ತುಮಕೂರು: ಸೊಳ್ಳೆಯಿಂದ ಅನೇಕ ಕಾಯಿಲೆಗಳು ಹರಡುತ್ತವೆ. ಸೊಳ್ಳೆ ನಿರ್ಮೂನೆ ಮೂಲಕ ನಮ್ಮ ಸುತ್ತಲಿನ ಪರಿಸರ ಸ್ವಚ್ಛವಾಗಿಟ್ಟುಕೊಂಡು ಜನರ ಆರೋಗ್ಯ ಕಾಪಾಡಲು ಸಾಧ್ಯ. ಸೊಳ್ಳೆಗಳ ಸಂತಾನೋತ್ಪತ್ತಿ ಆಗದಂತೆ ಕ್ರಮ ವಹಿಸಬೇಕಾದ ಅಗತ್ಯವಿದೆ ಎಂದು ಕೇಂದ್ರ ಜಲಶಕ್ತಿ ಮತ್ತು ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಹೇಳಿದರು.
ಸಿದ್ಧಗಂಗಾ ಮಠದಲ್ಲಿ ಶನಿವಾರ ನಡೆದ ಸಮಾರಂಭದಲ್ಲಿ ಸಿದ್ಧಿ ಬಯೋ ಸಂಸ್ಥೆಯ ಸಾವಯವ ದ್ರಾವಣ ವೆಕ್ಟೋ ಶೀಲ್ಡ್ ಕೀಟನಾಶಕವನ್ನು ಲೋಕಾರ್ಪಣೆ ಮಾಡಿ ಮಾತನಾಡಿದ ಅವರು, ನ್ಯಾಷನಲ್ ರೀಸರ್ಚ್ ಡೆವಲಪ್ಮೆಂಟ್ ಕಾರ್ಪೊರೇಷನ್ನಿಂದ ಪ್ರಮಾಣಿತವಾಗಿರುವ ಈ ಔಷಧಿ ಸೊಳ್ಳೆ ಸಂತತಿ ನಿರ್ಮೂಲನೆಗೆ ಇದು ಪರಿಣಾಮಕಾರಿ. ಇದರ ಸಿಂಪರಣೆಯಿಂದ ಸೊಳ್ಳೆಗಳನ್ನು ಲಾರ್ವಾ ಹಂತದಲ್ಲೇ ನಾಶ ಮಾಡಬಹುದು ಎಂದು ಹೇಳಿದರು.
ನಗರಪಾಲಿಕೆ, ಪುರಸಭೆ, ಗ್ರಾಮ ಪಂಚಾಯ್ತಿಗಳಿಗೆ ವೆಕ್ಟೊ ಶೀಲ್ಡ್ ದ್ರಾವಣವನ್ನು ಖರೀದಿಸಲು ಶಿಫಾರಸ್ಸು ಮಾಡುವಂತೆ ಕಾರ್ಯಕ್ರಮದಲ್ಲಿ ಹಾಜರಿದ್ದ ಜಿಲ್ಲಾ ಪಂಚಾಯ್ತಿ ಸಿಇಓ ಅಧಿಕಾರದಲ್ಲಿರುವ ಜಿಲ್ಲಾಧಿಕಾರಿ ಶುಭಾ ಕಲ್ಯಾಣ್ ಅವರಿಗೆ ಸಚಿವ ಸೋಮಣ್ಣ ಸಲಹೆ ಮಾಡಿದರು.
ಪ್ರಧಾನಿ ನರೇಂದ್ರ ಮೋದಿಯವರು ಆಯುಷ್ಮಾನ್ಭವ ಕಾರ್ಯಕ್ರಮದೊಂದಿಗೆ ಜನಸಾಮಾನ್ಯರ ಆರೋಗ್ಯಕ್ಕೆ ಒತ್ತು ನೀಡಿದ್ದಾರೆ. ಹಾಗೇ, ಮೇಕ್ ಇನ್ ಇಂಡಿಯಾದಲ್ಲಿ ಸ್ಥಳೀಯ ಉದ್ದಿಮೆ, ಉತ್ಪನ್ನಗಳನ್ನು ಪ್ರೋತ್ಸಾಹಿಸಿ ನಮ್ಮ ಉತ್ಪನ್ನಗಳನ್ನು ಜಾಗತಿಕ ಮಾರುಕಟ್ಟೆಗೆ ವಿಸ್ತರಿಸಲು, ಇಲ್ಲಿನ ಉದ್ದಿಮೆದಾರರ ಬುದ್ಧಿವಂತಿಕೆಯನ್ನು ಸಾರುವ ಪ್ರಯತ್ನ ಮಾಡಿದ್ದಾರೆ. ಎಲ್ಲರಿಗೂ ಆರೋಗ್ಯ ಮುಖ್ಯ. ನಮ್ಮ ಪರಿಸರವನ್ನು ಸ್ವÀಚ್ಛವಾಗಿಟ್ಟುಕೊಳ್ಳುವುದು ಆರೋಗ್ಯದ ಲಕ್ಷಣ. ಹಿಂದೆ ಸೊಳ್ಳೆ ನಾಶಕ್ಕಾಗಿ ಡಿಡಿಟಿ ಪೌಡರ್ ಸಿಂಪರಣೆ ಮಾಡುತ್ತಿದ್ದರು, ಈಗ ತಂತ್ರಜ್ಞಾನ ಬದಲಾಗಿ ಪರಿಣಾಮಕಾರಿ ದ್ರಾವಣವಾಗಿ ವೆಕ್ಟೋ ಶೀಲ್ಡ್ ಸೊಳ್ಳೆಗಳ ನಾಶಕ್ಕೆ ನೆರವಾಗಲಿದೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು.
ಸಿದ್ಧಗಂಗಾ ಮಠದ ಸಿದ್ಧಲಿಂಗ ಸ್ವಾಮೀಜಿ ಮಾತನಾಡಿ, ಸೊಳ್ಳೆಗಳಿಂದ ವಿವಿಧ ಕಾಯಿಲೆಗಳು ಹರಡುತ್ತವೆ. ಸೊಳ್ಳೆ ಉತ್ಪತ್ತಿ ಆಗದಂತೆ ತಡೆಯಬೇಕು. ಸ್ವಚ್ಛತೆಯಿಂದ ಸಾರ್ವಜನಿಕ ಆರೋಗ್ಯ ಕಾಪಾಡಲು ಸೊಳ್ಳೆಗಳ ನಿರ್ಮೂಲನೆ ಆಗಬೇಕು. ವೆಕ್ಟೋ ಶೀಲ್ಡ್ ದ್ರಾವಣವನ್ನು ಕೊಳಚೆ ಪ್ರದೇಶ, ಚರಂಡಿಗಳಿಗೆ ಸಿಂಪರಣೆ ಮಾಡಿ ಸೊಳ್ಳೆ ನಾಶ ಮಾಡಿ ಆರೋಗ್ಯಕರ ಪರಿಸರ ನಿರ್ಮಾಣ ಮಾಡಬಹುದು ಎಂದು ಹೇಳಿದರು.
ಶಾಸಕರಾದ ಜಿ.ಬಿ.ಜ್ಯೋತಿಗಣೇಶ್, ಜಿಲ್ಲಾಧಿಕಾರಿ ಶುಭಕಲ್ಯಾಣ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ವಿ.ಅಶೋಕ್, ಸಿದ್ಧಿ ಬಯೋ ವ್ಯವಸ್ಥಾಪಕ ನಿರ್ದೇಶಕ ಎನ್.ಜೆ.ರುದ್ರಪ್ರಕಾಶ್, ಶಾರದಾ ರುದ್ರಪ್ರಕಾಶ್, ದರ್ಶನ್, ಅಕ್ಷಯ್ ಮೊದಲಾದವರು ಭಾಗವಹಿಸಿದ್ದರು.
ವರದಿ : ಕೆ ಬಿ ಚಂದ್ರಚೂಡ್

[…] […]