ಜೈಪುರ: ಉತ್ತರ ಪ್ರದೇಶದ ಬಳಿಕ ಇದೀಗ ರಾಜಸ್ಥಾನ ಸರ್ಕಾರವೂ ರಾಜ್ಯದ ಎಲ್ಲಾ ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ದೈನಂದಿನ ದಿನಪತ್ರಿಕೆ ಓದುವುದನ್ನು ಕಡ್ಡಾಯಗೊಳಿಸಿದೆ. ವಿದ್ಯಾರ್ಥಿಗಳ ಓದುವ ಅಭ್ಯಾಸ, ಭಾಷಾ ಕೌಶಲ್ಯ ಹಾಗೂ ಪ್ರಸಕ್ತ ವಿದ್ಯಮಾನಗಳ ಅರಿವು ಹೆಚ್ಚಿಸುವ ಉದ್ದೇಶದಿಂದ ಈ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ.
ಸರ್ಕಾರದ ಹೊಸ ಮಾರ್ಗಸೂಚಿಗಳ ಪ್ರಕಾರ, ಪ್ರತಿದಿನ ಶಾಲೆಗಳ ಬೆಳಗಿನ ಪ್ರಾರ್ಥನಾ ಸಭೆ (ಮಾರ್ನಿಂಗ್ ಅಸೆಂಬ್ಲಿ) ಸಂದರ್ಭದಲ್ಲಿ ಕನಿಷ್ಠ 10 ನಿಮಿಷಗಳ ಕಾಲ ವಿದ್ಯಾರ್ಥಿಗಳು ದಿನಪತ್ರಿಕೆ ಓದಬೇಕು. ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಸುದ್ದಿಗಳು, ಸಂಪಾದಕೀಯ ಲೇಖನಗಳು ಮತ್ತು ಕ್ರೀಡಾ ಸುದ್ದಿಗಳನ್ನು ಓದಿ ಚರ್ಚಿಸುವಂತೆ ಸೂಚಿಸಲಾಗಿದೆ.
ವಿದ್ಯಾರ್ಥಿಗಳ ಭಾಷಾ ಸಾಮರ್ಥ್ಯ ಹೆಚ್ಚಿಸುವ ನಿಟ್ಟಿನಲ್ಲಿ ಪ್ರತಿದಿನ ಐದು ಹೊಸ ಪದಗಳನ್ನು ಆಯ್ಕೆ ಮಾಡಿ, ಅದರ ಅರ್ಥ ಹಾಗೂ ಬಳಕೆಯನ್ನು ಶಿಕ್ಷಕರು ವಿದ್ಯಾರ್ಥಿಗಳಿಗೆ ವಿವರಿಸಬೇಕು ಎಂದು ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ. ಈ ಕ್ರಮದಿಂದ ವಿದ್ಯಾರ್ಥಿಗಳ ಶಬ್ದಕೋಶ ವಿಸ್ತರಣೆ ಮತ್ತು ಸಂವಹನ ಕೌಶಲ್ಯ ಹೆಚ್ಚಲಿದೆ ಎಂಬ ನಿರೀಕ್ಷೆ ಸರ್ಕಾರದ್ದಾಗಿದೆ.
ಇದನ್ನು ಓದಿ: ಭಾರತದ ಮೊದಲ ದೊಡ್ಡ ಕೊಳೆಗೇರಿ ಮುಕ್ತ ನಗರವಾಗಲು ಸೂರತ್ ಸಜ್ಜು- ಡೈಮಂಡ್ ಕ್ಯಾಪಿಟಲ್ಗೆ ಐತಿಹಾಸಿಕ ಸಾಧನೆ
ಈ ಯೋಜನೆಯಡಿ ಶಾಲೆಗಳಲ್ಲಿ ಹಿಂದಿ ಹಾಗೂ ಇಂಗ್ಲಿಷ್ ದಿನಪತ್ರಿಕೆಗಳನ್ನು ತರಲಾಗುತ್ತದೆ. ಸೀನಿಯರ್ ಸೆಕೆಂಡರಿ ಹಾಗೂ ಇಂಗ್ಲಿಷ್ ಮೀಡಿಯಂ ಶಾಲೆಗಳಿಗೆ ಕನಿಷ್ಠ ಎರಡು ದಿನಪತ್ರಿಕೆಗಳು (ಒಂದು ಹಿಂದಿ ಮತ್ತು ಒಂದು ಇಂಗ್ಲಿಷ್) ಕಡ್ಡಾಯವಾಗಿದ್ದು, ಅಪ್ಪರ್ ಪ್ರೈಮರಿ ಶಾಲೆಗಳಿಗೆ ಕನಿಷ್ಠ ಎರಡು ಹಿಂದಿ ದಿನಪತ್ರಿಕೆಗಳನ್ನು ಒದಗಿಸಲಾಗುತ್ತದೆ.
ಗಮನಾರ್ಹ ಅಂಶವೆಂದರೆ, ಈ ಯೋಜನೆಗೆ ಬೇಕಾಗುವ ಸಂಪೂರ್ಣ ವೆಚ್ಚವನ್ನು ರಾಜಸ್ಥಾನ ಸ್ಕೂಲ್ ಎಜ್ಯುಕೇಶನ್ ಕೌನ್ಸಿಲ್ ಭರಿಸಲಿದ್ದು, ಶಾಲೆಗಳ ಮೇಲೆ ಯಾವುದೇ ಆರ್ಥಿಕ ಹೊರೆ ಬೀಳುವುದಿಲ್ಲ ಎಂದು ಸರ್ಕಾರ ಸ್ಪಷ್ಟಪಡಿಸಿದೆ.
ಈ ನಿರ್ಧಾರದ ಹಿಂದಿನ ಮುಖ್ಯ ಉದ್ದೇಶ ವಿದ್ಯಾರ್ಥಿಗಳಲ್ಲಿ ಓದುವ ಸಂಸ್ಕೃತಿ ಬೆಳೆಸುವುದು, ಸಾಮಾನ್ಯ ಜ್ಞಾನ ಹಾಗೂ ಪ್ರಸಕ್ತ ವಿದ್ಯಮಾನಗಳ ತಿಳುವಳಿಕೆ ಹೆಚ್ಚಿಸುವುದು, ಭಾಷಾ ಕೌಶಲ್ಯ ವೃದ್ಧಿಸುವುದು ಮತ್ತು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅವರನ್ನು ಸಿದ್ಧಗೊಳಿಸುವುದಾಗಿದೆ.
ಉತ್ತರ ಪ್ರದೇಶದ ಬಳಿಕ ರಾಜಸ್ಥಾನ ಈ ಕ್ರಮ ಜಾರಿಗೆ ತಂದಿರುವುದು ದೇಶದ ಶಿಕ್ಷಣ ಕ್ಷೇತ್ರದಲ್ಲಿ ಗಮನಾರ್ಹ ಬೆಳವಣಿಗೆಯಾಗಿದೆ. ಮುಂದಿನ ದಿನಗಳಲ್ಲಿ ಇನ್ನೂ ಕೆಲವು ರಾಜ್ಯಗಳು ಇದೇ ಮಾದರಿಯ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ ಎಂದು ಶಿಕ್ಷಣ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

[…] ಇದನ್ನು ಓದಿ: ಸರ್ಕಾರಿ ಶಾಲೆಗಳಲ್ಲಿ ದಿನಪತ್ರಿಕೆ ಓದು ಕಡ… […]