ಕೆ.ಆರ್.ಪೇಟೆ,ಅ.27: ತಾಲ್ಲೂಕಿನ ಮಾಕವಳ್ಳಿ ಗ್ರಾಮ ಸೇರಿದಂತೆ ಸುತ್ತಮುತ್ತಲ ಗ್ರಾಮಗಳಲ್ಲಿ ಅಕ್ರಮವಾಗಿ ಗಾಂಜಾ ಮಾರಾಟ ಹಾಗೂ ಮಧ್ಯಪಾನ ಮಾರಾಟವಾಗಿ ಮಾರಾಟ ಮಾಡುವ ದಂಧೆ ನಿರಂತರವಾಗಿ ನಡೆಯುತ್ತಿದೆ. ಇದರಿಂದಾಗಿ ಯುವಕರು ಮಾದಕ ವಸ್ತು ವ್ಯಸನಿಗಳಾಗಿ ಹಾಳಾಗುತ್ತಿದ್ದಾರೆ. ಆದರೆ ಪೊಲೀಸರು ಯಾವುದೇ ಕ್ರಮ ಕೈಗೊಳ್ಳದೇ ಅಕ್ರಮ ಮಾರಾಟಗಾರರಿಗೆ ಪ್ರೋತ್ಸಾಹ ಕೊಡುವ ಕೆಲಸ ಮಾಡುತ್ತಿದ್ದಾರೆ ಎಂದು ಮಾಕವಳ್ಳಿ ಗ್ರಾಮ ಪಂಚಾಯಿತಿ ವತಿಯಿಂದ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಸಾರ್ವಜನಿಕರು ಗಂಭೀರ ಆರೋಪ ಮಾಡಿದರು.
ತಾಲ್ಲೂಕಿನ ಮಾಕವಳ್ಳಿ ಗ್ರಾಮದಲ್ಲಿ 40ಲಕ್ಷ ರೂಪಾಯಿಗಳ ವೆಚ್ಚದಲ್ಲಿ ನಿರ್ಮಿಸಲಾಗುತ್ತಿರುವ ರಾಜೀವ್ಗಾಂಧಿ ಸೇವಾ ಕೇಂದ್ರ ಗ್ರಾಮ ಪಂಚಾಯಿತಿ ಕಟ್ಟಡದ ನೂತನ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ, ಅನಂತರ ಮಾಕವಳ್ಳಿ ಸರ್ಕಾರಿ ಪ್ರೌಢಶಾಲೆಯ ಆವರಣದಲ್ಲಿ ಮಾಕವಳ್ಳಿ ಗ್ರಾಮ ಪಂಚಾಯಿತಿ ವತಿಯಿಂದ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಲಲಿತಾಸಣ್ಣಯ್ಯ ಅವರ ಅಧ್ಯಕ್ಷತೆಯಲ್ಲಿ ಆಯೋಜಿಸಿದ್ದ ಗ್ರಾಮ ಪಂಚಾಯಿತಿ ಮಟ್ಟದ ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ಮಾಕವಳ್ಳಿ ಸುತ್ತಮುತ್ತಲ ಗ್ರಾಮಗಳಲ್ಲಿ ಅಕ್ರಮ ಗಾಂಜಾ ಮಾರಾಟ ಹಾಗೂ ಅಕ್ರಮ ಮಧ್ಯ ಮಾರಾಟ ಅವ್ಯಾಹತವಾಗಿ ನಡೆಯುತ್ತಿದೆ ಇದಕ್ಕೆ ಪೊಲೀಸರ ಪರೋಕ್ಷ ಸಹಕಾರ ಇದೆ ಎಂದು ಮುಖಂಡರಾದ ಆಲೋಕ್ ಮತ್ತಿತರರು ಸಂಬಂಧಪಟ್ಟ ವಿಡಿಯೋ ದಾಖಲೆಗಳನ್ನು ಪ್ರದರ್ಶನ ಮಾಡಿ ಕೆಡಿಪಿ ಸಭೆಗೆ ಬಾರದೆ ಚಕ್ಕರ್ ಹಾಕಿರುವ ಕಿಕ್ಕೇರಿ ಪೊಲೀಸರ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು. ಮಾಕವಳ್ಳಿ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ನಡೆಯುತ್ತಿರುವ ಕೆಡಿಪಿ ಸಭೆಗೆ ಆಹ್ವಾನ ನೀಡಿದರೂ ಬಾರದೇ ಇರುವ ಕಿಕ್ಕೇರಿ ಪೊಲೀಸರು ಸೇರಿದಂತೆ ಗೈರು ಹಾಜರಾಗಿರುವ ಅಧಿಕಾರಿಗಳ ವಿರುದ್ದ ಸೂಕ್ತ ಕ್ರಮ ಜರುಗಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದರು.
75ತುಂಬಿದ ವೃದ್ದರ ಮನೆಗೆ ಪಡಿತರ ವಸ್ತು ತಲುಪಿಸಿ : ಸಭೆಯಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಶಾಸಕರಾದ ಹೆಚ್.ಟಿ.ಮಂಜು ಅವರು ಪಡಿತರ ಚೀಟಿ ಹೊಂದಿರುವ 75ವರ್ಷ ತುಂಬಿದ ವಯೋವೃದ್ದರಿಗೆ ಅವರ ಮನೆಗೆ ಪಡಿತರ ವಸ್ತುಗಳನ್ನು ಪೂರೈಕೆ ಮಾಡುವ ಕೆಲಸವನ್ನು ನ್ಯಾಯಬೆಲೆ ಅಂಗಡಿಗಳು ಹಾಗೂ ಸೊಸೈಟಿಗಳು ಮಾಡಬೇಕು. ಈ ಸಂಬಂಭ ಯಾವುದೇ ದೂರುಗಳು ಬಾರದಂತೆ ನೋಡಿಕೊಳ್ಳಬೇಕು. ಪಡಿತರ ದಾಸ್ತಾನು ಬಂದ ದಿನದಿಂದ ಪ್ರತಿದಿನ ಪಡಿತರ ನೀಡಬೇಕು. ಯಾವುದೇ ಕಾರಣಕ್ಕೂ ರಜೆ ಮಾಡಬಾರದು. ಗ್ರಾಮ ಲೆಕ್ಕಾಧಿಕಾರಿಗಳು ತಮ್ಮ ವೃತ್ತದ ಕೇಂದ್ರ ಸ್ಥಾನದಲ್ಲಿ ಕಚೇರಿ ತೆರೆದು ರೈತರಿಗೆ ಹಾಗೂ ಸಾರ್ವಜನಿಕರಿಗೆ ತಮ್ಮ ಸೇವೆಯನ್ನು ತ್ವರಿತವಾಗಿ ನೀಡಬೇಕು. 60ವರ್ಷ ತುಂಬಿದ ಎಲ್ಲಾ ಅರ್ಹ ವಯೋವೃದ್ದರಿಗೆ ಅವರ ಮನೆಗೆ ಹೋಗಿ ದಾಖಲೆ ಪಡೆದು ಮಾಸಾಶನ ಮಂಜೂರಾತಿ ಆದೇಶ ಪತ್ರ ಮಾಡಿಸಿಕೊಡಬೇಕು. ವಿವಿಧ ಗ್ರಾಮಗಳಲ್ಲಿ ಸ್ಮಶಾನಕ್ಕೆ ಮೀಸಲಿಟ್ಟ ಜಾಗವನ್ನು ಸಾರ್ವಜನಿಕರ ಉಪಯೋಗಕ್ಕೆ ಕೊಡಿಸಬೇಕು. ಅಂಗನವಾಡಿಯಲ್ಲಿ ಗರ್ಭಿಣಿ ಮತ್ತು ಬಾಣಂತಿಯರಿಗೆ, ಕಿಶೋರಿಯರಿಗೆ ಪೌಷ್ಠಕ ಆಹಾರವನ್ನು ಸಮರ್ಪಕವಾಗಿ ನೀಡುವ ಮೂಲಕ ಯಾವುದೇ ದೂರುಗಳು ಬಾರದಂತೆ ನೋಡಿಕೊಳ್ಳಬೇಕು. ವಿದ್ಯುತ್ ಇಲಾಖೆಯವರು ಮನೆಗಳಿಗೆ ಸರಿಯಾಗಿ ವೋಲ್ಟೇಜ್ ಇರುವಂತೆ ವಿದ್ಯುತ್ ಪೂರೈಕೆ ಮಾಡಲು ಕ್ರಮ ವಹಿಸಬೇಕು. ಗ್ರಾಹಕರು ಕರೆ ಮಾಡಿದಾಗ ಸೌಜನ್ಯದಿಂದ ವರ್ತಿಸಬೇಕು ಎಂದು ಸಲಹೆ ನೀಡಿದರು.

ಕರೋಠಿ ಗ್ರಾಮವನ್ನು ಕಂದಾಯ ಗ್ರಾಮವನ್ನಾಗಿ ಪರಿವರ್ತನೆ ಮಾಡಲು ಕ್ರಮ ವಹಿಸಬೇಕು. ಸಾಧುಗೋನಹಳ್ಳಿ ಬಳಿ ಇರುವ 25ಎಕರೆ ಭೂಮಿಯನ್ನು ವಸತಿ ರಹಿತರಿಗೆ ನಿವೇಶನ ನೀಡಲು ಅಗತ್ಯ ಕ್ರಮ ವಹಿಸಬೇಕು ಎಂದು ತಾಲ್ಲೂಕು ಪಂಚಾಯತ್ ಅಧಿಕಾರಿಗಳಿಗೆ ಸಲಹೆ ನೀಡಿದರು. ಹೀಗೆ ಹತ್ತಾರು ಇಲಾಖೆಗಳಿಗೆ ಕರ್ತವ್ಯ ಪಾಲನೆಯ ಬಗ್ಗೆ ತಿಳುವಳಿಕೆಯನ್ನು ಶಾಸಕರು ನೀಡಿದರು. ಸರ್ಕಾರಿ ಅಧಿಕಾರಿಗಳು ಸರಿಯಾಗಿ ತಮ್ಮ ಪಾಲಿನ ಕರ್ತವ್ಯವನ್ನು ನಿರ್ವಹಣೆ ಮಾಡಿದರೆ ಜನಪ್ರತಿನಿಧಿಗಳಿಗೆ ಒಳ್ಳೆಯ ಹೆಸರು ಬರುತ್ತದೆ. ಅಲ್ಲದೆ ಅಧಿಕಾರಿಗಳಿಗೂ ಸಾರ್ವಜನಿಕರಿಂದ ಒಳ್ಳೆಯ ಪ್ರಶಂಸೆ ಸಿಗುತ್ತದೆ ಹಾಗಾಗಿ ಪ್ರಾಮಾಣಿಕವಾಗಿ, ಕ್ರಿಯಾಶೀಲವಾಗಿ ಕೆಲಸ ಮಾಡುವಂತೆ ಶಾಸಕರು ಸಲಹೆ ನೀಡಿದರು.
ಗ್ರಾಮ ಪಂಚಾಯಿತಿ ಅಧ್ಯಕ್ಷೆ ಲಲಿತಾಸಣ್ಣಯ್ಯ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಅವರ ಪಿಡಿಓ ಶೈಲಜಾ ಪ್ರಾಸ್ತಾವಿಕ ನುಡಿಗಳನ್ನಾಡಿದರು.
ಸಭೆಯಲ್ಲಿ ತಾಲ್ಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಕೆ.ಸುಷ್ಮ, ತಾಲ್ಲೂಕು ಯೋಜನಾಧಿಕಾರಿ ಮೋದೂರು ಶ್ರೀನಿವಾಸ್, ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಎ.ಎನ್.ಸುಜಾತ, ಸದಸ್ಯರಾದ ಎಂ.ಆರ್.ಮಂಜುನಾಥ್, ಎಂ.ಟಿ.ಮಂಜೇಗೌಡ, ಕರೋಟಿ ಅನಿಲ್, ಸಾದುಗೋನಹಳ್ಳಿ ಆರ್.ಕುಮಾರ್, ಬಿ.ಎಸ್.ಶೀಲಾಮಹಾದೇವೇಗೌಡ, ವೀಣಾಅಶೋಕ್, ವರಲಕ್ಷ್ಮಿ ಪ್ರದೀಪ್, ಲಿಂಗಾಪುರ ಸಾಕಮ್ಮ, ಜ್ಯೋತಿಸ್ವಾಮಿ, ಕುಂದನಹಳ್ಳಿ ಬೈರಯ್ಯ, ಸವಿತ, ವಿ.ಡಿ.ಮಂಜುನಾಥ್, ಎಂ.ಎ.ಯೋಗೇಶ್, ತಾಲ್ಲೂಕು ಪಂಚಾಯಿತಿ ಮಾಜಿ ಉಪಾಧ್ಯಕ್ಷ ಎಂ.ಸಿ.ರಾಮೇಗೌಡ, ತಾಲ್ಲೂಕು ಯುವ ಜೆಡಿಎಸ್ ಅಧ್ಯಕ್ಷ ಮಹಾದೇವೇಗೌಡ, ಮುಖಂಡರಾದ ಅಲೋಕ್ಚಂದ್ರು, ಸುಕಂದರಾಜು, ನಾಗೇಶ್, ಹರೀಶ್, ಪ್ರದೀಪ್, ಮಧು, ಸುನಿಲ್ಸಣ್ಣಯ್ಯ, ಕರೋಟಿ ವಿಜಯ್ ಕುಮಾರ್, ಸುರೇಶ್, ಕುಮಾರ್, ರಜನಿ, ಮನು, ಕುಮಾರ್, ಮಂಜೇಗೌಡ, ಮತ್ತಿತರರು ಉಪಸ್ಥಿತರಿದ್ದರು.
– ಶ್ರೀನಿವಾಸ್ ಆರ್.
