂಡಿದ್ದು, ಇದರ ವಿಸ್ತರಣಾ ಘಟಕಕ್ಕೆ ಸುಮಾರು 400 ಎಕರೆಗೂ ಹೆಚ್ಚು ಜಾಗಬೇಕು ಎಂದು ಸರಕಾರಕ್ಕೆ ಹೆಚ್.ಎ.ಎಲ್ ವತಿಯಿಂದ ಮನವಿ ಸಲ್ಲಿಸಿದ್ದ ಹಿನ್ನೆಲೆಯಲ್ಲಿ ಸರಕಾರ ಕೆ.ಐ.ಎ.ಡಿ.ಬಿ. ಅವರಿಗೆ ಹೆಚ್.ಎ.ಎಲ್. ವಿಸ್ತರಣಾ ಘಟಕಕ್ಕೆ ಅಗತ್ಯವಿರುವ ಭೂಮಿ ಗುರುತಿಸಿ ವರದಿ ಸಲ್ಲಿಸುವಂತೆ ಸೂಚನೆ ನೀಡಿತ್ತು.
ರೈತರಿಗೆ ತೊಂದರೆ ನೀಡಬಾರದು ಎಂಬುದು ನಮ್ಮ ಒತ್ತಾಯವಾಗಿದೆ. ಶಾಸಕರು ಸಹ ಇದೇ ಆಶಯದೊಂದಿಗೆ ರೈತರ ಪರವಾಗಿ ಮುಖ್ಯಮಂತ್ರಿಗಳೊಂದಿಗೆ ಮಾತನಾಡಿ, ಲಿಖಿತ ಆದೇಶ ಮಾಡಿಸಿದ್ದಾರೆ. ಕೆ.ಐ.ಎ.ಡಿ.ಬಿ. ಅಧಿಕಾರಿಗಳು ಇದನ್ನು ಪರಿಗಣಿಸಿ, ರೈತರ ಭೂಮಿಯನ್ನು ಭೂಸ್ವಾಧೀನದಿಂದ ಹೊರಗಿಡಬೇಕೆಂದರು.
ತುಮುಲ್ ನಿರ್ದೇಶಕ ಶ್ರೀಮತಿ ಭಾರತೀ ಶ್ರೀನಿವಾಸ್ ಮಾತನಾಡಿ, ರೈತರ ಆಶಯದಂತೆ ಈಗಾಗಲೇ ಶಾಸಕರು ಮುಖ್ಯಮಂತ್ರಿಗಳ ಬಳಿ ಮಾತನಾಡಿ, ರೈತರ ಫಲವತ್ತಾದ ಜಮೀನು ಉಳಿಸುವ ಕೆಲಸ ಮಾಡಿದ್ದಾರೆ. ಹೆಚ್.ಎ.ಎಲ್ ಘಟಕಕ್ಕೆ ಹೊಂದಿಕೊಂಡಂತೆಯೇ ಇರುವ ಸಾಮಾಜಿಕ ಅರಣ್ಯ ಭೂಮಿಯನ್ನು ಸರಕಾರ ಬಳಕೆ ಮಾಡಿಕೊಳ್ಳಲಿ, ಇದಕ್ಕೆ ನಮ್ಮ ಅಭ್ಯಂತರವಿಲ್ಲ. ನಾವು ಸದಾ ಕಾಲ ರೈತರ ಪರವಾಗಿ ಇರುತ್ತೇವೆ ಎಂದು ಸ್ಪಷ್ಟಪಡಿಸಿದರು.ಈ ವೇಳೆ ಮುಖಂಡರಾದ ಗೋವಿಂದೇಗೌಡ, ರೈತ ಸಂಘದ ರಾಚಪ್ಪ ಸೇರಿದಂತೆ ಹಲವರು ಉಪಸ್ಥಿತರಿದ್ದರು.
– ಚಂದ್ರಚೂಡ ಕೆ.ಬಿ.
