ಪಾಕಿಸ್ತಾನ್ ಭಾರತ ವಿರುದ್ಧದ ಟಿ20 ವಿಶ್ವಕಪ್ ಪಂದ್ಯ ಬಹಿಷ್ಕಾರ: ಫೆ.15ರ ಇಂಡೊ–ಪಾಕ್ ಹೈವೋಲ್ಟೇಜ್ ಪಂದ್ಯ ರದ್ದು
ನವದೆಹಲಿ / ಇಸ್ಲಾಮಾಬಾದ್: 2026ರ ಐಸಿಸಿ ಪುರುಷರ ಟಿ20 ವಿಶ್ವಕಪ್ನಲ್ಲಿ ಭಾರತದ ವಿರುದ್ಧ ನಡೆಯಬೇಕಿದ್ದ ಪಂದ್ಯವನ್ನು ಪಾಕಿಸ್ತಾನ್ ಬಹಿಷ್ಕರಿಸುವುದಾಗಿ ಪಾಕಿಸ್ತಾನ್ ಪ್ರಧಾನಿ ಶೆಹಬಾಝ್ ಷರೀಫ್ ಅಧಿಕೃತವಾಗಿ ಘೋಷಿಸಿದ್ದಾರೆ. ಇದರೊಂದಿಗೆ ಫೆಬ್ರವರಿ 15ರಂದು ನಡೆಯಬೇಕಿದ್ದ ಇಂಡೊ–ಪಾಕ್ ನಡುವಣ ಹೈವೋಲ್ಟೇಜ್ ಪಂದ್ಯ ನಡೆಯುವುದಿಲ್ಲ ಎಂಬುದು ಸ್ಪಷ್ಟವಾಗಿದೆ.
ಫೆಬ್ರವರಿ 4, 2026ರಂದು ನಡೆದ ಫೆಡರಲ್ ಕ್ಯಾಬಿನೆಟ್ ಸಭೆಯಲ್ಲಿ ಮಾತನಾಡಿದ ಶೆಹಬಾಝ್ ಷರೀಫ್, ಈ ನಿರ್ಧಾರದ ಹಿಂದಿನ ಪ್ರಮುಖ ಕಾರಣಗಳನ್ನು ವಿವರಿಸಿದರು. ಬಾಂಗ್ಲಾದೇಶ್ ತಂಡವನ್ನು ಐಸಿಸಿ ಟಿ20 ವಿಶ್ವಕಪ್ನಿಂದ ಹೊರಗಿಟ್ಟಿರುವ ಕ್ರಮವನ್ನು ಖಂಡಿಸಿ, ಅವರ ಪರವಾಗಿ ನಿಲ್ಲುವ ಉದ್ದೇಶದಿಂದಲೇ ಭಾರತದ ವಿರುದ್ಧದ ಪಂದ್ಯವನ್ನು ಬಹಿಷ್ಕರಿಸುವ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಅವರು ತಿಳಿಸಿದರು.
ಬಾಂಗ್ಲಾದೇಶ್ಗೆ ಬೆಂಬಲವೇ ಮುಖ್ಯ ಕಾರಣ
ಬಾಂಗ್ಲಾದೇಶ್ ತಂಡವನ್ನು ಟಿ20 ವಿಶ್ವಕಪ್ನಿಂದ ಹೊರಗಿಡಬಾರದು ಹಾಗೂ ತಟಸ್ಥ ಸ್ಥಳದಲ್ಲಿ ಪಂದ್ಯವಾಡಲು ಅವಕಾಶ ನೀಡಬೇಕೆಂದು ಪಾಕಿಸ್ತಾನ್ ಕ್ರಿಕೆಟ್ ಮಂಡಳಿ (PCB) ಆಗ್ರಹಿಸಿತ್ತು. ಈ ವಿಚಾರದಲ್ಲಿ ಬಾಂಗ್ಲಾದೇಶ್ ಕ್ರಿಕೆಟ್ ಮಂಡಳಿ (BCB)ಯ ನಿಲುವಿಗೆ ಪಾಕಿಸ್ತಾನ್ ಬೆಂಬಲ ಸೂಚಿಸಿದ್ದು, ಐಸಿಸಿ ಅವಕಾಶ ನೀಡದ ಹಿನ್ನೆಲೆಯಲ್ಲಿ ಈ ಕಠಿಣ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಪಾಕಿಸ್ತಾನ್ ತಿಳಿಸಿದೆ.
ಕ್ರೀಡೆಯಲ್ಲಿ ರಾಜಕೀಯ ಬೇಡ – ಶೆಹಬಾಝ್ ಷರೀಫ್
“ಟಿ20 ವಿಶ್ವಕಪ್ ಬಗ್ಗೆ ನಾವು ಸ್ಪಷ್ಟ ನಿಲುವು ಹೊಂದಿದ್ದೇವೆ. ಭಾರತದ ವಿರುದ್ಧ ಪಂದ್ಯ ಆಡುವುದಿಲ್ಲ. ಇದು ಕ್ರೀಡಾ ಕ್ಷೇತ್ರ, ರಾಜಕೀಯವಲ್ಲ. ಕ್ರೀಡೆಯಲ್ಲಿ ಯಾವುದೇ ರಾಜಕೀಯ ಇರಬಾರದು. ನಾವು ಬಾಂಗ್ಲಾದೇಶ್ ಪರವಾಗಿ ನಿಲ್ಲಬೇಕು. ಇದು ಸೂಕ್ತ ಹಾಗೂ ಪರಿಗಣಿತ ನಿರ್ಧಾರ” ಎಂದು ಶೆಹಬಾಝ್ ಷರೀಫ್ ಸಂಪುಟ ಸಭೆಯಲ್ಲಿ ಹೇಳಿದರು.
ಪಿಸಿಬಿಯಿಂದ ಇನ್ನೂ ಅಧಿಕೃತ ಪತ್ರ ಇಲ್ಲ
ಭಾರತದ ವಿರುದ್ಧದ ಪಂದ್ಯ ಬಹಿಷ್ಕಾರ ಕುರಿತು ಪಾಕಿಸ್ತಾನ್ ಕ್ರಿಕೆಟ್ ಮಂಡಳಿ ಐಸಿಸಿಗೆ ಇನ್ನೂ ಯಾವುದೇ ಔಪಚಾರಿಕ ಇಮೇಲ್ ಕಳುಹಿಸಿಲ್ಲ. ಆದರೂ ಪಾಕಿಸ್ತಾನ್ ಪ್ರಧಾನಿಯೇ ಬಹಿಷ್ಕಾರವನ್ನು ಘೋಷಿಸಿರುವುದರಿಂದ, ಇಂಡೊ–ಪಾಕ್ ನಡುವಣ ಟಿ20 ವಿಶ್ವಕಪ್ ಪಂದ್ಯ ಜರುಗುವುದಿಲ್ಲ ಎಂಬುದು ದೃಢಪಟ್ಟಿದೆ.
ಪಂದ್ಯ ಬಹಿಷ್ಕಾರದ ಪರಿಣಾಮಗಳು
-
ಅಂಕಗಳ ನಷ್ಟ: ಪಾಕಿಸ್ತಾನ್ ಪಂದ್ಯಕ್ಕೆ ಹಾಜರಾಗದಿದ್ದರೆ, ಭಾರತಕ್ಕೆ ವಾಕ್ಓವರ್ ಮೂಲಕ 2 ಅಂಕಗಳು ಲಭಿಸಲಿವೆ.
-
ಐಸಿಸಿ ಎಚ್ಚರಿಕೆ: “ಆಯ್ದ ಭಾಗವಹಿಸುವಿಕೆ” ಕ್ರೀಡಾ ಸ್ಫೂರ್ತಿಗೆ ವಿರುದ್ಧವಾಗಿದೆ ಎಂದು ಐಸಿಸಿ ಅಸಮಾಧಾನ ವ್ಯಕ್ತಪಡಿಸಿದ್ದು, ಪಾಕಿಸ್ತಾನ್ ಕ್ರಿಕೆಟ್ ಮಂಡಳಿಗೆ ಆರ್ಥಿಕ ದಂಡ ವಿಧಿಸುವ ಸಾಧ್ಯತೆ ಇದೆ.
ಒಟ್ಟಾರೆ, ಈ ನಿರ್ಧಾರದಿಂದ 2026ರ ಟಿ20 ವಿಶ್ವಕಪ್ನಲ್ಲಿ ಅತ್ಯಂತ ನಿರೀಕ್ಷಿತ ಇಂಡೊ–ಪಾಕ್ ಪಂದ್ಯ ರದ್ದು ಆಗಿದ್ದು, ಜಾಗತಿಕ ಕ್ರಿಕೆಟ್ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.
