ರಾಮನಾಥಪುರ: ಸತ್ಯ, ಅಹಿಂಸೆ, ಸರಳತೆ, ಸೇವೆ ಹಾಗೂ ದೇಶಭಕ್ತಿಯ ಮೌಲ್ಯಗಳನ್ನು ತಮ್ಮ ಬದುಕಿನುದ್ದಕ್ಕೂ ಅಳವಡಿಸಿಕೊಂಡು ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಮಹಾನ್ ಚೇತನಗಳಾದ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ನಡೆ-ನುಡಿಗಳು ಇಂದಿನ ವಿದ್ಯಾರ್ಥಿಗಳಿಗೆ ದಾರಿದೀಪವಾಗಲಿ ಎಂದು ಜಿಲ್ಲಾ ಅತ್ಯುತ್ತಮ ಪ್ರೌಢಶಾಲಾ ಶಿಕ್ಷಕ ಪ್ರಶಸ್ತಿ ಪುರಸ್ಕೃತ ರವಿಕುಮಾರ್ ಕೆ.ಎನ್. ಹೇಳಿದರು.
ರಾಮನಾಥಪುರ ಹೋಬಳಿಯ ಹನ್ಯಾಳು ಗ್ರಾಮದ ದಿ. ಗೌರಮ್ಮ ಪುಟ್ಟಸ್ವಾಮಪ್ಪ ಸ್ಮಾರಕ ಸರ್ಕಾರಿ ಪ್ರೌಢಶಾಲೆಯಲ್ಲಿ ಗಾಂಧೀಜಿ ಅವರ 157ನೇ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಅವರ 122ನೇ ಜನ್ಮದಿನಾಚರಣೆ ಅಂಗವಾಗಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳೊಂದಿಗೆ ಜಯಂತಿ ಆಚರಿಸಿ ಅವರು ಮಾತನಾಡಿದರು.
ಹಿರಿಯರು ಹಾಗೂ ಗುರುಗಳು ತೋರಿಸಿಕೊಟ್ಟ ಉತ್ತಮ ಮಾರ್ಗದಲ್ಲಿ ಇಂದಿನ ಯುವಜನತೆ ಸಾಗಬೇಕು. ಮಹಾತ್ಮ ಗಾಂಧೀಜಿ ಅವರ ಜೀವನದಲ್ಲಿ ಸತ್ಯ ಹಾಗೂ ಪ್ರಾಮಾಣಿಕತೆಗೆ ನೀಡಿದ್ದ ಮಹತ್ವವನ್ನು ವಿದ್ಯಾರ್ಥಿಗಳು ಅರಿತುಕೊಳ್ಳಬೇಕು ಎಂದರು.
ಗಾಂಧೀಜಿ ಅವರು ರಾಜಕೋಟೆಯ ಪ್ರೌಢಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದ ಸಂದರ್ಭದಲ್ಲಿ ಶಾಲೆಗೆ ಭೇಟಿ ನೀಡಿದ್ದ ಅಧಿಕಾರಿಗಳು ‘KETTLE’ ಪದವನ್ನು ಬರೆಯುವಂತೆ ಸೂಚಿಸಿದ್ದರು. ಗಾಂಧೀಜಿ ಪದವನ್ನು ತಪ್ಪಾಗಿ ಬರೆದಾಗ ಶಿಕ್ಷಕರು ಪಕ್ಕದ ವಿದ್ಯಾರ್ಥಿಯ ಉತ್ತರವನ್ನು ನೋಡಿ ಸರಿಪಡಿಸಿಕೊಳ್ಳುವಂತೆ ಸೂಚಿಸಿದರೂ, ಗಾಂಧೀಜಿ ಅದನ್ನು ನಯವಾಗಿ ತಿರಸ್ಕರಿಸಿದ್ದರು. ಈ ಘಟನೆಯ ಮೂಲಕ ಸತ್ಯ ಮತ್ತು ಪ್ರಾಮಾಣಿಕತೆಯ ಮೌಲ್ಯವನ್ನು ಅವರು ತೋರಿಸಿಕೊಟ್ಟಿದ್ದರು. ಇಂತಹ ಆದರ್ಶಗಳನ್ನು ವಿದ್ಯಾರ್ಥಿಗಳು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ರವಿಕುಮಾರ್ ಹೇಳಿದರು.
ಶಿಕ್ಷಕಿ ಗೀತಾ ಡಿ.ಎಚ್. ಅವರು ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಸರಳ ಹಾಗೂ ನೇರ ನಡೆ-ನುಡಿಗಳ ಕುರಿತು ಮಾತನಾಡಿದರು. ಶಿಕ್ಷಕಿ ಸುಬ್ಬಲಕ್ಷ್ಮಿ ಆರ್. ಅವರು ವಿದ್ಯಾರ್ಥಿಗಳಿಗೆ ಸಾಮೂಹಿಕವಾಗಿ ‘ರಘುಪತಿ ರಾಘವ ರಾಜಾರಾಮ್, ಪತಿತ ಪಾವನ ಸೀತಾರಾಮ್’ ಭಜನೆಯನ್ನು ಹೇಳಿಕೊಟ್ಟರು.
‘ಏಕ್ ದಿನ್, ಏಕ್ ಘಂಟಾ, ಏಕ್ ಸ್ವಚ್ಛತಾ’ ಅಭಿಯಾನದ ಅಂಗವಾಗಿ ಶಾಲಾ ಆವರಣದಲ್ಲಿ ಸ್ವಚ್ಛತಾ ಕಾರ್ಯ ಕೈಗೊಳ್ಳಲಾಯಿತು. ಇದೇ ವೇಳೆ ವಿದ್ಯಾರ್ಥಿಗಳು ತಮ್ಮ ತಾಯಿಯ ಹೆಸರಿನಲ್ಲಿ ಗಿಡಗಳನ್ನು ನೆಟ್ಟು ಪರಿಸರ ಸಂರಕ್ಷಣೆಯ ಸಂದೇಶ ಸಾರಿದರು.
ಕಾರ್ಯಕ್ರಮದಲ್ಲಿ ಶಿಕ್ಷಕರಾದ ಗೀತಾ, ಸುಬ್ಬಲಕ್ಷ್ಮಿ, ಕುಮಾರ್, ಮೇಘನಾ, ಸ್ವಾತಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
– ಕುಮಾರಸ್ವಾಮಿ ಎಂ.ಎನ್.
