ತುಮಕೂರು: ದೇಶದಲ್ಲಿ ಎಸ್.ಐ.ಆರ್ ಮೂಲಕ ಒಂದು ಪಕ್ಷ ಅಧಿಕಾರ ಹಿಡಿಯಲು ಸಹಾಯ ಮಾಡಿದ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ಕುಮಾರ್ ಅವರನ್ನು ಸೇವೆಯಿಂದ ವಜಾ ಮಾಡಬೇಕು,ಇದುವರೆಗಿನ ಎಸ್.ಐ.ಆರ್.ಪ್ರಕ್ರಿಯೆಯನ್ನು ರದ್ದು ಮಾಡಬೇಕೆಂದು ಆಗ್ರಹಿಸಿ ದೆಹಲಿಯ ಜಂತರ್ ಮಂತರ್ ನಲ್ಲಿ ನಡೆಯುತ್ತಿರುವ ಜೆನ್ಜೀ ಹೋರಾಟ ಬೆಂಬಲಿಸಿ ಅಕ್ಟೋಬರ್ 08 ರಂದು ಜಿಲ್ಲಾಧಿಕಾರಿಗಳ ಕಚೇರಿ ಎದುರು ಇಂಡಿಯಾ ಮೈತ್ರಿಕೂಟದ ವತಿಯಿಂದ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಜಿ.ಚಂದ್ರಶೇಖರ್ಗೌಡ ತಿಳಿಸಿದ್ದಾರೆ.
ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಇಂಡಿಯಾ ಮೈತ್ರಿಕೂಟದ ಪಕ್ಷಗಳ ಮುಖಂಡರೊಂದಿಗೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಮುಖ್ಯ ಚುನಾವಣಾ ಆಯುಕ್ತರ ಕೆಲಸದ ಬಗ್ಗೆ ಸುಪ್ರೀಂಕೋರ್ಟ್ ಸಹ ಅಸಮಾಧಾನ ವ್ಯಕ್ತಪಡಿಸಿರುವುದು,ಜನರಿಗೆ ಎಸ್.ಐ.ಆರ್.ಹಿಂದೆ ಬಿಜೆಪಿ ಮತ್ತು ಆರ್.ಎಸ್.ಎಸ್.ನ ಹಿಡನ್ ಅಜೆಂಡಾ ಇರುವುದು ಬಹಿರಂಗಗೊಂಡಿದೆ. ಇದರ ವಿರುದ್ಧ ಎಲ್ಲಾ ನಾಗರಿಕರು ಈ ಹೋರಾಟದಲ್ಲಿ ಪಾಲ್ಗೊಳ್ಳುವಂತೆ ಮನವಿ ಮಾಡಿದರು.
ಜಿಲ್ಲಾಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಇಕ್ಬಾಲ್ಅಹಮದ್ ಮಾತನಾಡಿ, ಎಸ್.ಐ.ಆರ್.ಮೂಲಕ ದೇಶದಲ್ಲಿ ಅರಾಜಕತೆ ಸೃಷ್ಟಿ ಮಾಡಲಾಗಿದೆ.ಮುಖ್ಯ ಚುನಾವಣಾ ಆಯುಕ್ತರು ಮಾಡಿರುವುದು ದೇಶದ್ರೋಹದ ಕೆಲಸ .ಹಾಗಾಗಿ ಅವರನ್ನು ಈ ಕೂಡಲೇ ವಜಾ ಮಾಡಬೇಕು.ಇಂಡಿಯಾ ಒಕ್ಕೂಟದ ಸಂಪ್ರದಾಯಕ ಮತಗಳಾದ ಅಹಿಂದ ಮತಗಳನ್ನು ಕಿತ್ತು ಹಾಕಿ, ಪ್ರಜಾಪ್ರಭುತ್ವ ವ್ಯವಸ್ಥೆಯನ್ನೇ ಹಾಳುಗೆಡವಲಾಗಿದೆ.ಇದರ ವಿರುದ್ಧ ಅಕ್ಟೋಬರ್ 08 ರ ಪ್ರತಿಭಟನೆಯಲ್ಲಿ ಪ್ರಜಾಪ್ರಭುತ್ವ ಪಾಲಕರು ಪಾಲ್ಗೊಳ್ಳುವಂತೆ ಮನವಿ ಮಾಡಿದರು.
ಅಮ್ ಆದ್ಮಿ ಪಕ್ಷದ ಜಯರಾಮಯ್ಯ ಮಾತನಾಡಿ,ಮುಖ್ಯ ಚುನಾವಣಾ ಆಯುಕ್ತರಿಗಿಂತಲೂ ಮುಂಚಿತವಾಗಿ ಈ ದೇಶದ ಪ್ರಧಾನಿ ಮತ್ತು ಗೃಹ ಸಚಿವರ ರಾಜೀನಾಮೆ ಕೇಳಬೇಕಿದೆ.ಮೂವರು ಚುನಾವಣಾ ಆಯುಕ್ತರಲ್ಲಿ ಇಬ್ಬರು ವಿರೋಧ ವ್ಯಕ್ತಪಡಿಸಿದ್ದರೂ ಸಹ ಅದನ್ನು ಲೆಕ್ಕಿಸದೆ ಬಿಜೆಪಿಗೆ ಅನುಕೂಲವಾಗುವಂತೆ ನಿಯಮಗಳನ್ನು ರೂಪಿಸಿರುವ ಜ್ಞಾನೇಶಕುಮಾರ್ ಅವರನ್ನು ಸೇವೆಯಿಂದ ಅಮಾನತ್ತುಗೊಳಿಸಬೇಕೆಂದು ಆಗ್ರಹಿಸಿದರು.
ಸುದ್ದಿಗೋಷ್ಟಿಯಲ್ಲಿ ಕಾಂಗ್ರೆಸ್ ಪಕ್ಷದ ಮುಖಂಡರಾದ ಜಿಲ್ಲಾ ವಕ್ತಾರರಾದ ಶ್ರೀಮತಿ ಕೆ.ಎಂ.ಸುಜಾತ,ಇರ್ಫಾನ್ಅಹಮದ್, ಭೈಲಸ್ವಾಮಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.
– ಚಂದ್ರಚೂಡ ಕೆ.ಬಿ.
