ತುಮಕೂರು: ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಒಂದೇ ನಾಣ್ಯದ ಎರಡು ಮುಖಗಳಂತೆ ಒಂದಾಗಿ ಕೆಲಸ ಮಾಡಿದರೆ ಮಾತ್ರ ಅಭಿವೃದ್ಧಿ ಸಾಧ್ಯ, ಈ ನಿಟ್ಟಿನಲ್ಲಿ ನಾನೂ ಹಾಗೂ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರು ಒಂದಾಗಿ ಅಭಿವೃದ್ಧಿಕಾರ್ಯ ಮಾಡುತ್ತೇವೆ. ಕೇಂದ್ರ ಸರ್ಕಾರದ ಜೊತೆ ನೀವು ಎಷ್ಟು ದೂರ ಹೋಗುವಿರೊ ಸರ್ಕಾರ ಅಷ್ಟು ದೂರ, ನೀವು ಎಷ್ಟು ಹತ್ತಿರ ಬರುವಿರೋ ಅಷ್ಟು ಹತ್ತಿರ ಕೇಂದ ಸರ್ಕಾರ ಬರುತ್ತದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪಂಚಾಯ್ತಿ ಸಿಇಒಗೆ ಕೇಂದ್ರ ಜಲಶಕ್ತಿ ಹಾಗೂ ರೈಲ್ವೆಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಹೇಳಿದರು.
ಶನಿವಾರ ತುಮಕೂರು ಗ್ರಾಮಾಂತರ ಕ್ಷೇತ್ರದ ಪಂಡಿತನಹಳ್ಳಿ ಹಾಗೂ ಹೆಗ್ಗೆರೆಯಲ್ಲಿ ರೈಲ್ವೆಗೇಟ್ ಭಾಗದಲ್ಲಿ ಮೇಲ್ಸೆತುವೆ ನಿರ್ಮಾಣ ಹಾಗೂ ತಿಮ್ಮರಾಜನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಸಂತನರಸಾಪುರದ ಕೈಗಾರಿಕಾ ಪ್ರದೇಶದಒಂದನೇ ಹಂತದ ಪ್ಲಾಟ್ ನಂ.161 ಇ2ರಲ್ಲಿ ಕೋಟಿರೂ.ವೆಚ್ಚದ 480 ಹಾಸಿಗೆಗಳ ಏಳು ಹಂತಸ್ತಿನ ಉದ್ಯೋಗಿತ ಮಹಿಳೆಯರ ವಸತಿ ನಿಲಯ ನಿರ್ಮಾಣಕಾಮಗಾರಿಗೆ ಭೂಮಿ ಪೂಜೆ ನೆರವೇರಿಸುವ ಕಾರ್ಯಕ್ರಮದಲ್ಲಿ ಮಾತನಾಡಿದ ಸಚಿವ ವಿ.ಸೋಮಣ್ಣ, ನಮ್ಮ ಕೇಂದ್ರ ಸರ್ಕಾರ 490 ಕಡೆ 5 ಲಕ್ಷ ಉದ್ಯೋಗಸ್ಥ ಮಹಿಳೆಯರಿಗೆ ವಸತಿ ನಿಲಯಗಳನ್ನು ನಿರ್ಮಿಸಿದೆ ಎಂದರು.

ತುಮಕೂರು ವಿಶ್ವವಿದ್ಯಾಲಯ ಕ್ಯಾಂಪಸ್ನಲ್ಲಿ ಉದ್ಯೋಗಿ ಹೆಣ್ಣುಮಕ್ಕಳ ವಸತಿ ನಿಲಯ ನಿರ್ಮಾಣಕ್ಕಾಗಿ ಒಂದು ತಿಂಗಳಲ್ಲಿ 40 ಕೋಟಿರೂ.ಬಿಡುಗಡೆ ಮಾಡುವುದಾಗಿ ಹೇಳಿದ ಸಚಿವರು, ಇಂತಹ ಕಾರ್ಯಕ್ರಮಗಳು ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ಮಹಿಳಾ ಸಬಲೀಕರಣದ ಹೊಸ ಸಂದೇಶ ಎಂದರು.
ರೈಲ್ವೆಗೇಟ್ನಿಂದ ಸಾರ್ವಜನಿಕರಿಗೆ ಎಷ್ಟು ತೊಂದರೆ ಆಗುತ್ತಿದೆ ಎಂದು ತಮಗೆ ಗೊತ್ತಿದೆ. ಜಿಲ್ಲೆಯ ಎಲ್ಲಾ ರೈಲ್ವೆ ಗೇಟ್ಗಳನ್ನು ತೆರವುಗೊಳಿಸಿ ಅಲ್ಲಿ ಮೇಲ್ಸೇತುವೆ, ಕೆಳಸೇತುವೆ ನಿರ್ಮಾಣ ಮಾಡಿಜನರಿಗೆ ಅನುಕೂಲ ಮಾಡಲಾಗುವುದು.ಮುಂದಿನ ತಿಂಗಳು ನಾಲ್ಕು ಸೇತುವೆಗಳನ್ನು ಲೋಕಾರ್ಪಣೆ ಮಾಡಲಾಗುವುದು.ರೈಲ್ವೆ ಇಲಾಖೆಯಲ್ಲಿ ಜಿಲ್ಲೆಯ ವಿವಿಧ ಕಾಮಗಾರಿಗಳಿಗೆ 575 ಕೋಟಿ ರೂ.ಖರ್ಚು ಮಾಡಲಾಗಿದೆ.89 ಕೋಟಿ ರೂ.ವೆಚ್ಚದಲ್ಲಿ ತುಮಕೂರು ರೈಲು ನಿಲ್ದಾಣ, 24 ಕೊಟಿ ರೂ.ಗಳಲ್ಲಿ ತಿಪಟೂರು ನಿಲ್ದಾಣ ಹಾಗೂ 13 ಕೋಟಿರೂ, ವೆಚ್ಚದಲ್ಲಿ ಗುಬ್ಬಿರೈಲ್ವೆ ನಿಲ್ದಾಣವನ್ನು ಆಧುನೀಕರಣಗೊಳಿಸಲಾಗುತ್ತದೆ ಎಂದು ಸಚಿವ ಸೋಮಣ್ಣ ಹೇಳಿದರು.
ಇದನ್ನು ಓದಿ: ತುಮಕೂರು: ವಿದ್ಯಾರ್ಥಿಗಳು ಡ್ರಗ್ಸ್ ಮುಕ್ತ ಕರ್ನಾಟಕಕ್ಕೆ ಕೈಜೋಡಿಸಿ-ಕೆ.ಬಿ.ಚಂದ್ರಚೂಡ
ಶಾಸಕ ಜಿ.ಬಿ.ಜ್ಯೋತಿಗಣೇಶ್,ಬಿ.ಸುರೇಶ್ ಗೌಡ, ಜಿಲ್ಲಾಧಿಕಾರಿ ಶುಭಕಲ್ಯಾಣ್, ಸಿಇಒ ಜಿ.ಪ್ರಭು, ಎಸ್.ಪಿ.ಕೆ.ವಿ.ಅಶೋಕ್,ಜಿಲ್ಲಾ ಬಿಜೆಪಿ ಅಧ್ಯಕ್ಷ ರವಿಶಂಕರ್ ಹೆಬ್ಬಾಕ, ರೈಲ್ವೆ ಇಲಾಖೆ ಸಿಎಓ ಅಜಯ್ ಶರ್ಮಾ, ಎಡಿಆರ್ಎಂ ಪ್ರವೀಣ್, ಡಿವೈಸಿ ಪ್ರಸಾದ್, ವೈ.ಹೆಚ್.ಹುಚ್ಚಯ್ಯ, ಹರೀಶ್ ಮೊದಲಾದವರು ಭಾಗವಹಿಸಿದ್ದರು.
– ಚಂದ್ರಚೂಡ ಕೆ.ಬಿ
