ತುಮಕೂರು: ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಸಿಇಟಿ ಪರೀಕ್ಷೆ ವಿದ್ಯಾರ್ಥಿಗಳ ಭವಿಷ್ಯ ರೂಪಿಸುವ ಮಹತ್ವದ ಮೆಟ್ಟಿಲಾಗಿದೆ. ಕೇವಲ ಅಂಕಗಳಿಗಲ್ಲ, ಸರಿಯಾದ ಗುರಿ, ಸಮಯಪಾಲನೆ, ಶಿಸ್ತು ಮತ್ತು ಆತ್ಮವಿಶ್ವಾಸಕ್ಕೂ ಇದು ಪರೀಕ್ಷೆಯಾಗಿದೆ. ಪರಿಶ್ರಮ ಮತ್ತು ನಿರಂತರ ಅಭ್ಯಾಸ ಇದ್ದರೆ ಯಶಸ್ಸು ಖಂಡಿತ ಸಿಗುತ್ತದೆಎಂದುವಿದ್ಯಾವಾಹಿನಿಸಮೂಹಶಿಕ್ಷಣಸAಸ್ಥೆಗಳಕಾರ್ಯದರ್ಶಿ ಎನ್. ಬಿ. ಪ್ರದೀಪ್ ಕುಮಾರ್ ಹೇಳಿದರು.
ಅವರು ವಿದ್ಯಾನಿಧಿ ಕಾಲೇಜಿನಲ್ಲಿ ಆಯೋಜಿಸಲಾಗಿದ್ದ ಕೆ-ಸಿಇಟಿ, ಕಾಮೆಡ್-ಕೆ ಓರಿಯೆಂಟೇಷನ್ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡುತ್ತಿದ್ದರು.
ಕಾಲೇಜು ಮತ್ತು ಕೋರ್ಸಿನ ಆಯ್ಕೆಗೆ ವಿದ್ಯಾರ್ಥಿಗಳಿಗೆ ಸರಿಯಾದ ಮಾರ್ಗದರ್ಶನ, ಪ್ರೇರಣೆ ಹಾಗೂ ದಿಕ್ಸೂಚಿಯ ಅಗತ್ಯವಿರುತ್ತದೆ. ಮಕ್ಕಳು ಸ್ಪಷ್ಟ ನಿಲುವಿನಿಂದ ಸೂಕ್ತ ವಿಷಯಗಳನ್ನು ಆಯ್ಕೆ ಮಾಡಿದರೆ ಭವಿಷ್ಯ ದೃಢವಾಗುತ್ತದೆ. ವಿದ್ಯಾರ್ಥಿಗಳು ತಮ್ಮ ಕನಸುಗಳನ್ನು ಸಾಕಾರಗೊಳಿಸಿ, ಉತ್ತಮ ಭವಿಷ್ಯ ನಿರ್ಮಿಸಲಿ ಎಂದು ಅವರು ಹಾರೈಸಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಪ್ರಜಾವಾಣಿ ಪತ್ರಿಕೆಯ ಕಾರ್ಯನಿರ್ವಾಹಕ ಸಂಪಾದಕ ರವೀಂದ್ರಭಟ್ಟ ಐನಕೈ ಇಂದಿನ ಶಿಕ್ಷಣ ಕ್ಷೇತ್ರದಲ್ಲಿ ವಿದ್ಯಾರ್ಥಿಗಳಿಗೆ ಸಿಇಟಿ ಕುರಿತು ಸರಿಯಾದ ಮಾಹಿತಿ ಮತ್ತು ಮಾರ್ಗದರ್ಶನ ನೀಡುವಲ್ಲಿ ಪತ್ರಿಕೆಗಳ ಪಾತ್ರ ಮಹತ್ವದ್ದಾಗಿದೆ. ಸಿಇಟಿ ಪರೀಕ್ಷೆಯ ವೇಳಾಪಟ್ಟಿ, ಪಠ್ಯಕ್ರಮ, ತಜ್ಞರಸಲಹೆಗಳು, ಮಾದರಿ ಪ್ರಶ್ನೆಪತ್ರಿಕೆಗಳು, ಯಶಸ್ವಿ ವಿದ್ಯಾರ್ಥಿಗಳ ಅನುಭವಗಳು ಮತ್ತು ವೃತ್ತಿ ಆಯ್ಕೆಗಳ ಬಗ್ಗೆ ಪತ್ರಿಕೆಗಳು ನಿರಂತರವಾಗಿ ಮಾಹಿತಿ ನೀಡುತ್ತವೆ. ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೂ ಇವು ಬಹಳ ಉಪಯುಕ್ತವಾಗಿವೆ. ಸ್ಪರ್ಧಾತ್ಮಕ ಮನೋಭಾವ ಬೆಳೆಸುವುದರ ಜೊತೆಗೆ ಆತ್ಮವಿಶ್ವಾಸ ಹೆಚ್ಚಿಸಲು ಪತ್ರಿಕೆಗಳು ಸಹಕಾರಿಯಾಗುತ್ತವೆ. ಸರಿಯಾದ ಸಮಯದಲ್ಲಿ ಸರಿಯಾದ ಮಾಹಿತಿಯನ್ನು ತಲುಪಿಸುವ ಮೂಲಕ ವಿದ್ಯಾರ್ಥಿಗಳ ಭವಿಷ್ಯ ರೂಪಿಸುವಲ್ಲಿ ಪತ್ರಿಕೆಗಳು ಮಹತ್ವದ ಸೇತುವೆಯಾಗಿ ಕಾರ್ಯ ನಿರ್ವಹಿಸುತ್ತವೆ ಎಂದರು.
ಕಾಮೆಡ್-ಕೆ ಕಾರ್ಯನಿರ್ವಾಹಕ ಕಾರ್ಯದರ್ಶಿ ಡಾ. ಎಸ್.ಕುಮಾರ್ ಮತ್ತು ಕೆಸಿಇಟಿ ಮಾಜಿನೋಡಲ್ ಅಧಿಕಾರಿ ಪಿ ಜೆ. ಜಯಶೀಲ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿ ಅವರ ಪ್ರಶ್ನೆಗಳಿಗೆ ಉತ್ತರಗಳನ್ನು ನೀಡಿದರು. ವೈಸಿರಿ ಕಾಲೇಜಿನ ಎಂಬಿಎ ಸಂಯೋಜಕ ಡಾ. ಪ್ರಸನ್ನಕುಮಾರ್ ವಿದ್ಯಾರ್ಥಿಗಳಿಗೆ ಉದ್ಯೋಗಾವಕಾಶಗಳನ್ನು ಒದಗಿಸಬಲ್ಲ ಕೋರ್ಸುಗಳ ಕುರಿತು ಮಾಹಿತಿ ನೀಡಿದರು.
ಪ್ರಾಂಶುಪಾಲರಾದ ಎಸ್.ಆರ್.ಸಿದ್ದೇಶ್ವರಸ್ವಾಮಿ, ವಿಜ್ಞಾನ ವಿಭಾಗದ ಸಂಯೋಜಕರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಿಇಟಿ ಪರೀಕ್ಷೆಯನ್ನು ಬರೆದಿರುವ, ದ್ವಿತೀಯ ಪಿಯುಸಿ ಪೂರೈಸಿರುವ ವಿದ್ಯಾರ್ಥಿಗಳು ಮತ್ತು ಅವರ ಪೋಷಕರು ಕಾರ್ಯಕ್ರಮದ ಪ್ರಯೋಜನವನ್ನು ಪಡೆದುಕೊಂಡರು.
– ಕೆ.ಬಿ.ಚಂದ್ರಚೂಡ
