Oplus_16908288
ಸಿರಾ: ತಾಲ್ಲೂಕಿನ ಬ್ರಹ್ಮಸಂದ್ರ ಗೊಲ್ಲರಟ್ಟಿಯ ಶ್ರೀ ಹರಿಹರ ಜಡೆ ಮುನೇಶ್ವರ ಸ್ವಾಮಿ ಹಾಗೂ ಶ್ರೀ ಉಮಾಮಹೇಶ್ವರಿ ದೇವಿಯ ಸುಕ್ಷೇತ್ರದಲ್ಲಿ 14ನೇ ವರ್ಷದ ಬ್ರಹ್ಮರಥೋತ್ಸವವು ಅತ್ಯಂತ ವಿಜೃಂಭಣೆಯಿಂದ ನೆರವೇರಿತು.
ರಥೋತ್ಸವದ ಅಂಗವಾಗಿ ದೇವಾಲಯದಲ್ಲಿ ವಿವಿಧ ಧಾರ್ಮಿಕ ವಿಧಿವಿಧಾನಗಳು ಹಾಗೂ ವಿಶೇಷ ಪೂಜಾ ಕಾರ್ಯಕ್ರಮಗಳು ಜರುಗಿದವು. ಶ್ರೀ ಓಬಳ ನರಸಿಂಹಸ್ವಾಮಿ, ಕಡಗದ ಕರಿಯಮ್ಮ ದೇವಿ, ಗೊಲ್ಲರಟ್ಟಿ ಮಣ್ಣಮ್ಮ ದೇವಿ, ಮಾದಾಪುರದಮ್ಮ ದೇವಿ, ಸೀತಾರಾಮ, ಲಕ್ಷ್ಮಣ, ಆಂಜನೇಯ ಸ್ವಾಮಿ ಹಾಗೂ ಹಾಲುದೊಡ್ಡೇರಿ ದೇವರುಗಳಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು.

ನಂತರ ಅಲಂಕೃತ ದೇವರ ಮೂರ್ತಿಯನ್ನು ಸರ್ವಾಲಂಕೃತ ರಥದಲ್ಲಿ ಪ್ರತಿಷ್ಠಾಪಿಸಿ, ಪ್ರಧಾನ ಅರ್ಚಕರ ನೇತೃತ್ವದಲ್ಲಿ ರಥೋತ್ಸವಕ್ಕೆ ಚಾಲನೆ ನೀಡಲಾಯಿತು. ವೀರಗಾಸೆ ಹಾಗೂ ವಿವಿಧ ಜಾನಪದ ಕಲಾತಂಡಗಳ ಪ್ರದರ್ಶನ, ವಿದ್ಯುತ್ ದೀಪಾಲಂಕಾರ ಮತ್ತು ಅಲಂಕೃತ ದೇವಾಲಯವು ಭಕ್ತರ ಗಮನ ಸೆಳೆಯಿತು. ಜಯಘೋಷಗಳ ನಡುವೆ ಸಹಸ್ರಾರು ಭಕ್ತರು ರಥವನ್ನು ಎಳೆದು ಭಕ್ತಿಭಾವ ಮೆರೆದರು. ಬಳಿಕ ಶ್ರೀ ಜಡೆ ಮುನೇಶ್ವರಸ್ವಾಮಿ ಹಾಗೂ ಶ್ರೀ ಉಮಾಮಹೇಶ್ವರಿ ದೇವಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು.

ರಥೋತ್ಸವದಲ್ಲಿ ಸಿರಾ ತಾಲ್ಲೂಕಿನ ಸುತ್ತಮುತ್ತಲಿನ ಗ್ರಾಮಗಳಷ್ಟೇ ಅಲ್ಲದೆ ತುಮಕೂರು, ದೊಡ್ಡಬಳ್ಳಾಪುರ, ರತ್ನಗಿರಿ, ಮೈಸೂರು, ಬೆಂಗಳೂರು ಸೇರಿದಂತೆ ವಿವಿಧೆಡೆಗಳಿಂದ ಸಹಸ್ರಾರು ಭಕ್ತರು ಆಗಮಿಸಿದ್ದರು. ಹರಕೆ ಹೊತ್ತ ಭಕ್ತರು ದೇವರ ದರ್ಶನ ಪಡೆದು ಪೂಜೆ ಸಲ್ಲಿಸಿದರು. ಭಕ್ತರ ಸುರಕ್ಷತೆಗಾಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು. ಜಾತ್ರಾ ಅಂಗವಾಗಿ ತಿಂಡಿ-ತಿನಿಸು, ಆಟಿಕೆ ಸೇರಿದಂತೆ ವಿವಿಧ ವಸ್ತುಗಳ ಮಾರಾಟವೂ ಭರದಿಂದ ಸಾಗಿತು.

ಹರಕೆ ತೀರಿಸುವ ನಂಬಿಕೆ
ಶ್ರೀ ಉಮಾಮಹೇಶ್ವರಿ ದೇವಿಯ ಪವಾಡ ಹಾಗೂ ಶ್ರೀ ಜಡೆ ಮುನೇಶ್ವರಸ್ವಾಮಿಯ ಕೃಪೆಯಿಂದ ತಮ್ಮ ಕಷ್ಟ-ಕಾರ್ಪಣ್ಯಗಳು ದೂರವಾಗುತ್ತವೆ ಎಂಬ ನಂಬಿಕೆ ಭಕ್ತರಲ್ಲಿದೆ. ಸನ್ನಿಧಿಗೆ ಬಂದು ಪೂಜೆ ಸಲ್ಲಿಸಿ ಹರಕೆ ಹೊತ್ತರೆ ಮನೋರಥಗಳು ಈಡೇರುತ್ತವೆ ಎಂಬ ವಿಶ್ವಾಸದಿಂದ ಭಕ್ತರು ದೇವರ ದರ್ಶನ ಪಡೆದರು. ಕಂಕಣ ಭಾಗ್ಯ, ಸಂತಾನ ಭಾಗ್ಯ ಹಾಗೂ ಜಮೀನು-ನಿವೇಶನ ಖರೀದಿ ಸೇರಿದಂತೆ ಹಲವು ಮನೋರಥಗಳು ಈಡೇರಿವೆ ಎಂದು ಭಕ್ತರು ತಮ್ಮ ಅನುಭವ ಹಂಚಿಕೊಂಡರು.
ಭಕ್ತರಿಗೆ ಅನ್ನದಾನ
ರಥೋತ್ಸವಕ್ಕೆ ಆಗಮಿಸಿದ್ದ ಸಾವಿರಾರು ಭಕ್ತರಿಗೆ ದೇವಾಲಯದ ಆಡಳಿತ ಮಂಡಳಿ ಹಾಗೂ ಹರಕೆ ಹೊತ್ತ ಭಕ್ತರ ಸಹಕಾರದಲ್ಲಿ ನೀರು ಮತ್ತು ಅನ್ನದಾನದ ವ್ಯವಸ್ಥೆ ಮಾಡಲಾಗಿತ್ತು. ದೂರದ ಊರುಗಳಿಂದ ಆಗಮಿಸಿದ್ದ ಭಕ್ತರು ಪ್ರಸಾದ ಸ್ವೀಕರಿಸಿ ದೇವರ ಕೃಪೆಗೆ ಪಾತ್ರರಾದರು.
ರಥೋತ್ಸವದ ಅಂಗವಾಗಿ ಶ್ರೀ ಹರಿಹರ ಜಡೆ ಮುನೇಶ್ವರ ಸ್ವಾಮಿ ಹಾಗೂ ಶ್ರೀ ಉಮಾಮಹೇಶ್ವರಿ ದೇವಿಯ ಸಮಸ್ತ ಭಕ್ತರು ಮತ್ತು ಸುತ್ತಮುತ್ತಲಿನ ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಉತ್ಸವವನ್ನು ಯಶಸ್ವಿಗೊಳಿಸಿದರು.
ವರದಿ: ನರಸಿಂಹಯ್ಯ ಹೊಸಕೋಟೆ
