ಕೆ.ಆರ್.ಪೇಟೆ,ನ.14: ನಮ್ಮ ರಾಜ್ಯ ಸರ್ಕಾರದ ಐದು ಗ್ಯಾರಂಟಿ ಯೋಜನೆಗಳು ಜನಸಾಮಾನ್ಯರಿಗೆ ಮತ್ತು ಬಡವರಿಗೆ ಆರ್ಥಿಕ ನೆರವು ನೀಡಿ, ಅವರ ಜೀವನಮಟ್ಟವನ್ನು ಸುಧಾರಿಸಿವೆ. ಸಾಮಾಜಿಕ ನ್ಯಾಯವನ್ನು ಉತ್ತೇಜಿವೆ. ಆರ್ಥಿಕವಾಗಿ ದುರ್ಬಲ ವರ್ಗದವರಿಗೆ ಉದ್ಯೋಗ ಮತ್ತು ಸ್ವಾವಲಂಬನೆಯ ಅವಕಾಶಗಳನ್ನು ಒದಗಿಸಿವೆ.

ಈ ಯೋಜನೆಗಳು ವಿಶೇಷವಾಗಿ ಮಹಿಳೆಯರು ಮತ್ತು ನಿರುದ್ಯೋಗಿಗಳಿಗೆ ಆರ್ಥಿಕ ಭದ್ರತೆ ಮತ್ತು ಜೀವನದ ಭದ್ರತೆಯನ್ನು ಒದಗಿಸಿವೆ ಎಂದು ಕರ್ನಾಟಕ ಸರ್ಕಾರದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ತಾಲ್ಲೂಕು ಘಟಕದ ಅಧ್ಯಕ್ಷರಾದ ಅಗ್ರಹಾರಬಾಚಹಳ್ಳಿ ಎ.ಬಿ.ಕುಮಾರ್ ಹೇಳಿದರು.

ಅವರು ಪಟ್ಟಣದ ತಾಲ್ಲೂಕು ಪಂಚಾಯಿತಿಯ ನಾಲ್ವಡಿ ಕೃಷ್ಣರಾಜ ಒಡೆಯರ್ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ತಾಲ್ಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಗ್ಯಾರಂಟಿ ಯೋಜನೆಗಳ ಯಶಸ್ವಿ ಅನುಷ್ಠಾನವು ರಾಜ್ಯದ ಅಭಿವೃದ್ಧಿ ಕಾರ್ಯಗಳಲ್ಲೂ ಗ್ಯಾರಂಟಿ ನೀಡುತ್ತದೆ ಮತ್ತು ಸಮಾಜದ ಪ್ರತಿಯೊಂದು ವರ್ಗದ ಸುಧಾರಣೆಗೆ ಕೊಡುಗೆ ನೀಡಿದೆ. ಬೆಲೆ ಏರಿಕೆ, ನಿರುದ್ಯೋಗ ಮುಂತಾದ ಸಮಸ್ಯೆಗಳಿಂದ ತತ್ತರಿಸಿರುವ ಜನರಿಗೆ ಆರ್ಥಿಕ ನೆರವು ನೀಡುವ ಮೂಲಕ ಅವರ ಬದುಕನ್ನು ಸುಧಾರಿಸಿವೆ. ಜನಸಾಮಾಸ್ಯರಿಗೆ ಬದುಕಲು ಬೇಕಾದ ಮೂಲ ಸೌಲಭ್ಯಗಳು ನಮ್ಮ ಗ್ಯಾರಂಟಿ ಯೋಜನೆಯಿಂದ ಸಿಗುತ್ತಿವೆ. ಯಾರೂ ಸಹ ಬದುಕಿಗಾಗಿ ಸಾಲ ಮಾಡುವ ಪ್ರಮೇಯವೇ ಬರುವುದಿಲ್ಲ. ಗೃಹಲಕ್ಷ್ಮೀ ಯೋಜನೆಯಂತಹವು ಮಹಿಳೆಯರ ಆರ್ಥಿಕ ಸ್ವಾವಲಂಬನೆಗೆ ಮತ್ತು ಶಿಕ್ಷಣದಂತಹ ಉತ್ತಮ ಕಾರ್ಯಗಳಿಗೆ ನೆರವಾಗಿದೆ ಎಂದು ತಿಳಿಸಿದರು. ಜನವರಿ ತಿಂಗಳಿನಿಂದ ಇಂದಿರಾ ಕಿಟ್ ಅನ್ನು ಆಹಾರ ಇಲಾಖೆಯ ಮೂಲಕ ಸೊಸೈಟಿಗಳು ಹಾಗೂ ನ್ಯಾಯ ಬೆಲೆ ಅಂಗಡಿಗಳಿಂದ ವಿತರಣೆ ಮಾಡಲಾಗುತ್ತಿದೆ. ಈ ಇಂದಿರಾ ಕಿಟ್ ನಲ್ಲಿ ಬೇಳೆ, ಅಡುಗೆ ಎಣ್ಣೆ, ಸೋಪು, ಅಕ್ಕಿ ಮತ್ತಿತರ ಮನೆ ಬಳಕೆಯ ಅಗತ್ಯ ವಸ್ತುಗಳು ಇರುತ್ತವೆ ಹಾಗಾಗಿ ಅರ್ಹ ಬಿಪಿಎಲ್ ಕಾರ್ಡುದಾರರ ಫಲಾನುಭವಿಗಳು ಇದರ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಎ.ಬಿ.ಕುಮಾರ್ ಸಲಹೆ ನೀಡಿದರು.

ತಾಲ್ಲೂಕು ಆಹಾರ ಇಲಾಖೆಯ ಶಿರಸ್ತೇದಾರ್ ನಟರಾಜ್, ಚೆಸ್ಕಾಂ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಪುಟ್ಟಸ್ವಾಮೀಗೌಡ, ತಾಲ್ಲೂಕು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಎಸಿಡಿಪಿಓ ಪದ್ಮಮ್ಮ, ಜಿಲ್ಲಾ ಉದ್ಯೋಗಾಧಿಕಾರಿ ವಿ.ನವೀನ್ಕುಮಾರ್, ಡಿಪೋ ಟ್ರಾಪಿಕ್ ಇನ್ಸ್ಪೆಕ್ಟರ್ ಗವಿಸಿದ್ದಪ್ಪ ಅವರು ತಮ್ಮ ತಮ್ಮ ಇಲಾಖೆಯ ಪ್ರಗತಿಯ ವರದಿಯನ್ನು ಮಂಡಿಸಿದರು.
ಸಭೆಯಲ್ಲಿ ತಾಲೂಕು ಪಂಚಾಯ್ತಿ ಕಾರ್ಯನಿರ್ವಾಹಕ ಅಧಿಕಾರಿಗಳು ಹಾಗೂ ಗ್ಯಾರಂಟಿ ಸಮಿತಿಯ ಸದಸ್ಯ ಕಾರ್ಯದರ್ಶಿ ಕೆ.ಸುಷ್ಮ, ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರ ಸಮಿತಿಯ ಸದಸ್ಯರಾದ ಬೊಮ್ಮೇನಹಳ್ಳಿ ಲತಾಹರೀಶ್, ಕನಕದಾಸನಗರ ಶಿವಮ್ಮ, ಕೆ.ಎಸ್.ಆರ್.ಟಿ.ಸಿ ಶಿವಣ್ಣ, ಸಿಂಗನಹಳ್ಳಿ ಗೋಪಾಲ್, ಸಿ.ಆರ್.ಪಿ.ಕುಮಾರ್, ಬೂಕನಕೆರೆ ರೂಪಾಚಂದ್ರಶೇಖರ್, ಬಂಡಿಹೊಳೆ ಯೋಗೇಶ್(ಉಮೇಶ್), ಹಾಫೀಜ್ ಉಲ್ಲಾ, ಗೋವಿಂದನಹಳ್ಳಿ ಶ್ಯಾಮಣ್ಣ, ಬೂಕನಕೆರೆ ಬಿ.ಸಿ.ಮಾಧು, ದೊಡ್ಡತಾರಹಳ್ಳಿ ಸೋಮಶೇಖರ್, ಶಿವಲಿಂಗಪ್ಪ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ವಿಷಯ ನಿರ್ವಾಹಕಿ ನಂದಿನಿ ಇತರರು ಉಪಸ್ಥಿತರಿದ್ದರು.
–ಶ್ರೀನಿವಾಸ್ ಆರ್.
