ಬೇಲೂರು: ವಿಶ್ವ ವಿಖ್ಯಾತ Chennakeshava Temple ದೇವಾಲಯ ವೀಕ್ಷಣೆಗೆ ದೇಶ-ವಿದೇಶಗಳಿಂದ ಆಗಮಿಸುವ ಪ್ರವಾಸಿಗರ ಗಮನ ಸೆಳೆಯುತ್ತಿರುವ ಪುರಾತನ ಬಯಲು ರಂಗಮಂಟಪ ಹಾಗೂ ಸಂಸ್ಕೃತ ಪಾಠಶಾಲೆಯ ದುಸ್ಥಿತಿ ಕುರಿತು ಸಾರ್ವಜನಿಕರು ತೀವ್ರ ಆತಂಕ ವ್ಯಕ್ತಪಡಿಸಿದ್ದಾರೆ.
ದೇವಾಲಯದ ಎಡಭಾಗದಲ್ಲಿರುವ ಬಯಲು ರಂಗಮಂಟಪ ಹಾಗೂ ಹಳೆಯ ಸಂಸ್ಕೃತ ಪಾಠಶಾಲೆ ಕಟ್ಟಡಗಳು ಕಳೆದ ಎರಡು-ಮೂರು ವರ್ಷಗಳಿಂದ ಹಾಳಾದ ಸ್ಥಿತಿಯಲ್ಲೇ ಇದ್ದು, ಸಂಬಂಧಪಟ್ಟ ಪುರಾತತ್ವ ಇಲಾಖೆಗೆ ಅನೇಕ ಬಾರಿ ಮನವಿ ಸಲ್ಲಿಸಿದರೂ ಯಾವುದೇ ಸ್ಪಂದನೆ ದೊರೆತಿಲ್ಲ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.
ಸ್ಥಳೀಯ ಶಾಸಕರು ಹಾಗೂ ದೇವಸ್ಥಾನದ ಕಾರ್ಯನಿರ್ವಾಹಣಾಧಿಕಾರಿಗಳಿಗೂ ಈ ಬಗ್ಗೆ ಹಲವು ಬಾರಿ ಮನವಿ ಮಾಡಲಾಗಿದ್ದು, ಅಧಿಕಾರಿಗಳಿಗೆ ಪತ್ರ ಬರೆದಿದ್ದರೂ ಕ್ರಮ ಕೈಗೊಳ್ಳಲಾಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸಂಸ್ಕೃತ ಪಾಠಶಾಲೆ ಕಟ್ಟಡದ ಸುತ್ತ ಕಂಬಿ ಹಾಕಿ ಜನರು ಹೋಗದಂತೆ ತಡೆಗಟ್ಟಲಾಗಿದ್ದು, ಇದನ್ನು ನೋಡುವ ಪ್ರವಾಸಿಗರಿಗೆ ಅದು ಗೋಶಾಲೆಯಂತೆ ಕಾಣುತ್ತಿದೆ ಎಂದು ಸಾರ್ವಜನಿಕರು ಬೇಸರ ವ್ಯಕ್ತಪಡಿಸಿದ್ದಾರೆ.
ಇಂತಹ ಐತಿಹಾಸಿಕ ಹಾಗೂ ವಿಶ್ವಪ್ರಸಿದ್ಧ ದೇವಾಲಯದ ಸುತ್ತಮುತ್ತ ಹಾಳಾದ ಗೋಡೆಗಳು, ಕುಸಿಯುವ ಹಂತದಲ್ಲಿರುವ ಕಲ್ಲಿನ ಕಂಬಗಳು ಕಂಡುಬಂದರೆ ಬೇಲೂರಿನ ಬಗ್ಗೆ ಪ್ರವಾಸಿಗರಲ್ಲಿ ತಪ್ಪು ಅಭಿಪ್ರಾಯ ಮೂಡುವ ಸಾಧ್ಯತೆ ಇದೆ ಎಂದು ತಿಳಿಸಿದ್ದಾರೆ.
ಗೋಡೆಗಳು ಹಾಗೂ ಕಲ್ಲಿನ ಕಂಬಗಳು ಕುಸಿದು ಅನಾಹುತ ಸಂಭವಿಸುವ ಮೊದಲು ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಎಚ್ಚೆತ್ತುಕೊಂಡು ತುರ್ತು ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಹಳೆಯ ಸಂಸ್ಕೃತ ಪಾಠಶಾಲೆಯನ್ನು ಸಂರಕ್ಷಿಸಿ, ದೇವಾಲಯದ ಸೌಂದರ್ಯಕ್ಕೆ ತಕ್ಕಂತೆ ಅಭಿವೃದ್ಧಿಪಡಿಸಬೇಕು. ಬೇಲೂರಿನ ಗೌರವ ದೇಶ-ವಿದೇಶಗಳಲ್ಲಿ ಉಳಿಯುವಂತೆ ಪುರಾತತ್ವ ಇಲಾಖೆ ಶೀಘ್ರ ಕ್ರಮವಹಿಸಬೇಕು ಎಂದು ಸಾರ್ವಜನಿಕರು ಮನವಿ ಮಾಡಿದ್ದಾರೆ.
