ಶ್ರವಣಬೆಳಗೊಳ: ಡಾ. ಎಸ್.ಎಲ್.ಭೈರಪ್ಪನವರ ನಿಧನಕ್ಕೆ ಶ್ರವಣಬೆಳಗೊಳ ಶ್ರೀ ದಿಗಂಬರ ಜೈನ ಮಠದ ಪೀಠಾಧ್ಯಕ್ಷರಾದ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಮಹಾಸ್ವಾಮೀಜಿಯವರ ಸಂತಾಪ

ಕನ್ನಡ ಸಾರಸ್ವತ ಲೋಕದ ಮೇರು ಸಾಹಿತಿ, ಖ್ಯಾತ ಕಾದಂಬರಿಕಾರರು, ತತ್ವಜ್ಞಾನಿ, ಪದ್ಮಶ್ರೀ ಪ್ರಶಸ್ತಿ, ಪದ್ಮಭೂಷಣ ಪುರಸ್ಕೃತರು,
ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಸರಸ್ವತಿ ಸಮ್ಮಾನ್, ನಾಡೋಜ ಸೇರಿದಂತೆ ಹಲವಾರು ಪ್ರಶಸ್ತಿಗಳಿಗೆ ಭಾಜನರಾಗಿದ್ದ ಡಾ. ಎಸ್.ಎಲ್.ಭೈರಪ್ಪರವರ ನಿಧನದಿಂದ ಕನ್ನಡ ಸಾರಸ್ವತ ಲೋಕದ ತಲೆಮಾರಿನ ಅದ್ಭುತ ಪ್ರತಿಭೆ ಕಣ್ಮರೆಯಾದಂತಾಗಿದೆ ಎಂದು ಸ್ವಸ್ತಿಶ್ರೀ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮೀಜಿ ಸಂತಾಪ ವ್ಯಕ್ತಪಡಿಸಿದರು.
ನಾಡಿನ ಸಾಹಿತ್ಯ ಲೋಕದ ಸಾಕ್ಷಿಪ್ರಜ್ಞೆಯಂತಿದ್ದ ಎಸ್.ಎಲ್.ಭೈರಪ್ಪ ಅವರು ಸಾಹಿತ್ಯವನ್ನೇ ಉಸಿರಾಗಿಸಿಕೊಂಡು ಬದುಕಿದವರು. ಅವರ ಪ್ರಮುಖ ಕಾದಂಬರಿಗಳಾದ ವಂಶವೃಕ್ಷ, ದಾಟು, ತಂತು, ಪರ್ವ, ಆವರಣ, ಗೃಹಭಂಗ, ಮಂದ್ರ ಮುಂತಾದವುಗಳ ಮೂಲಕ ಕನ್ನಡ ಸಾಹಿತ್ಯಕ್ಕೆ ಅಪಾರ ಕೊಡುಗೆ ನೀಡಿದ್ದಾರೆ.
ಅವರು ಬರವಣಿಗೆಯ ಮೂಲಕ ಕನ್ನಡ ಸಾಹಿತ್ಯವನ್ನು ಸಮೃದ್ದಿಗೊಳಿಸಿದ್ದರು. ಅವರ ಬರಹಗಳು ಸಮಾಜದ ಕುರಿತು ಚಿಂತಿಸಲು ಪ್ರೇರಣೆ ನೀಡಿದ್ದವು. ಇತಿಹಾಸ ಹಾಗೂ ಸಂಸ್ಕೃತಿಯ ಕುರಿತು ಅವರಿಗಿದ್ದ ಒಲವು ಮುಂದಿನ ತಲೆಮಾರಿಗೂ ಮಾದರಿಯಾಗಲಿದೆ. ಅವರು ತಮ್ಮ ಕಾದಂಬರಿಗಳಿಂದ ಬೃಹತ್ ಓದುಗ ವರ್ಗವನ್ನೇ ಸೃಷ್ಠಿಸಿಕೊಂಡಿದ್ದರು. ಹಿಂದಿ, ಇಂಗ್ಲಿಷ್ ಸೇರಿದಂತೆ ಭಾರತೀಯ ಇತರೆ ಭಾಷೆಗಳಿಗೆ ಇವರ ಕಾದಂಬರಿಗಳು ಅನುವಾದಗೊಂಡು ಸಾಕಷ್ಟು ಪ್ರಸಿದ್ಧಿ ಪಡೆದಿದ್ದವು. ನಾಲ್ಕು ದಶಕಗಳಲ್ಲಿ ಅನೇಕ ಕಾದಂಬರಿಗಳನ್ನು ರಚಿಸಿದ್ದರು. ಇವರ ಬರಹ, ನಡೆ, ನುಡಿ ಸಾಹಿತ್ಯ ಲೋಕದಲ್ಲಿ ಸದಾ ಅಜರಾಮರವಾಗಿರುತ್ತದೆ.
ಡಾ. ಎಸ್.ಎಲ್.ಬೈರಪ್ಪನವರು ಪರಮಪೂಜ್ಯ ಜಗದ್ಗುರು ಕರ್ಮಯೋಗಿ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಮಹಾಸ್ವಾಮಿಜಿಯವರೊಂದಿಗೆ ಅವಿನಾಭಾವ ಒಡನಾಟ ಹೊಂದಿದ್ದರು. ಅವರಿಗೆ ಶ್ರೀಕ್ಷೇತ್ರದ ವತಿಯಿಂದ ಸನ್ಮಾನಿಸಿ, ಅಭಿನಂದನೆ ಸಲ್ಲಿಸಿದ ಸಂದರ್ಭದಲ್ಲಿ ಮಾತನಾಡಿದ ಅವರು “ನನ್ನ ಪ್ರತಿಯೊಂದು ಕಾದಂಬರಿಗಳಲ್ಲೂ ಜೀವನ ಮೌಲ್ಯಗಳನ್ನು ಬಿಡಿ ಬಿಡಿಯಾಗಿ ಪರಿಶೋಧನೆ ಮಾಡುವ ಕ್ರಮವಾಗಿದ್ದು, ಮೂಲಭೂತವಾದ ಅಹಿಂಸೆ ಹಾಗೂ ಇತರ ಮೌಲ್ಯಗಳ ಶೋಧನೆಗೆ ಪ್ರಯತ್ನ ಮಾಡಿದ್ದೇನೆ. ಇದಕ್ಕೆ ಜೈನ ಧರ್ಮದ ಸಿದ್ಧಾಂತಗಳು ಸಹಕಾರಿಯಾಗಿದೆ” ಎಂದು ಹೇಳಿದ್ದರು ಎಂದು ಸ್ಮರಿಸಿದರು.
ಡಾ. ಎಸ್.ಎಲ್.ಬೈರಪ್ಪನವರು ಸಾಹಿತಿಯಾಗಿ ನಾಡಿನಲ್ಲಷ್ಟೇ ಅಲ್ಲದೇ ವಿಶ್ವಾದ್ಯಂತ ಲಕ್ಷಾಂತರ ಅಭಿಮಾನಿಗಳನ್ನು ಹೊಂದಿದ್ದು, ಅವರ ಅಗಲಿಕೆಯ ದುಃಖವನ್ನು ಭರಿಸುವ ಶಕ್ತಿಯನ್ನು ಭಗವಂತ ಅವರ ಕುಟುಂಬದವರಿಗೆ ಕರುಣಿಸಲಿ ಹಾಗೂ ಹಿರಿಯ ಜೀವಕ್ಕೆ ಚಿರಶಾಂತಿಯನ್ನು ನೀಡಲಿ ಎಂದು ಭಗವಾನ್ ಶ್ರೀ ಬಾಹುಬಲಿ ಸ್ವಾಮಿಯವರಲ್ಲಿ ಪ್ರಾರ್ಥಿಸುತ್ತೇವೆ ಎಂದು ಸಂತಾಪ ಸೂಚಿಸಿದ್ದಾರೆ.
ವರದಿ : ಐ ಕೆ ಮಂಜುನಾಥ್
