ಹಾಸನ: ಹಾಸನ ನಗರದಲ್ಲಿ ರೌಡಿಶೀಟರ್ ಜೆಸಿಬಿ ಮಂಜನ ಮೇಲೆ ಇಪ್ಪತ್ತಕ್ಕೂ ಹೆಚ್ಚು ಪುಡಿರೌಡಿಗಳಿದ್ದ ಗ್ಯಾಂಗ್ ಮಾರಕಾಸ್ತ್ರಗಳಿಂದ ದಾಳಿ ನಡೆಸಿ ಕೊಲೆಗೆ ಯತ್ನಿಸಿದ ಘಟನೆ ಶುಕ್ರವಾರ ರಾತ್ರಿ ನಡೆದಿದೆ.
ನಗರದ ರಿಂಗ್ ರಸ್ತೆಯಲ್ಲಿ, ಬಾರ್ ಸಮೀಪ ಇರುವ ಫುಟ್ಪಾತ್ ಮೇಲೆ ಈ ಭೀಕರ ಘಟನೆ ಸಂಭವಿಸಿದ್ದು, ಕುತ್ತಿಗೆಗೆ ಭರ್ಜಿಯಿಂದ ತಿವಿದು ಹಲ್ಲೆ ನಡೆಸಲಾಗಿದೆ. ಆದರೆ ಕೂದಲೆಳೆ ಅಂತರದಲ್ಲಿ ಜೆಸಿಬಿ ಮಂಜ ಸಾವಿನಿಂದ ಪಾರಾಗಿದ್ದಾರೆ.
ಪೊಲೀಸ್ ಮೂಲಗಳ ಪ್ರಕಾರ, ಜೆಸಿಬಿ ಮಂಜ ಮನೆದಲ್ಲಿದ್ದಾಗ ಯೋಗಿಹಳ್ಳಿ ಗ್ರಾಮದ ರಾಜಿ ಎಂಬಾತ ಮಾತನಾಡಬೇಕೆಂದು ಫೋನ್ ಮಾಡಿ ಹೊರಗೆ ಕರೆಸಿಕೊಂಡಿದ್ದಾನೆ. ಬಳಿಕ ಬಾರ್ ಪಕ್ಕದ ಫುಟ್ಪಾತ್ ಮೇಲೆ ಮಾತನಾಡುತ್ತಿದ್ದ ವೇಳೆ, ಏಕಾಏಕಿ ಇಪ್ಪತ್ತಕ್ಕೂ ಹೆಚ್ಚು ಪುಡಿರೌಡಿಗಳಿದ್ದ ಗ್ಯಾಂಗ್ ದಿಢೀರ್ ದಾಳಿ ನಡೆಸಿದೆ ಎನ್ನಲಾಗಿದೆ.
ದಾಳಿಯಲ್ಲಿ ಗಂಭೀರವಾಗಿ ಗಾಯಗೊಂಡ ಜೆಸಿಬಿ ಮಂಜನನ್ನು ತಕ್ಷಣವೇ ಹಾಸನದ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಈ ಸಂಬಂಧ ರಾಜಿ ಮತ್ತು ಅಶೋಕ ಎಂಬುವವರ ವಿರುದ್ಧ ಆರೋಪ ಕೇಳಿಬಂದಿದ್ದು, ಘಟನೆ ನಡೆದ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಘಟನೆ ಹಾಸನ ಬಡಾವಣೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.
ನಗರದಲ್ಲಿ ನಡೆದ ಈ ಘಟನೆ ಭಾರೀ ಆತಂಕಕ್ಕೆ ಕಾರಣವಾಗಿದ್ದು, ಹೆಚ್ಚಿನ ತನಿಖೆ ಮುಂದುವರಿದಿದೆ.
