ರಾಮನಾಥಪುರ, ನ.26: ಪ್ರಕೃತಿ ನಮಗೆ ಭೂಮಿ, ಗಾಳಿ, ನೀರು ಸೇರಿದಂತೆ ಅನೇಕ ಅಮೂಲ್ಯ ಕೊಡುಗೆಗಳನ್ನು ಉಚಿತವಾಗಿ ನೀಡಿದೆ. ಅವುಗಳನ್ನು ಸಂರಕ್ಷಿಸುವುದು ನಮ್ಮೆಲ್ಲರ ಕರ್ತವ್ಯ. ಪ್ರತಿಯೊಬ್ಬ ರೈತರೂ ತಮ್ಮ ಜಮೀನಿನಲ್ಲಿ ಮರಗಿಡಗಳನ್ನು ಬೆಳೆಸುವ ಮೂಲಕ ಪರಿಸರ ಸಂರಕ್ಷಣೆಗೆ ಕೈಜೋಡಿಸಬೇಕು ಎಂದು ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ತಿಳಿಸಿದರು.
ರಾಮನಾಥಪುರ ಹೋಬಳಿಯ ಕೊಣನೂರು ವ್ಯಾಪ್ತಿಯ ಬಿಸಲಹಳ್ಳಿ ಗ್ರಾಮದಲ್ಲಿ ಮಾಜಿ ಶಾಸಕ ಡಾ. ಎ.ಟಿ. ರಾಮಸ್ವಾಮಿ ಅವರ ನೇತೃತ್ವದಲ್ಲಿ ನಿರ್ಮಿಸಿರುವ ಸಹಬಾಳ್ವೆ ಜೀವವೈವಿಧ್ಯ ಉದ್ಯಾನವನವನ್ನು ಸಂವಿಧಾನ ಅಂಗೀಕಾರ ದಿನದ ಅಂಗವಾಗಿ ಗುರುವಾರ ಲೋಕಾರ್ಪಣೆಗೊಳಿಸಿ ಮಾತನಾಡಿದರು.

ಸುಮಾರು 400ಕ್ಕೂ ಹೆಚ್ಚು ವಿವಿಧ ಸಸ್ಯ ಪ್ರಭೇದಗಳನ್ನು ನೆಟ್ಟು ಬೆಳೆಸಿರುವ ಈ ಉದ್ಯಾನವನ ಪರಿಸರ ಸಂರಕ್ಷಣೆಯ ಕಾರ್ಯಕ್ಕೆ ಮಾದರಿಯಾಗಿದೆ. ಪ್ರಕೃತಿಯಿಂದ ನಾವು ಸಾಕಷ್ಟು ಕೊಡುಗೆಗಳನ್ನು ಪಡೆಯುತ್ತಿದ್ದೇವೆ. ಆದರೆ, ಅದಕ್ಕೆ ಪ್ರತಿಯಾಗಿ ಪ್ರಕೃತಿಗೆ ಏನು ನೀಡುತ್ತಿದ್ದೇವೆ ಎಂಬುದನ್ನು ಪ್ರತಿಯೊಬ್ಬರೂ ಆತ್ಮಾವಲೋಕನ ಮಾಡಿಕೊಳ್ಳಬೇಕು. ಪರಿಸರ ಉಳಿಸುವ ನಿಟ್ಟಿನಲ್ಲಿ ಮರಗಿಡಗಳನ್ನು ಬೆಳೆಸುವ ಕಾರ್ಯಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಹೇಳಿದರು.

ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿ ವಿ. ಗೋಪಾಲಗೌಡ ಮಾತನಾಡಿ, ಕರ್ನಾಟಕ ಸೇರಿದಂತೆ ದೇಶ-ವಿದೇಶಗಳ ಸಮೃದ್ಧ ಸಸ್ಯಸಂಪತ್ತನ್ನು ಮುಂದಿನ ಪೀಳಿಗೆಗಾಗಿ ಸಂರಕ್ಷಿಸುವ ಉದ್ದೇಶದಿಂದ ಈ ಉದ್ಯಾನವನ ನಿರ್ಮಿಸಿರುವುದು ಶ್ಲಾಘನೀಯ. ಸ್ಥಳೀಯ ಜೀವವೈವಿಧ್ಯಕ್ಕೆ ಸೇರಿದ 400ಕ್ಕೂ ಹೆಚ್ಚು ಸಸ್ಯ ಪ್ರಭೇದಗಳ ಪರಿಚಯ, ಪರಿಸರ ಶಿಕ್ಷಣ ಹಾಗೂ ಪ್ರಕೃತಿಯೊಂದಿಗೆ ಸಹಬಾಳ್ವೆಯ ಮಹತ್ವ ಸಾರುವ ಈ ಯೋಜನೆ ಗ್ರಾಮೀಣ ಪ್ರದೇಶದಲ್ಲಿ ರೂಪುಗೊಂಡಿರುವುದು ವಿಶೇಷ ಎಂದರು.

ಮಾಜಿ ಶಾಸಕ ಡಾ. ಎ.ಟಿ. ರಾಮಸ್ವಾಮಿ ಅವರು ತಮ್ಮ ಜಮೀನನ್ನು ಪರಿಸರ ಸಂರಕ್ಷಣೆಯ ಉದ್ದೇಶಕ್ಕಾಗಿ ವಿನಿಯೋಗಿಸಿರುವುದು ಉತ್ತಮ ಕಾರ್ಯವಾಗಿದೆ. ಇಂತಹ ಸಮಾಜಮುಖಿ ವ್ಯಕ್ತಿಗಳು ರಾಜಕೀಯ ಕ್ಷೇತ್ರದಲ್ಲಿ ಮುಂದುವರಿಯಲು ಸಮಾಜ ಬೆಂಬಲ ನೀಡಬೇಕು ಎಂದು ಅಭಿಪ್ರಾಯಪಟ್ಟರು.
ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಜಗದ್ಗುರು ಶ್ರೀ ಡಾ. ನಿರ್ಮಲಾನಂದನಾಥ ಸ್ವಾಮೀಜಿ ಮಾತನಾಡಿ, ನೆಲ, ನೀರು ಹಾಗೂ ಅರಣ್ಯ ಸಂಪತ್ತು ರಾಷ್ಟ್ರದ ಅಮೂಲ್ಯ ಆಸ್ತಿಯಾಗಿದ್ದು, ಅವುಗಳ ಮೇಲೆ ಎಲ್ಲ ಪ್ರಜೆಗಳಿಗೂ ಹಕ್ಕಿದೆ. ಹೆಚ್ಚುತ್ತಿರುವ ಭೂಮಿಯ ಉಷ್ಣತೆಯನ್ನು ನಿಯಂತ್ರಿಸಲು ಪರಿಸರ ಮತ್ತು ಅರಣ್ಯ ಸಂರಕ್ಷಣೆ ಅತ್ಯಗತ್ಯ. ಪ್ರಕೃತಿಯ ಸಂಪತ್ತನ್ನು ಉಳಿಸುವ ಕಾರ್ಯದಲ್ಲಿ ಪ್ರತಿಯೊಬ್ಬರೂ ಪಾಲ್ಗೊಳ್ಳಬೇಕು ಎಂದು ಕರೆ ನೀಡಿದರು.
ಅಲಮಟ್ಟಿ ಮಠದ ಶ್ರೀ ರುದ್ರಮುನಿ ಸ್ವಾಮೀಜಿ ಮಾತನಾಡಿ, ಪರಿಸರ ಪುನರುಜ್ಜೀವನ ಹಾಗೂ ಜೀವವೈವಿಧ್ಯ ಸಂರಕ್ಷಣೆಗೆ ಬಯಲುಸೀಮೆಯಲ್ಲಿ ಅಪರೂಪದ ಸಸ್ಯ ಪ್ರಭೇದಗಳನ್ನು ಉಳಿಸಿ ಬೆಳೆಸಲು ಸುರಕ್ಷಿತ ಉದ್ಯಾನವನ ನಿರ್ಮಿಸಿರುವುದು ಉತ್ತಮ ಕಾರ್ಯವಾಗಿದೆ. ಪರಿಸರ ಕಾಳಜಿಯೊಂದಿಗೆ ಇಂತಹ ಯೋಜನೆ ರೂಪಿಸಿರುವ ಡಾ. ಎ.ಟಿ. ರಾಮಸ್ವಾಮಿ ಅವರ ಕಾರ್ಯ ಮೆಚ್ಚುವಂತದ್ದು ಎಂದರು.
ತ್ರಿವಿಧ ದಾಸೋಹಿ ಸಿದ್ದಗಂಗಾ ಮಠದ ಶ್ರೀ ಸಿದ್ದೇಶ್ವರ ಮಹಾಸ್ವಾಮೀಜಿ ಮಾತನಾಡಿ, ಪರಿಸರದ ಬಗ್ಗೆ ಕಾಳಜಿ ವಹಿಸಿ ಬಿಸಲಹಳ್ಳಿ ಗ್ರಾಮದ ಜನರಿಂದ ಐದು ಎಕರೆಗೂ ಹೆಚ್ಚು ಜಮೀನು ಪಡೆದು ಈ ಉದ್ಯಾನವನ ನಿರ್ಮಿಸಲಾಗಿದೆ. ಇಲ್ಲಿ ವಿವಿಧ ಸಸ್ಯ ಪ್ರಭೇದಗಳ ವೈಶಿಷ್ಟ್ಯ ಪರಿಚಯಿಸುವ ವ್ಯವಸ್ಥೆ, ಮಕ್ಕಳ ಆಟಕ್ಕೆ ಸ್ಥಳ, ಕಲ್ಯಾಣಿ, ಪ್ರಯಾಣಿಕರಿಗಾಗಿ ಬಸ್ ತಂಗುದಾಣ ಸೇರಿದಂತೆ ಹಲವು ಸೌಲಭ್ಯಗಳನ್ನು ಕಲ್ಪಿಸಿರುವುದು ಗಮನಾರ್ಹ ಎಂದರು.
ಪರಿಸರ ನಾಶ ಹಾಗೂ ಅಪರೂಪದ ಸಸ್ಯ ಪ್ರಭೇದಗಳು ವಿನಾಶದ ಅಂಚಿಗೆ ತಲುಪುತ್ತಿರುವ ಇಂದಿನ ಸಂದರ್ಭದಲ್ಲಿ 400ಕ್ಕೂ ಹೆಚ್ಚು ಸಸ್ಯ ಪ್ರಭೇದಗಳನ್ನು ನೆಟ್ಟು ಬೆಳೆಸುವ ಮೂಲಕ ಅವುಗಳ ಸಂರಕ್ಷಣೆಗೆ ಮುಂದಾಗಿರುವುದು ವಿಶೇಷ. ಇಂತಹ ಪರಿಸರಪರ ಕಾರ್ಯಗಳು ಎಲ್ಲೆಡೆ ವ್ಯಾಪಕವಾಗಿ ನಡೆಯಲಿ ಎಂದು ಆಶಿಸಿದರು.
ಕಾರ್ಯಕ್ರಮದಲ್ಲಿ ಶಿವಶರಣ ಮಾದಾರ ಚೆನ್ನಯ್ಯ ಗುರುಪೀಠದ ಅಧ್ಯಕ್ಷ ಶ್ರೀ ಬಸವಮೂರ್ತಿ ಮಾದಾರ ಚೆನ್ನಯ್ಯ ಸ್ವಾಮೀಜಿ, ಚುಲುಮೆ ಮಠದ ಶ್ರೀಗಳು, ತೇಜೂರು ಮಠದ ಶ್ರೀಗಳು, ಹಾಸನ ಆದಿಚುಂಚನಗಿರಿ ಮಠದ ಶ್ರೀಗಳು, ಕಿರಿಕೊಡ್ಲಿ ಮಠದ ಶ್ರೀಗಳು, ಕಲ್ಲುಮಠದ ಶ್ರೀಗಳು, ಹಾಸನ ಜವೇನಹಳ್ಳಿ ಮಠದ ಶ್ರೀಗಳು, ಕೆಸವತ್ತೂರು ಮಠದ ಶ್ರೀಗಳು, ಟಿ. ಮಾಯಿಗೌಡನಹಳ್ಳಿ ಮಠದ ಶ್ರೀಗಳು, ತೊರೆನೂರು ಮಠದ ಶ್ರೀಗಳು, ಸೋಮವಾರಪೇಟೆ ಮಠದ ಶ್ರೀಗಳು, ಅರಸೀಕಟ್ಟೆ ಅಮ್ಮ ದೇವಾಲಯ ಸಮಿತಿ ಅಧ್ಯಕ್ಷ ಡಾ. ಎ.ಟಿ. ರಾಮಸ್ವಾಮಿ, ಕಾರ್ಯದರ್ಶಿ ಕೃಷ್ಣೇಗೌಡ, ಸಂಘಟನೆಯ ಸದಸ್ಯರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.
ವರದಿ : ಕುಮಾರಸ್ವಾಮಿ, ರಾಮನಾಥಪುರ
