ಟಿ.ನರಸೀಪುರ : ಭಾರತ ಒಕ್ಕೂಟ ಸರ್ಕಾರವು ನಡೆಸುವ ರೈಲ್ವೆ ನೇಮಕಾತಿ ಪರೀಕ್ಷೆಯಲ್ಲಿ ಕನ್ನಡವನ್ನು ಕೈ ಬಿಟ್ಟು ಇಂಗ್ಲಿಷ್ ಮತ್ತು ಹಿಂದಿಯಲ್ಲಿ ಪರೀಕ್ಷೆ ನಡೆಸಿರುವುದನ್ನು ಕನ್ನಡಪರ ಹೋರಾಟಗಾರರು ಮತ್ತು ಕನ್ನಡ ಸಾಂಸ್ಕೃತಿಕ ಪರಿಷತ್ತು ರಾಜ್ಯಾಧ್ಯಕ್ಷರಾದ ಎಸ್ ಕೆ ರಾಜೂಗೌಡ ರವರು ಖಂಡಿಸಿದ್ದಾರೆ.
ತಾಲ್ಲೂಕಿನ ಬನ್ನೂರು ಪಟ್ಚಣದಲ್ಲಿ ಮಾತನಾಡಿ ಭಾರತ ಒಕ್ಕೂಟದ ಈ ನಡೆ ಒಕ್ಕೂಟ ವ್ಯವಸ್ಥೆಗೆ ಮಾರಕ ಮತ್ತು ಕನ್ನಡ ಹಾಗೂ ಕನ್ನಡಿಗರಿಗೆ ಮಾಡಿದ ಅನುಮಾನವಾಗಿದೆ ಇದನ್ನು ನಮ್ಮ ಸಂಘಟನೆಯು ಖಂಡಿಸುತ್ತದೆ ಎಂದರು,
ಇದರ ಬಗ್ಗೆ ಸಂಸತ್ತಿನಲ್ಲಿ ನಮ್ಮ ನಾಡಿನ ಸಂಸದರು ಯಾವುದೇ ಪ್ರತಿರೋಧ ವ್ಯಕ್ತಪಡಿಸಿ ದನಿ ಮಾಡದಿರುವುದು ಸರಿಯಲ್ಲ ಕೂಡಲೇ ಸಂಸದರು ಮತ್ತು ಸಚಿವರು ಈ ಬಗ್ಗೆ ಎಚ್ಚೆತ್ತುಕೊಂಡು ಸಂಬಂಧಿಸಿದವರ ಜೊತೆಗೆ ವ್ಯವಹರಿಸಿ ಕನ್ನಡ ಕೈ ಬಿಟ್ಟು ನಡೆಸಿರುವ ರೈಲ್ವೆ ನೇಮಕಾತಿ ಪರೀಕ್ಷೆಯನ್ನು ಕೂಡಲೇ ರದ್ದುಮಾಡಿ ಹೊಸದಾಗಿ ಕನ್ನಡದಲ್ಲಿಯೂ ಕೂಡ ರೈಲ್ವೆ ನೇಮಕಾತಿ ಪರೀಕ್ಷೆಯನ್ನು ನಡೆಸಬೇಕೆಂದು ಆಗ್ರಹಿಸಿದರು.
ಕರ್ನಾಟಕದಿಂದ ಆಯ್ಕೆ ಆಗಿ ಹೋದಂತಹ ಸಂಸದರು ಪಕ್ಷಾತೀತವಾಗಿ ನಮ್ಮ ನಾಡು,ನುಡಿ,ಜಲದ ಬಗ್ಗೆ ಒಕ್ಕೂರಲ ದನಿ ಎತ್ತಿದಾಗ ಮಾತ್ರ ನಮ್ಮ ಹಕ್ಕನ್ನು ಪಡೆಯಲು ಸಾಧ್ಯ.
ಜೊತೆಗೆ ಈ ಬಗ್ಗೆ ನಮ್ಮ ಕರ್ನಾಟಕ ಸರ್ಕಾರವು ಕೂಡಲೇ ವಿಧಾನಸಭೆಯ ಅಧಿವೇಶನದಲ್ಲಿ ಖಂಡನಾ ನಿರ್ಣಯ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
– ಎಂ.ನಾಗೇಂದ್ರಕುಮಾರ್
