ತುಮಕೂರು:ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷರಾದ ಶಿವಾನಂದ ತಗಡೂರು ಅವರ ನೇತೃತ್ವದಲ್ಲಿ ನಿನ್ನೆ ನಡೆದ ಸಭೆಯಲ್ಲಿ ಕೈಗೊಂಡ ನಿರ್ಣಯಗಳ ಹಿನ್ನೆಲೆಯಲ್ಲಿ, ಇಂದು ತುಮಕೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಕೆ.ವಿ.ಅಶೋಕ್ ಅವರನ್ನು ಸಂಘದ ಪದಾಧಿಕಾರಿಗಳು ಹಾಗೂ ಸದಸ್ಯರು ಭೇಟಿ ಮಾಡಿ ಅವರ ಗಮನಕ್ಕೆ ತರಲಾಯಿತು.
ಈ ಸಂದರ್ಭದಲ್ಲಿ ಪತ್ರಕರ್ತರ ವೃತ್ತಿಗೆ ಸಂಬಂಧಿಸಿದಂತೆ ಎದುರಾಗುತ್ತಿರುವ ಸಮಸ್ಯೆಗಳು ಹಾಗೂ ತುಮಕೂರು ಮಿತ್ರ ಪತ್ರಿಕೆಯ ಸಂಪಾದಕರಾದ ಮಂಜುನಾಥಗೌಡ ಅವರಿಗೆ ಪೊಲೀಸ್ ನೋಟಿಸ್ ನೀಡಿದ ಪ್ರಕರಣದ ಕುರಿತು ಈಗಾಗಲೇ ಕೈಗೊಂಡ ಕ್ರಮಗಳ ಬಗ್ಗೆ ಚರ್ಚಿಸಲಾಯಿತು. ಅಲ್ಲದೆ, ಸಭೆಯಲ್ಲಿ ಕೈಗೊಂಡ ನಿರ್ಣಯಗಳನ್ನು ಪೊಲೀಸ್ ವರಿಷ್ಠಾಧಿಕಾರಿಗಳ ಗಮನಕ್ಕೆ ತಂದು ಇಂತಹ ಘಟನೆಗಳು ಮರುಕಳಿಸದಂತೆ ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಚರ್ಚಿಸಲಾಯಿತು.

ಇದಕ್ಕೆ ಸಂಬಂಧಿಸಿದಂತೆ, ಮುಂದಿನ ದಿನಗಳಲ್ಲಿ ಯಾವುದೇ ಪತ್ರಕರ್ತರಿಗೆ ಇಂತಹ ಸಮಸ್ಯೆಗಳು ಎದುರಾದಲ್ಲಿ ಸಂಘದ ಗಮನಕ್ಕೆ ತರುವಂತೆ ತಿಳಿಸಲಾಯಿತು. ಪತ್ರಕರ್ತರು ಮತ್ತು ಪೊಲೀಸ್ ಇಲಾಖೆಯ ನಡುವೆ ಅನಗತ್ಯ ಗೊಂದಲಗಳು ಉಂಟಾಗದಂತೆ ಪರಸ್ಪರ ಸಮನ್ವಯದೊಂದಿಗೆ ಚರ್ಚಿಸಿ, ಸಮಸ್ಯೆಗಳನ್ನು ಸೌಹಾರ್ದಯುತವಾಗಿ ಬಗೆಹರಿಸಿಕೊಳ್ಳುವ ನಿಟ್ಟಿನಲ್ಲಿ ಸಂಘವು ಪ್ರಾಮಾಣಿಕ ಪ್ರಯತ್ನ ಮಾಡಲಿದೆ ಎಂದು ಸಂಘದ ಅಧ್ಯಕ್ಷರಾದ ಎಲ್.ಯೋಗೇಶ್ ರವರು ತಿಳಿಸಿದ್ದಾರೆ.
ಪ್ರಧಾನ ಕಾರ್ಯದರ್ಶಿ ಟಿ.ಇ.ರಘುರಾಮ್, ಉಪಾಧ್ಯಕ್ಷ ಜಯಣ್ಣ ಜಯನುಡಿ, ರಾಜ್ಯ ಸಮಿತಿ ಸದಸ್ಯ ಚಿ.ನಿ.ಪುರುಷೋತ್ತಮ್, ಸಂಪಾದಕರ ಸಂಘದ ಜಿಲ್ಲಾಧ್ಯಕ್ಷ ಕರುಣಾಕರ್.ಜಿ., ಪ್ರಧಾನ ಕಾರ್ಯದರ್ಶಿ ಮಂಜುನಾಥ್ ಗೌಡ, ರಾಜ್ಯ ಪ್ರಧಾನ ಕಾರ್ಯದರ್ಶಿ ತೋಸಿ ಕೃಷ್ಣಮೂರ್ತಿ, ಎಸ್ಸಿ.ಎಸ್ಟಿ.ಸಂಪಾದಕರ ಸಂಘದ ಅಧ್ಯಕ್ಷ ಪರಮೇಶ್.ಎಚ್.ಎಸ್. ಸೇರಿದಂತೆ ಸಂಘದ ಪದಾಧಿಕಾರಿಗಳು ಸದಸ್ಯರು ಉಪಸ್ಥಿತರಿದ್ದರು.
– ಕೆ.ಬಿ.ಚಂದ್ರಚೂಡ
