ಟಿ.ನರಸೀಪುರ : ಪಟ್ಟಣದ ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಸ್ವಾಮಿಯವರು ಮಾತನಾಡಿ ಸ್ವತಂತ್ರ ಭಾರತದಲ್ಲೂ ಜೀವಂತವಾಗಿರುವ ಬಹಿಸ್ಕಾರ ಪದ್ಧತಿ ತಮ್ಮ ಕುಟುಂಬದ ಬದುಕನ್ನೇ ಕಂಗೆಡಿಸಿದ್ದು, ಮಾನವೀಯ ಮೌಲ್ಯಗಳಿಗೆ ವಿರುದ್ಧವಾದ ಈ ಅಕ್ರಮದ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದರು.
ತಮ್ಮ ತಂದೆಯ ಆಸ್ತಿ ಹಂಚಿಕೆ ವಿಚಾರವಾಗಿ ಅಣ್ಣ–ತಮ್ಮಂದಿರ ನಡುವೆ ಉಂಟಾದ ಜಗಳದ ಹಿನ್ನೆಲೆಯಲ್ಲಿ ಗ್ರಾಮ ಯಜಮಾನರಿಗೆ ವಿಷಯ ತಿಳಿಸಿದರೂ ನ್ಯಾಯ ದೊರಕಲಿಲ್ಲ. ನಂತರ ಕುಟುಂಬದೊಳಗೇ ಸಮಸ್ಯೆಯನ್ನು ಬಗೆಹರಿಸಿಕೊಂಡ ಹಿನ್ನೆಲೆಯಲ್ಲಿ ಕುಲಕ್ಕೆ ನ್ಯಾಯ ಕೂಟ್ಟು ನೀವೆ ತೀರ್ಮಾನ ಮಾಡಿಕೊಂಡಿದ್ದೀರಿ ನಿಮಗೆ ಆ ಅಧಿಕಾರ ಇಲ್ಲ ಅಂತ ನನ್ನ ಮೇಲಷ್ಟೇ ಏಕಪಕ್ಷೀಯವಾಗಿ ದಂಡ ವಿಧಿಸಿ ಸಾಮಾಜಿಕ ಬಹಿಸ್ಕಾರ ಹೇರಲಾಗಿದೆ ಎಂದು ದೂರಿದರು.
ತಮ್ಮ ತಂದೆ, ತಾತ ಹಾಗೂ ಮುತ್ತಾತರು ಗ್ರಾಮ ದೇವತೆ ಮಾರಮ್ಮ ದೇವಸ್ಥಾನದಲ್ಲಿ ಪೂಜೆ ಮಾಡಿಕೊಂಡು ಬಂದಿದ್ದು, ತಂದೆಯ ನಿಧನದ ಬಳಿಕ ಸಂಪ್ರದಾಯದಂತೆ ತಾವು ಪೂಜೆ ಕಾರ್ಯ ನಿರ್ವಹಿಸಿಕೊಂಡು ಬಂದಿದ್ದೇನೆ. ಆದರೆ ಇದನ್ನೇ ನೆಪವನ್ನಾಗಿ ಮಾಡಿಕೊಂಡು ಗ್ರಾಮದಲ್ಲಿ ಪಂಚಾಯಿತಿ ನಡೆಸಿ, ಪೂಜೆ ಮಾಡಬಾರದು, ಯಾವುದೇ ಸಾಮಾಜಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಬಾರದು, ಅಂಗಡಿಗಳಿಗೆ ಹೋಗಬಾರದು, ಜಮೀನಿನ ಕೆಲಸಕ್ಕೂ ಹೋಗಬಾರದು ಎಂದು ನಿರ್ಬಂಧ ಹೇರಲಾಗಿದೆ. ಜೊತೆಗೆ 1 ಲಕ್ಷ ರೂ. ದಂಡ ವಿಧಿಸಿ ಕುಲದಿಂದ ಹೊರಗಿಡಲಾಗಿದೆ ಎಂದು ಆರೋಪಿಸಿದರು.
ಅದೇ ವಿಚಾರದಲ್ಲಿ ಅಣ್ಣ–ತಮ್ಮಂದಿರಿಗೂ ಬಹಿಸ್ಕಾರ ವಿಧಿಸಬೇಕಾಗಿದ್ದರೂ, ತಮ್ಮೊಬ್ಬರ ಮೇಲಷ್ಟೇ ಈ ಅನ್ಯಾಯ ಮಾಡಲಾಗಿದೆ. ಇದರ ಪರಿಣಾಮವಾಗಿ ತಮ್ಮ ಕುಟುಂಬ ತೀವ್ರ ಮಾನಸಿಕ, ಸಾಮಾಜಿಕ ಹಾಗೂ ದೈಹಿಕ ಹಿಂಸೆಯನ್ನು ಅನುಭವಿಸುತ್ತಿದೆ ಎಂದು ತಿಳಿಸಿದರು.

ತಾಯಿ ಅಂತ್ಯಕ್ರಿಯೆಗೆ ಗ್ರಾಮಸ್ಥರಿಗೂ ನಿರ್ಬಂಧ ಹಾಗೂ ಬೆದರಿಕೆ
14-12-2025 ರಂದು ತಮ್ಮ ತಾಯಿ ನಿಧನರಾದ ಸಂದರ್ಭದಲ್ಲಿ, ಗ್ರಾಮದ ಯಜಮಾನರು “ಯಾರೂ ಸಾವಿಗೆ ಹೋಗಬಾರದು. ಹೋದರೆ ದಂಡ ಹಾಗೂ ಬಹಿಸ್ಕಾರ ವಿಧಿಸಲಾಗುತ್ತದೆ” ಎಂದು ಗ್ರಾಮಸ್ಥರನ್ನು ಬೆದರಿಸಿದ್ದಾರೆ ಎಂದು ಆರೋಪಿಸಿ ಈ ಕಾರಣದಿಂದ ಭಯಗೊಂಡ ಹಲವರು ಅಂತ್ಯಕ್ರಿಯೆಗೆ ಬರಲಿಲ್ಲ.ಅಂತ್ಯಕ್ರಿಯೆಗೆ ಬಂದ ಕೆಲವರಿಗೂ ದಂಡ ವಿಧಿಸುವ ಬೆದರಿಕೆ ಹಾಕಲಾಗಿದೆ ಎಂದು ದೂರಿದರು.
ಇದನ್ನು ಓದು: ತುಮಕೂರು: ಜಿ ರಾಮ್ ಜಿ ಅಪಪ್ರಚಾರ: ಕಾಂಗ್ರೆಸ್ ಸರ್ಕಾರದ ವಿರುದ್ಧ ಡಾ.ಅಶ್ವತ್ಥನಾರಾಯಣ್ ಕಿಡಿ
ಮರುಕಳಿಸಿದ ಘಟನೆ
ಈ ಹಿಂದೆ 2021–22ರಲ್ಲಿಯೂ ಇದೇ ರೀತಿಯ ಘಟನೆ ನಡೆದಿದ್ದು, ಬನ್ನೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಆಗ ಪೊಲೀಸರು ಗ್ರಾಮದ ಯಜಮಾನರು ಹಾಗೂ ತಮ್ಮನ್ನು ಠಾಣೆಗೆ ಕರೆಸಿ ಬುದ್ಧಿವಾದ ಹೇಳಿ ಕಳುಹಿಸಿದ್ದರು. ಆದರೆ ಇದೀಗ ಮತ್ತೆ ಅದೇ ರೀತಿಯ ಅನ್ಯಾಯ ಮರುಕಳಿಸಿರುವುದು ನೋವಿನ ಸಂಗತಿಯಾಗಿದೆ ಎಂದರು.
ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಲು ಆಗ್ರಹ
“ಬಹಿಸ್ಕಾರ ಹಾಕಲು ಇವರಿಗೆ ಅಧಿಕಾರ ನೀಡಿದವರು ಯಾರು? ಸ್ವತಂತ್ರ ಭಾರತದಲ್ಲಿ ಇಂತಹ ಪದ್ಧತಿಗೆ ಜಾಗ ಇದೆಯೇ?” ಎಂದು ಪ್ರಶ್ನಿಸಿದ ಸ್ವಾಮಿ, ಈ ಅಕ್ರಮ ನಡೆಸುತ್ತಿರುವ ಗ್ರಾಮದ ಯಜಮಾನರ ವಿರುದ್ಧ ಕಟ್ಟುನಿಟ್ಟಿನ ಕಾನೂನು ಕ್ರಮ ಕೈಗೊಳ್ಳಬೇಕೆಂದು ಪೊಲೀಸ್ ಇಲಾಖೆ ಹಾಗೂ ಜಿಲ್ಲಾಡಳಿತವನ್ನು ಒತ್ತಾಯಿಸಿದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹತ್ತಾರು ಜೀವಂತ ಸಾಕ್ಷಿಗಳಿವೆ ಎಂದು ತಿಳಿಸಿದರು.
ಆಡಳಿತ ಯಂತ್ರದಿಂದ ನ್ಯಾಯ ದೊರೆತಿಲ್ಲ
ಈ ಕುರಿತು ತಹಶೀಲ್ದಾರ್, ಪೊಲೀಸ್ ಇಲಾಖೆ, ಜಿಲ್ಲಾಧಿಕಾರಿ, ಗ್ರಾಮ ಪಂಚಾಯಿತಿ ಹಾಗೂ ಮಾನವ ಹಕ್ಕುಗಳ ಆಯೋಗಕ್ಕೆ ದೂರು ಸಲ್ಲಿಸಿದ್ದರೂ ಸಹ ಇದುವರೆಗೂ ನ್ಯಾಯ ದೊರಕಿಲ್ಲವೆಂದು ಅಳಲನ್ನು ತೋಡಿಕೊಂಡು ಕೂಡಲೇ ತಾಲ್ಲೂಕು ಹಾಗೂ ಜಿಲ್ಲಾಡಳಿತ ಮಧ್ಯ ಪ್ರವೇಶಿಸಿ ನ್ಯಾಯ ದೊರಕಿಸಿಕೊಡಬೇಕೆಂದು ಮನವಿ ಮಾಡಿದರು.
ಪತ್ರಿಕಾಗೋಷ್ಠಿಯಲ್ಲಿ ಯಜಮಾನ ಮಹೇಶ್,ಮಹೇಶ್ ಬಿನ್ ಮಾಯಿಗೌಡ,ರಾಜಣ್ಣ ಬಿನ್ ಚನ್ನೆಗೌಡ, ನಾಗರಾಜು ಬಿನ್ ಗಂಗಾಧರ,ನಾಗರಾಜು ಬಿನ್ ರಾಚೇಗೌಡ,ನಾಗರಾಜು ಬಿನ್ ಬೋರೆಗೌಡ ಉಪಸ್ಥಿತರಿದ್ದರು.
– ಎಂ.ನಾಗೇಂದ್ರ ಕುಮಾರ್
