ತುಮಕೂರು:ಎಸ್ಐಆರ್ ಪ್ರಕ್ರಿಯೆಯಲ್ಲಿ ಸಾರ್ವಜನಿಕರು ತಾವು ಪಡೆದ ಅರ್ಜಿಗಳನ್ನು ಆದಷ್ಟು ಬೇಗ ಭರ್ತಿ ಮಾಡಿ ಸಂಬಂಧಿಸಿದ ಬಿಎಲ್ಒಗಳಿಗೆ ಕೊಟ್ಟು ಸ್ವೀಕೃತಿ ಪತ್ರ ಪಡೆಯುವಂತೆ ಮಾಜಿ ಶಾಸಕ ಡಾ.ಎಸ್.ರಫೀಕ್ಅಹಮದ್ ಮನವಿ ಮಾಡಿದರು.
ಬುಧವಾರ ನಗರದ ವಿವಿಧ ಮತಗಟ್ಟೆಗಳಿಗೆ ಭೇಟಿ ನೀಡಿ ಅಲ್ಲಿ ನಡೆಯುತ್ತಿರುವ ಎಸ್ಐಆರ್ ಪ್ರಕ್ರಿಯೆ ಪರಿಶೀಲಿಸಿದರು, ಎಲ್ಲೆಡೆ ಅಧಿಕಾರಿಗಳು ಚುರುಕಿನಿಂದ ಎಸ್ಐಆರ್ ಪ್ರಕ್ರಿಯೆ ಮಾಡುತ್ತಿದ್ದಾರೆ. ಅರ್ಜಿ ಫಾರಂಗಳನ್ನು ಪಡೆದ ಕೆಲವರು ಭರ್ತಿ ಮಾಡಿಕೊಟ್ಟಿದ್ದಾರೆ.ಇನ್ನೂ ಕೆಲವರು ಕೊಟ್ಟಿಲ್ಲ, ಅರ್ಜಿ ಪಡೆದವರು ತಡ ಮಾಡದೆ ಭರ್ತಿ ಮಾಡಿದ ಅರ್ಜಿಗಳನ್ನು ಕೊಟ್ಟು ಸ್ವೀಕೃತಿ ಪತ್ರ ಪಡೆಯಬೇಕು ಎಂದರು.
ನಗರದಲ್ಲಿ ಈಗಾಗಲೇ ಸ್ವೀಕೃತ ಅರ್ಜಿಗಳ ಶೇಕಡ 54ರಷ್ಟು ಅರ್ಜಿಗಳ ಡಿಜಿಟಲೀಕರಣ ಆಗಿದೆ.ಇನ್ನೂ ಕೆಲವರು ತಮ್ಮ ಅರ್ಜಿ ತೆಗೆದುಕೊಂಡು ಹೋಗದೆ ಹಾಗೇ ಉಳಿದಿವೆ. ಕೆಲವರು ಆನ್ಲೈನ್ನಲ್ಲಿ ನೋಂದಾಯಿಸಿರುತ್ತಾರೆ, ಕೆಲ ಅರ್ಜಿದಾರರು ಮರಣಹೊಂದಿದ್ದಾರೆ.ಕಾರ್ಮಿಕರು ಕೆಲಸಕಾರ್ಯಗಳಿಗೆ ಹೋಗಬೇಕಾದ ಕಾರಣ ಕೆಲವರು ಅರ್ಜಿ ಪಡೆಯಲು ಸಾಧ್ಯವಾಗಿರುವುದಿಲ್ಲ. ಎಸ್ಐಆರ್ ಸಿಬ್ಬಂದಿ ಸ್ಥಳೀಯ ಮುಖಂಡರೊಂದಿಗೆ ಸಂಜೆ ಹೊತ್ತು ಅಂತಹವರ ಮನೆಗಳಿಗೇ ಹೋಗಿ ಅರ್ಜಿ ವಿತರಿಸಿ, ಅವರು ಅರ್ಜಿ ಭರ್ತಿ ಮಾಡಲು ಮಾರ್ಗದರ್ಶನ ಮಾಡಿ, ಸ್ವೀಕಾರ ಮಾಡಬೇಕು.ಯಾವೊಬ್ಬ ಅರ್ಹ ಮತದಾರ ಮತದಾರರ ಪಟ್ಟಿಯಿಂದ ಹೊರಗುಳಿಯದಂತೆ ನೋಡಿಕೊಳ್ಳಬೇಕು ಎಂದು ಡಾ.ಎಸ್.ರಫೀಕ್ಅಹಮದ್ ಹೇಳಿದರು.
– ಚಂದ್ರಚೂಡ ಕೆ.ಬಿ.
