ಖಾಸಗಿ ಶಾಲೆಗಳಿಗೆ ಸರಿಸಾಟಿಯಾದ ಶಿಕ್ಷಣ ಬಡ ರೈತ ಕುಟುಂಬಗಳ ಮಕ್ಕಳಿಗೂ ಸರ್ಕಾರಿ ಶಾಲೆಗಳಲ್ಲಿಯೇ ದೊರೆಯಬೇಕು ಎಂಬ ಆಶಯದೊಂದಿಗೆ ಆರಂಭವಾದ ಈ ಪ್ರಯತ್ನ ಇಂದು 20 ಮಕ್ಕಳ ಮನೆಗಳವರೆಗೆ ವಿಸ್ತರಿಸಿದೆ. ಈ ಮೂಲಕ ಗ್ರಾಮೀಣ ಮಕ್ಕಳ ಭವಿಷ್ಯ ರೂಪಿಸುವ ಮಹತ್ವದ ಕಾರ್ಯಕ್ಕೆ ಅವರು ಕೈಜೋಡಿಸಿದ್ದಾರೆ ಎಂದು ಹನ್ಯಾಳು ಹಿರಿಯ ವಿದ್ಯಾರ್ಥಿಗಳ ಸಂಘದ ಸದಸ್ಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಕುಟುಂಬದ ಜವಾಬ್ದಾರಿಯ ನಡುವೆಯೂ ಸಮಾಜ ಸೇವೆಗೆ ಆದ್ಯತೆ
ತಮ್ಮ ಕುಟುಂಬದಿಂದ ಪತಿ ಹಾಗೂ ಮಗನನ್ನು ಶಾಸಕರಾಗಿ, ಮಗಳು ಮತ್ತು ಅಳಿಯನನ್ನು ವೈದ್ಯರಾಗಿ, ಸೊಸೆಯನ್ನು ಉದ್ಯಮಿಯಾಗಿ ಸಮಾಜಕ್ಕೆ ಕೊಡುಗೆಯಾಗಿ ನೀಡಿರುವ ತಾರಾ ಎ. ಮಂಜು ಅವರು, ಕುಟುಂಬದ ಜವಾಬ್ದಾರಿಗಳ ನಡುವೆಯೂ ಗ್ರಾಮೀಣ ಮಕ್ಕಳ ಶಿಕ್ಷಣಕ್ಕಾಗಿ ಸಮಯ ಮೀಸಲಿಟ್ಟಿರುವುದು ವಿಶೇಷ.
ತಮ್ಮ ಕುಟುಂಬದ ಮಕ್ಕಳಿಗೆ ದೊರೆಯುವ ಉತ್ತಮ ಶಿಕ್ಷಣ ಹಾಗೂ ಅವಕಾಶಗಳು ಗ್ರಾಮೀಣ ಬಡ ಮಕ್ಕಳಿಗೂ ಸಿಗಬೇಕು ಎಂಬ ವಿಶಾಲ ಮನೋಭಾವವೇ ಮಕ್ಕಳ ಮನೆ ಯೋಜನೆಗೆ ಪ್ರೇರಣೆಯಾಗಿದೆ. ಶಿಕ್ಷಣವು ಕೇವಲ ಸಿರಿವಂತರ ಸ್ವತ್ತಾಗದೆ, ಹಳ್ಳಿಯ ಮಕ್ಕಳಿಗೂ ದೊಡ್ಡ ಕನಸು ಕಾಣುವ ಅವಕಾಶ ಕಲ್ಪಿಸಬೇಕು ಎಂಬುದು ಅವರ ಆಶಯವಾಗಿದೆ.

ಹಿರಿಯ ವಿದ್ಯಾರ್ಥಿಗಳ ಸಂಘವೇ ಶಿಕ್ಷಣ ಅಭಿಯಾನದ ಬೆನ್ನೆಲುಬು
ಈ ಶೈಕ್ಷಣಿಕ ಕಾರ್ಯದ ಹಿಂದೆ ಹನ್ಯಾಳು ಹಿರಿಯ ವಿದ್ಯಾರ್ಥಿಗಳ ಸಂಘದ ಸಮರ್ಪಿತ ತಂಡ ಶ್ರಮಿಸುತ್ತಿದೆ. ಮಕ್ಕಳ ಮನೆಗಳ ನಿರ್ವಹಣೆ, ಶಿಕ್ಷಕಿಯರಿಗೆ ತರಬೇತಿ, ಕಲಿಕಾ ಸಾಮಗ್ರಿಗಳ ವ್ಯವಸ್ಥೆ ಹಾಗೂ ವಿವಿಧ ಶೈಕ್ಷಣಿಕ ಚಟುವಟಿಕೆಗಳ ಅನುಷ್ಠಾನದಲ್ಲಿ ತಂಡದ ಸದಸ್ಯರು ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ.
ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯೆ ತಾರಾ ಎ. ಮಂಜು ಅವರ ಮಾರ್ಗದರ್ಶನ ಹಾಗೂ ಹಿರಿಯ ವಿದ್ಯಾರ್ಥಿಗಳ ಸಂಘದ ಸಂಘಟಿತ ಪ್ರಯತ್ನದಿಂದ 20 ಮಕ್ಕಳ ಮನೆಗಳ ಮೂಲಕ 500ಕ್ಕೂ ಹೆಚ್ಚು ಮಕ್ಕಳಿಗೆ ಶಿಕ್ಷಣದ ಅವಕಾಶ ಕಲ್ಪಿಸಲಾಗಿದೆ.
ನೂರಾರು ಮಕ್ಕಳ ಬದುಕಿನಲ್ಲಿ ಶಿಕ್ಷಣದ ಬೆಳಕು!
ಒಂದು ಕುಟುಂಬದ ಮಕ್ಕಳ ಭವಿಷ್ಯ ರೂಪಿಸುವುದರ ಜೊತೆಗೆ ನೂರಾರು ಗ್ರಾಮೀಣ ಮಕ್ಕಳ ಬದುಕಿನಲ್ಲೂ ಶಿಕ್ಷಣದ ಬೆಳಕು ಮೂಡಿಸುತ್ತಿರುವ ತಾರಾ ಎ. ಮಂಜು ಅವರ ಸೇವಾ ಮನೋಭಾವ ಅಭಿನಂದನಾರ್ಹವಾಗಿದೆ. ಹುದ್ದೆ, ಅಧಿಕಾರ ಮತ್ತು ಕುಟುಂಬದ ಸಾಧನೆಗಳಾಚೆಗೆ ಸಮಾಜದ ಮಕ್ಕಳ ಭವಿಷ್ಯಕ್ಕಾಗಿ ಶ್ರಮಿಸುತ್ತಿರುವ ಅವರು ಅರಕಲಗೂಡಿನ ಜನರ ಪಾಲಿನ ‘ಅಮ್ಮ’ ತಾರಮ್ಮ ಎನಿಸಿಕೊಂಡಿದ್ದಾರೆ.
ಒಬ್ಬರ ಕನಸು, ಹಲವರ ಪರಿಶ್ರಮ, ನೂರಾರು ಮಕ್ಕಳ ಭವಿಷ್ಯ ಎಂಬ ಆಶಯದೊಂದಿಗೆ ಸಾಗುತ್ತಿರುವ ಈ ಶಿಕ್ಷಣ ಅಭಿಯಾನ ಗ್ರಾಮೀಣ ಶಿಕ್ಷಣ ಕ್ಷೇತ್ರಕ್ಕೆ ಮಾದರಿಯಾಗಿದೆ.
ವರದಿ: ಎಂ.ಎನ್. ಕುಮಾರಸ್ವಾಮಿ, ಲೇಖಕರು, ರಾಮನಾಥಪುರ.
