ಹಾಸನ: ನಗರದ ಎಸ್ಬಿಎಂ ಲೇಔಟ್ನ ಸತ್ತೆಕಟ್ಟೆ ಕೆರೆಯ ಅಕ್ಕಪಕ್ಕದ ರಸ್ತೆಯ ನಿವಾಸಿಗಳು ಇಂದು ಹಾಸನ ವಿಧಾನಸಭಾ ಕ್ಷೇತ್ರದ ಶಾಸಕರು ಹಾಗೂ ಮಹಾನಗರ ಪಾಲಿಕೆಯ ಸಂಬಂಧಪಟ್ಟ ಅಧಿಕಾರಿಗಳಲ್ಲಿ ತಮ್ಮ ಬೇಡಿಕೆಗಳನ್ನು ಮುಂದಿಟ್ಟಿದ್ದಾರೆ.
ಎಸ್ಬಿಎಂ ಲೇಔಟ್ ಸತ್ತೆಕಟ್ಟೆ ರಸ್ತೆಯ ಸುತ್ತಲಿನ ನಿವಾಸಿಗಳಿಗೆ ದಿನನಿತ್ಯ ಬೆಳಿಗ್ಗೆ ಹಾಗೂ ಸಂಜೆ ವಾಕ್ ಮಾಡಲು ಸೂಕ್ತ ವ್ಯವಸ್ಥೆಯಿಲ್ಲದೆ ಸಮಸ್ಯೆ ಎದುರಾಗುತ್ತಿತ್ತು. ಈ ಹಿನ್ನೆಲೆಯಲ್ಲಿ ಮಹಾನಗರ ಪಾಲಿಕೆಯ ಪರಿಸರ ಮತ್ತು ವಿದ್ಯುತ್ ಇಂಜಿನಿಯರ್ ಕವಿತಾ ಅವರು ತಾತ್ಕಾಲಿಕವಾಗಿ ಸತ್ತೆಕಟ್ಟೆ ಕೆರೆ ಪ್ರದೇಶವನ್ನು ಸ್ವಚ್ಛಗೊಳಿಸಿ, ನಿವಾಸಿಗಳಿಗೆ ಬೆಳಿಗ್ಗೆ ವಾಕ್ ಮಾಡಲು ಅನುಕೂಲ ಮಾಡಿಕೊಟ್ಟಿದ್ದಾರೆ ಎಂದು ನಿವಾಸಿಗಳು ತಿಳಿಸಿದರು.
ಆದರೆ ಈ ವ್ಯವಸ್ಥೆ ತಾತ್ಕಾಲಿಕವಾಗಿದ್ದು, ಸಂಜೆ ಸಮಯದಲ್ಲಿ ಕತ್ತಲೆ ಆವರಿಸುವುದರಿಂದ ವಾಕ್ ಮಾಡಲು ಸಾಧ್ಯವಾಗುತ್ತಿಲ್ಲ. ಈ ಹಿನ್ನೆಲೆ ಸತ್ತೆಕಟ್ಟೆ ಕೆರೆ ಸುತ್ತಲಿನ ಪ್ರದೇಶವನ್ನು ಶಾಶ್ವತವಾಗಿ ವಾಕ್ ಮಾಡಲು ಅನುಕೂಲವಾಗುವಂತೆ ಅಭಿವೃದ್ಧಿಪಡಿಸಬೇಕೆಂದು ನಿವಾಸಿಗಳು ಮನವಿ ಮಾಡಿದ್ದಾರೆ.

ನಿವಾಸಿಗಳ ಪರವಾಗಿ ಮಾತನಾಡಿದ ಸುರೇಶ್ ಅವರು, “ನಮ್ಮ ಕುಂದುಕೊರತೆಗಳನ್ನು ಶಾಸಕರು ಹಾಗೂ ಮಹಾನಗರ ಪಾಲಿಕೆ ಅಧಿಕಾರಿಗಳು ಆಲಿಸಬೇಕು. ಸತ್ತೆಕಟ್ಟೆ ಕೆರೆ ಏರಿಯನ್ನು ಶಾಶ್ವತ ವಾಕ್ ಪಥವಾಗಿ ಅಭಿವೃದ್ಧಿಪಡಿಸಲು ರಸ್ತೆ, ವಿದ್ಯುತ್ ದೀಪಗಳು ಹಾಗೂ ನಿರಂತರ ಸ್ವಚ್ಛತಾ ವ್ಯವಸ್ಥೆ ಅಗತ್ಯವಿದೆ” ಎಂದು ಹೇಳಿದರು.
ಈ ಸಂಬಂಧ ಶಾಸಕರು ಹಾಗೂ ಪಾಲಿಕೆ ಅಧಿಕಾರಿಗಳು ತ್ವರಿತವಾಗಿ ಸ್ಪಂದಿಸಿ ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಎಸ್ಬಿಎಂ ಲೇಔಟ್ ನಿವಾಸಿಗಳು ಆಗ್ರಹಿಸಿದ್ದಾರೆ.
