ಟಿ.ನರಸೀಪುರ : ಬಿಡಿಗಿಂಡಿ ಕೆಟ್ಟು ನಿಂತು ವರುಷಗಳೇ ಕಳೆಯುತ್ತಿದ್ದರೂ ನೀರಾವರಿ ಇಲಾಖೆ ಸರಿಪಡಿಸುವ ಗೋಜಿಗೆ ಹೋಗದೆ ಇರುವುದರಿಂದ ಸರಿ ಸುಮಾರು ಮುನ್ನೂರು ಎಕರೆ ಪ್ರದೇಶದ ರೈತರ ಜಮೀನುಗಳಿಗೆ ನೀರು ಹೋಗದಿರುವುದರಿಂದ ರೈತರು ಬೆಳೆಯುವ ಬೆಳೆಗಳು ನಷ್ಟವಾಗುತ್ತಿವೆ ಎಂದು ಆರೋಪಿಸಿ, ಕರ್ನಾಟಕ ರಾಜ್ಯ ರೈತ ಸಂಘ ಮೂಲ ಸಂಘಟನೆಯ ಮೈಸೂರು ಜಿಲ್ಲಾದ್ಯಕ್ಷ ಬನ್ನೂರು ನಾರಾಯಣಗೌಡ ನೇತೃತ್ವದಲ್ಲಿ ಹಲವಾರು ರೈತರು ನಾಲೆಯ ಶಿಥಿಲಾವಸ್ಥೆ ಹಾಗೂ ನೀರು ಬಿಡುವ ಯಂತ್ರ ಕೆಟ್ಟು ನಿಂತಿರುವ ಸ್ಥಳದಲ್ಲೇ ತಮ್ಮ ಆಕ್ರೋಶವನ್ನು ಹೊರ ಹಾಕಿದರು.
ತಾಲ್ಲೂಕಿನ ಬನ್ನೂರು ಹೋಬಳಿ ಕೇತುಪುರ ಗ್ರಾಮದಲ್ಲಿ ಬರುವ ರಾಮಸ್ವಾಮಿ ನಾಲೆಯ 21 ನೇ ಮೈಲಿಯಲ್ಲಿರುವ ಬಾಗೂರು ಬೈಲಿನ ಬಿಡಿಗಿಂಡಿಯಲ್ಲಿ ಯಾವ,ಯಾವ ಸಮಯದಲ್ಲಿ ಎಷ್ಟು ಪ್ರಮಾಣದ ನೀರು ಬಿಡಬೇಕು ಎಂಬುವ ಸ್ಥಳದಲ್ಲೇ ಸ್ಥಳೀಯ ರೈತರು ಸೇರಿ ಸರ್ಕಾರ ಹಾಗೂ ಅಧಿಕಾರಿಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ನಾರಾಯಣ ಗೌಡ ಮಾತನಾಡಿ, ನಾಲೆಯಲ್ಲಿ ಏಕ ಮುಖವಾಗಿ ಮುಖ್ಯ ನಾಲೆಯಿಂದ ಬರುವ ನೀರನ್ನು ಸಮಪ್ರಮಾಣದಲ್ಲಿ ಕೊಡುವ ಯಂತ್ರ.ಕಳೆದು ಮೂರು ವರ್ಷಗಳಿಂದ ಕೆಟ್ಟು ನಿಂತಿದ್ದರೂ ಸರಿಪಡಿಸುವ ಗೋಜಿಗೆ ಹೋಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈಗಾಗಲೇ ಕ್ಷೇತ್ರದ ಶಾಸಕರಾಗಿ ಸಚಿವರಾಗಿರುವ ಡಾ.ಹೆಚ್.ಸಿ.ಮಹದೇವಪ್ಪನವರು ಹಾಗೂ ಸಂಸದರಾದ ಸುನಿಲ್ ಬೋಸ್ ರವರಿಗೂ ಈ ಸಮಸ್ಯೆ ಬಗ್ಗೆ ತಿಳಿಸಿದ್ದೇವೆ.ಆದರೂ ಸಮಸ್ಯೆ ಬಗೆ ಹರಿದಿಲ್ಲ ಎಂದು ಬೇಸರಿಸಿದರು.
ರಾಜ್ಯದಲ್ಲಿ ದುರಸ್ಥಿಗೆ ಬಂದಿರುವ ಎಲ್ಲಾ ಬಿಡಿಗಿಂಡಿಗಳನ್ನು ದುರಸ್ಥಿಗೊಳಿಸಬೇಕು.ಇಡೀ ದೇಶದಲ್ಲಿ ಕೃಷಿ ಚಟುವಟಿಕೆಗಳಿಂದ ಹೆಚ್ಚು ಜಿಡಿಪಿ ಬರುತ್ತಿದೆ ಎಂಬುದನ್ನು ಸರ್ಕಾರಗಳು ಮರೆಯಬಾರದೆಂದರು.

ಇದನ್ನು ಓದು: ಟಿ.ನರಸೀಪುರ : ಸಾಂಪ್ರದಾಯಿಕ ವೈಭವದೊಂದಿಗೆ ಮೂಗೂರು ಶ್ರೀ ತ್ರಿಪುರಸುಂದರಿ ಅಮ್ಮನವರ ಬಂಡಿ ಉತ್ಸವ – ಭಕ್ತರ ಭಾರಿ ಸಮಾಗಮ
ಹಸಿರು ಶಾಲು ಹಾಕಿಕೊಳ್ಳುವ ರಾಜಕಾರಣಿಗಳು ರೈತರಿಗಾಗಿ ಶಾಶ್ವತ ಕೆಲಸಗಳನ್ನು ಏನಾದರು ಮಾಡಿದ್ದಾರೆಯೇ ಎಂಬುದನ್ನು ಆತ್ಮಾವಲೋಕನ ಮಾಡಿಕೊಳ್ಳಬೇಕು.ಅಧಿಕಾರಕ್ಕೆ ಬರುವ ಮುನ್ನಾ…ಅಧಿಕಾರಕ್ಕೆ ಬಂದ ನಂತರ ಹೆಗಲ ಮೇಲೆ ಶಾಲು ಹಾಕಿಕೊಂಡು ರೈತ ಪರ ಎಂದು ಹೇಳಿಕೊಂಡು ಒಳಗೊಳಗೆ ಕೇವಲ ತಮ್ಮ ಮಕ್ಕಳು ಹಾಗೂ ಕುಟುಂಬ ವರ್ಗದ ಏಳಿಗೆಗಾಗಿ ದುಡಿಯುತ್ತಿದ್ದಾರೆಯೇ ವಿನಃ ರೈತ ಈ ದೇಶದ ಬೆನ್ನೆಲುಬು ಎಂದು ಭಾಷಣ ಬಿಗಿದು ಅಲ್ಲಿಗೆ ಸೀಮಿತಗೊಳಿಸಿ ರೈತರ ಉಳಿವಿಗಾಗಿ ರಾಜಕಾರಣಿಗಳು ಏನೂ ಮಾಡುತ್ತಿಲ್ಲವೆಂದು ಗಂಭೀರವಾಗಿ ಆರೋಪಿಸಿದರು.

ಕೆಲವರಿಗೆ ನೀರಿನ ಸಮಸ್ಯೆ, ಇನ್ನೂ ಕೆಲವರಿಗೆ ಅತಿವೃಷ್ಠಿ ಸಮಸ್ಯೆ.ಈ ಸಮಸ್ಯೆ ಬಗೆಹರಿಸದಿದ್ದರೆ ನಮ್ಮ ಕ್ಷೇತ್ರದ ಶಾಸಕರು ಹಾಗೂ ಸಚಿವರಾಗಿರುವ ಡಾ.ಹೆಚ್.ಸಿ.ಮಹದೇವಪ್ಪರವರಿಗೆ ಅವು ನಡೆಸುವ ಹಾಗೂ ಭಾಗವಹಿಸುವ ಸಭೆ,ಸಮಾರಂಭಗಳಲ್ಲಿ ಕಪ್ಪು ಬಾವುಟವನ್ನು ಪ್ರದರ್ಶನ ಮಾಡಿ ಉಗ್ರವಾದ ಪ್ರತಿಭಟನೆ ಮಾಡಬೇಕಾಗುತ್ತದೆಂದು ಎಚ್ಚರಿಸಿದರು.
ರೈತ ಮುಖಂಡ ಆನಂದ್ ಮಾತನಾಡಿ ನಾಲೆಯ ಕಾಂಕ್ರೀಟ್ ಸಂಪೂರ್ಣ ಕಿತ್ತು ಕಬ್ಬಿಣದ ಸರಳುಗಳು ಹೊರಗೆ ಬಂದಿವೆ.ಇದರಿಂದ ನಾಲೆಯ ಮೂಲಕ ರೈತರ ಜಮೀನುಗಳಿಗೆ ಸಮರ್ಪಕವಾಗಿ ನೀರು ಮುಂದೆ ಹೋಗುತ್ತಿಲ್ಲ.ಈ ಸಂಬಂಧ ಈಗಾಗಲೇ ನೀರಾವರಿ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದೇವೆ. ಈ ಹಿಂದೆ ನಾಲೆ ದುರಸ್ತಿಗೆ 50 ಲಕ್ಷ ಹಣ ಮುಂಜೂರಾಗಿ ಗುತ್ತಿಗೆದಾರರು ಕೆಲಸ ಮಾಡಲು ಬಾರದ ಕಾರಣ ಅದು ಕಪ್ಪು ಪಟ್ಟಿಗೆ ಸೇರಿದೆ ಎಂದು ಎಂಜಿನಿಯರ್ ಗಳು ಹೇಳುತ್ತಿದ್ದಾರೆ.ನಮ್ಮ ಒತ್ತಾಯ ವೇನೆಂದರೆ ಕಪ್ಪು ಪಟ್ಟಿಗೆ ಸೇರಿರುವ ಹಣವನ್ನು ತಾಂತ್ರಿಕ ಸಮಸ್ಯೆಗಳಿಂದ ಬಗೆಹರಿಸಿ ಕೂಡಲೇ ಅದೇ ಹಣವನ್ನು ವಾಪಸ್ಸು ತಂದು ದುರಸ್ತಿ ಕೆಲಸ ಮಾಡಿಸಿ ರೈತರಿಗೆ ಅನುಕೂಲ ಕಲ್ಪಿಸಬೇಕೆಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ರೈತ ಮುಖಂಡರುಗಳಾದ ಬೆಟ್ಟಹಳ್ಳಿ ಶಿವರಾಮು,ರಾಜು,ಕೇತುಪುರ ಆನಂದ,ನಾಗರಾಜು,ಸತೀಶ್,ಬೇವಿನಹಳ್ಳಿ ಕುಮಾರ್, ನಿಂಗು, ಶ್ರೀಧರ್,ಪುಟ್ಟಸ್ವಾಮಿ, ನಿಂಗೇಗೌಡ, ಕೇತುಪುರ ಕೃಷ್ಣೇಗೌಡ,ಚರಣ್,ರಮೇಶ್ ಸೇರಿದಂತೆ ಇತರರಿದ್ದರು.
– ಎಂ.ನಾಗೇಂದ್ರ ಕುಮಾರ್
