ತುಮಕೂರು: ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರ 79ನೇ ಜನ್ಮದಿನದ ಅಂಗವಾಗಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ತುಮಕೂರು ಜಿಲ್ಲಾ ಕಚೇರಿ ಹಾಗೂ ತುಮಕೂರು ಗ್ರಾಮಾಂತರ ಯೋಜನಾ ಕಚೇರಿಯ ವತಿಯಿಂದ ವಿಶೇಷ ಪೂಜೆ ಹಾಗೂ ಸೇವಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಯಿತು.
ಜನ್ಮದಿನದ ಪ್ರಯುಕ್ತ ಯೋಜನೆಯ ಸಿಬ್ಬಂದಿ ಗೂಳೂರು ಶ್ರೀ ಗಣಪತಿ ದೇವಸ್ಥಾನದಲ್ಲಿ ಪೂಜ್ಯರ ಆಯುರಾರೋಗ್ಯಕ್ಕಾಗಿ ವಿಶೇಷ ಪೂಜೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಜಿಲ್ಲಾ ನಿರ್ದೇಶಕ ಸತೀಶ್ ಸುವರ್ಣ ಅವರು ಮಾಶಾಸನ ಫಲಾನುಭವಿಗಳಿಗೆ ಹಣ್ಣು-ಹಂಪಲು ವಿತರಿಸಿದರು.
ವೃದ್ಧಾಶ್ರಮ ಮತ್ತು ಅನಾಥಾಶ್ರಮಕ್ಕೆ ಆಹಾರ ಧಾನ್ಯ ವಿತರಣೆ
ವಿದ್ಯಾನಗರ ವಲಯದ ದೇವರಾಯಪಟ್ಟಣ ಗ್ರಾಮದ ಶ್ರೀ ಶಾರದಾಂಬ ವೃದ್ಧಾಶ್ರಮ ಮತ್ತು ಅನಾಥಾಶ್ರಮಕ್ಕೆ ಆಹಾರ ಧಾನ್ಯಗಳನ್ನು ವಿತರಿಸಿ, ಸೇವಾ ಕಾರ್ಯ ನೆರವೇರಿಸಲಾಯಿತು. ಜಿಲ್ಲಾ ಜನಜಾಗೃತಿ ವೇದಿಕೆಯ ಜಿಲ್ಲಾಧ್ಯಕ್ಷ ಆರ್. ಕಾಮರಾಜ್ ಅವರು ಆಹಾರ ಧಾನ್ಯಗಳನ್ನು ಹಸ್ತಾಂತರಿಸಿ ಮಾತನಾಡಿ, “ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಕಳೆದ 58 ವರ್ಷಗಳಿಂದ ನಿರಂತರವಾಗಿ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಅವರಿಗೆ ಜನ್ಮದಿನದ ಶುಭಾಶಯಗಳನ್ನು ಕೋರುತ್ತಾ, ಎಲ್ಲರ ಶುಭ ಹಾರೈಕೆಗಳು ಸದಾ ಅವರ ಮೇಲಿರಲಿ” ಎಂದು ಆಶಿಸಿದರು.
ಆಶ್ರಮದ ವತಿಯಿಂದ ಶುಭ ಹಾರೈಕೆ
ಶ್ರೀ ಶಾರದಾಂಬ ಟ್ರಸ್ಟ್ನ ಅಧ್ಯಕ್ಷೆ ಯಶೋಧ ಅವರು ಮಾತನಾಡಿ, “ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ನಮ್ಮ ಸಂಸ್ಥೆಗೆ ನಿರಂತರ ಸಹಕಾರ ದೊರೆಯುತ್ತಿರುವುದು ನಮ್ಮೆಲ್ಲರ ಭಾಗ್ಯ. ಲಕ್ಷಾಂತರ ಜನರ ಬಾಳಿಗೆ ಬೆಳಕಾಗಿರುವ ಪೂಜ್ಯರು ನೂರಾರು ಕಾಲ ಸುಖವಾಗಿ ಬಾಳಿ, ಅವರ ಸೇವೆ ಇನ್ನಷ್ಟು ಜನರಿಗೆ ತಲುಪಲಿ ಎಂದು ಆಶ್ರಮದ ಎಲ್ಲರ ಪರವಾಗಿ ಜನ್ಮದಿನದ ಶುಭಾಶಯಗಳನ್ನು ಕೋರುತ್ತೇನೆ” ಎಂದರು.
ಕಾರ್ಯಕ್ರಮದಲ್ಲಿ ಟ್ರಸ್ಟ್ನ ನಿರ್ದೇಶಕ ದಿನೇಶ್, ಪತ್ರಕರ್ತ ರಂಗನಾಥ ಕೆ. ಹೊನ್ನಮರಡಿ, ಎಂ.ಐ.ಎಸ್. ಯೋಜನಾಧಿಕಾರಿ ಪ್ರಭಾಶೆಟ್ಟಿ, ಯೋಜನಾಧಿಕಾರಿಗಳಾದ ಸಂದೇಶ್ ಪಿ.ಬಿ. ಮತ್ತು ಪ್ರಭಾಕರ್, ಕೃಷಿ ಮೇಲ್ವಿಚಾರಕ ರಾಘವೇಂದ್ರ ಎನ್., ಹಣಕಾಸು ಪ್ರಬಂಧಕ ಅರುಣ್, ಆಡಳಿತ ಸಹಾಯಕ ಪ್ರಬಂಧಕ ರಮೇಶ್, ತಾಲೂಕು ನೋಡಲ್ ಅಧಿಕಾರಿ ಬಸವ ಪ್ರಸಾದ್ ಸೇರಿದಂತೆ ಯೋಜನಾ ಕಚೇರಿ ಹಾಗೂ ಆಶ್ರಮದ ಸಿಬ್ಬಂದಿ ಉಪಸ್ಥಿತರಿದ್ದರು.
ವರದಿ : ಕೆ ಬಿ ಚಂದ್ರಚೂಡ್
