ತುಮಕೂರು: ಸಾಮಾಜಿಕ ಕಳಕಳಿ ಹೊಂದಿರುದ ದಿನಪತ್ರಿಕೆಗಳನ್ನು ರೂಪಿಸುವ ಹೊಣೆ ಹೊತ್ತಿರುವ ಸಂಪಾದಕರು ದಿನನಿತ್ಯ ಬಿಡುವಿಲ್ಲದೆ ಕೆಲಸ ಮಾಡಬೇಕಾಗುತ್ತದೆ. ಈ ಕಾರ್ಯಭಾರದಲ್ಲಿ ಅವರು ತಮ್ಮ ಖಾಸಗಿ ಬದುಕನ್ನೂ ಕಳೆದುಕೊಳ್ಳುವಷ್ಟು ಒತ್ತಡ ಬರಬಹುದು. ಎಷ್ಟೇ ಕಾರ್ಯ ಒತ್ತಡದ ನಡುವೆಯೂ ತಮ್ಮ ಕುಟುಂಬಕ್ಕಾಗಿ ಸಮಯ ಮೀಸಲಿಟ್ಟು ಅವರೊಂದಿಗೆ ಬೆರೆತು ಕುಟುಂಬದ ಕಲ್ಯಾಣಕ್ಕೆ ಪ್ರಯತ್ನಿಸಬೇಕು ಎಂದು ಪ್ರದೇಶ ಕಾಂಗ್ರೆಸ್ ಸಮಿತಿ ಉಪಾಧ್ಯಕ್ಷ ಮುರಳಿಧರ ಹಾಲಪ್ಪ ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಭಾನುವಾರ ಕರ್ನಾಟಕ ಕಾರ್ಯನಿರತ ದಿನಪತ್ರಿಕೆಗಳ ಸಂಪಾದಕರ ಸಂಘದಿಂದ ಹಮ್ಮಿಕೊಂಡಿದ್ದ ರಾಷ್ಟ್ರೀಯ ಪತ್ರಿಕಾ ದಿನಾಚರಣೆ, ದತ್ತಿ ಪ್ರಶಸ್ತಿ ಪ್ರದಾನ ಸಮಾರಂಭ ಹಾಗೂ ರಾಜ್ಯ ಸಮಿತಿ ಕಾರ್ಯಕಾರಿಣಿ ಸಭೆ ಉದ್ಘಾಟಿಸಿ ಮಾತನಾಡಿದ ಅವರು, ತುಮಕೂರು ವಿಶ್ವವಿದ್ಯಾಲಯದಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ತಮ್ಮ ಹಾಲಪ್ಪ ಪ್ರತಿಷ್ಠಾನದಡಿ ಚಿನ್ನದ ಪದಕ ನೀಡಲಾಗುತ್ತಿದೆ. ಇದೇ ರೀತಿ ಪತ್ರಕರ್ತರ ಕಲ್ಯಾಣ ಹಾಗೂ ಪ್ರೋತ್ಸಾಹಕ್ಕಾಗಿ ಸಾಧ್ಯವಾದಷ್ಟು ದತ್ತಿ ಹಣ ಮೀಸಲಿಡುವ ಮೂಲಕ ಅವರ ವೃತ್ತಿ ಬದುಕಿಗೆ ಶಕ್ತಿ ತುಂಬುವ ಪ್ರಯತ್ನ ಮಾಡುವುದಾಗಿ ಹೇಳಿದರು.
ಇದನ್ನು ಓದು: ತುಮಕೂರು: ಧರ್ಮಸ್ಥಳ ಯೋಜನೆಯ ಶುದ್ದಗಂಗಾ ಘಟಕ ತುಮಕೂರಿಗೆ ವರದಾನವಾಗಿದೆ ಶಾಸಕ ಜಿ.ಬಿ.ಜ್ಯೋತಿಗಣೇಶ್
ಸಂಘದ ರಾಜ್ಯ ಉಪಾಧ್ಯಕ್ಷ ರಾಮಕೃಷ್ಣ ಮಾಮರ ಮಾತನಾಡಿ, ಸಣ್ಣ ಪತ್ರಿಕೆಗಳು ಗ್ರಾಮೀಣ ಪ್ರದೇಶದ ಮೂಲೆಮೂಲೆಗಳಲ್ಲಿನ ಸಮಸ್ಯೆಗಳನ್ನು ಎತ್ತಿ ಹಿಡಿದು ಸಮಾಜದ ಮುಂದೆ ತರುತ್ತವೆ. ಆರ್ಥಿಕ ಸಂಕಷ್ಟ ಎದುರಿಸುತ್ತಿರುವ ಸಣ್ಣ ಪತ್ರಿಕೆಗಳನ್ನು ನಡೆಸುವುದು ಕಷ್ಟವಾಗಿದೆ. ಇಂತಹ ಪತ್ರಿಕೆಗಳಿಗೆ ಸರ್ಕಾರ ಹೆಚ್ಚಿನ ಪ್ರಮಾಣದ ಜಾಹೀರಾತು ನೀಡಿ ಸಣ್ಣ ಪತ್ರಿಕೆಗಳಿಗೆ ಆರ್ಥಿಕ ಶಕ್ತಿ ತುಂಬಬೇಕು ಎಂದು ಒತ್ತಾಯಿಸಿದರು.
ಸಂಘದ ಜಿಲ್ಲಾಧ್ಯಕ್ಷ ಜಿ.ಕರುಣಾಕರ್ ಮಾತನಾಡಿ, ವಿಜಯಮುಗಿಲು ಪತ್ರಿಕೆ ಸಹ ಸಂಪಾದಕರಾದ ಹೆಚ್.ಹನುಮಂತಯ್ಯ ಅವರು ಸಂಘದಲ್ಲಿ ದತ್ತಿಯಾಗಿ ಇಟ್ಟಿರುವ ಪ್ರಶಸ್ತಿ ಹಾಗೂ ನಗದು ಪ್ರೋತ್ಸಾಹ ನೀಡಿದೆ ಎಂದ ಅವರು, ಜೊತೆಗೆ ಸಣ್ಣ ಪತ್ರಿಕೆಗಳ ಸಂಪಾದಕರು ಸಂಘಟಿತರಾಗಿ ಸಮಾಜದ ಅಂಕುಡೊಂಕು ತಿದ್ದಲು, ಎದುರಾಗುವ ಸವಾಲುಗಳನ್ನು ಬಗೆಹರಿಸಿಕೊಳ್ಳಲು ಸನ್ನದ್ಧರಾಗಬೇಕು. ಪತ್ರಕರ್ತರಿಗೆ ಮೂಲಭೂತ ಸೌಲಭ್ಯ, ಹಕ್ಕು ದೊರಕಿಸಲು ಪ್ರಯತ್ನಿಸಬೇಕು ಎಂದರು.
ಪ್ರಜಾಪರ್ವ ಪತ್ರಿಕೆ ಸಂಪಾದಕ ಕೊಪ್ಪಳದ ಎಂ.ಜಿ ಶ್ರೀನಿವಾಸ್ ಅವರಿಗೆ ಈ ವೇಳೆ ‘ಸಂಪಾದಕ ರತ್ನ’ ದತ್ತಿ ಪ್ರಶಸ್ತಿ ನೀಡಿ ಗೌರವಿಸಲಾಯಿತು. ನಂತರ ಅವರು ಮಾತನಾಡಿ, ಸಣ್ಣ ಪತ್ರಿಕೆಗಳು ಕೀಳರಮೆ ಬಿಟ್ಟು ಸಾಮಾಜಿಕ ಕಾಳಜಿಯ ಸುದ್ದಿಗಳನ್ನು ಪ್ರಕಟಿಸಿ ಸಮಾಜ ಪರಿವರ್ತನೆಗೆ ನೆರವಾಗಲಿ ಎಂದರು.
ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಯೋಗೀಶ್, ಪ್ರಧಾನ ಕಾರ್ಯದರ್ಶಿ ಟಿ.ಇ.ರಘುರಾಮ್, ನಿರ್ದೇಶಕ ಜಯಣ್ಣ ಬೆಳಗೆರೆ ಮಾತನಾಡಿದರು.
ಪಿ.ಎಸ್.ಮಲ್ಲಿಕಾರ್ಜುನ ಸ್ವಾಮಿ, ಟಿ.ಎಸ್.ಕೃಷ್ಣಮೂರ್ತಿ, ಸಿ.ರಂಗನಾಥ್, ಮಂಜುನಾಥ ಗೌಡ, ಮಹೇಶ್ ಕುಮಾರ್ ಸಿ.ಎನ್., ಕಂಬಣ್ಣ, ಬಸವರಾಜು, ಅಭಿಷೇಕ್, ಅಂಜಲಿ ಸೇರಿದಂತೆ ಜಿಲ್ಲೆ ಹಾಗೂ ರಾಜ್ಯದ ವಿವಿಧ ಜಿಲ್ಲೆಗಳ ಹಲವಾರು ಪತ್ರಿಕಾ ಸಂಪಾದಕರು ಹಾಗೂ ವರದಿಗಾರರು ಹೆಚ್.ಜಿ.ಚಂದ್ರಶೇಖರ್ ಉಪಸ್ಥಿತರಿದ್ದರು.
– ಕೆ.ಬಿ.ಚಂದ್ರಚೂಡ
