ಬೆಂಗಳೂರು: ಕಚೇರಿ ಕಂಪ್ಯೂಟರ್ಗಳು, ಸೈಬರ್ ಕೆಫೆಗಳು ಹಾಗೂ ಇತರರೊಂದಿಗೆ ಹಂಚಿಕೊಳ್ಳುವ ಕಂಪ್ಯೂಟರ್ಗಳಲ್ಲಿ ವಾಟ್ಸ್ಆಯಪ್ ವೆಬ್ (WhatsApp Web) ಬಳಸುವವರು ಎಚ್ಚರಿಕೆ ವಹಿಸುವಂತೆ ಕೇಂದ್ರ ಸರ್ಕಾರದ ಸೈಬರ್ ಭದ್ರತಾ ವಿಭಾಗ ಮಹತ್ವದ ಸೂಚನೆ ನೀಡಿದೆ.
ಕೇಂದ್ರ ಗೃಹ ಸಚಿವಾಲಯದ ಅಧೀನದಲ್ಲಿರುವ ಭಾರತೀಯ ಸೈಬರ್ ಅಪರಾಧ ಸಮನ್ವಯ ಕೇಂದ್ರದ (I4C) ರಾಷ್ಟ್ರೀಯ ಸೈಬರ್ ಅಪರಾಧ ವಿಶ್ಲೇಷಣಾ ಘಟಕ (NCTAU) ವಾಟ್ಸ್ಆಯಪ್ ವೆಬ್ನ ಸಕ್ರಿಯ ಸೆಷನ್ಗಳನ್ನು ಸೈಬರ್ ವಂಚಕರು ದುರುಪಯೋಗಪಡಿಸಿಕೊಳ್ಳುವ ಸಾಧ್ಯತೆಯ ಬಗ್ಗೆ ಎಚ್ಚರಿಸಿದೆ.
ಬಳಕೆದಾರರು ಕಂಪ್ಯೂಟರ್ನಲ್ಲಿ ವಾಟ್ಸ್ಆಯಪ್ ವೆಬ್ ತೆರೆದು ಕೆಲಸ ಮುಗಿಸಿದ ಬಳಿಕ ಕೇವಲ ಬ್ರೌಸರ್ ಟ್ಯಾಬ್ ಅಥವಾ ವಿಂಡೋ ಮುಚ್ಚಿದರೆ ಲಾಗ್ಔಟ್ ಆಗುವುದಿಲ್ಲ. ಹೀಗಾಗಿ ಸೆಷನ್ ಸಕ್ರಿಯವಾಗಿಯೇ ಉಳಿಯುವ ಸಾಧ್ಯತೆಯಿದೆ. ಇದನ್ನು ದುಷ್ಕರ್ಮಿಗಳು ದುರುಪಯೋಗಪಡಿಸಿಕೊಂಡು ಖಾಸಗಿ ಸಂದೇಶಗಳನ್ನು ಓದುವುದು, ಸಂಪರ್ಕ ಪಟ್ಟಿಯನ್ನು ವೀಕ್ಷಿಸುವುದು ಹಾಗೂ ಬಳಕೆದಾರರ ಹೆಸರಿನಲ್ಲಿ ಇತರರಿಗೆ ಸಂದೇಶ ಕಳುಹಿಸುವ ಮೂಲಕ ವಂಚನೆ ನಡೆಸಬಹುದು ಎಂದು ಎಚ್ಚರಿಸಲಾಗಿದೆ.

ಏನೆಲ್ಲ ಮುನ್ನೆಚ್ಚರಿಕೆ ವಹಿಸಬೇಕು?
ಸಾರ್ವಜನಿಕ ಕಂಪ್ಯೂಟರ್ಗಳ ಬಳಕೆ ಬೇಡ: ಸೈಬರ್ ಕೆಫೆ, ಹೋಟೆಲ್ ಹಾಗೂ ಇತರರು ಬಳಸುವ ಕಂಪ್ಯೂಟರ್ಗಳಲ್ಲಿ ವಾಟ್ಸ್ಆಯಪ್ ವೆಬ್ ಲಾಗಿನ್ ಮಾಡುವುದನ್ನು ಸಾಧ್ಯವಾದಷ್ಟು ತಪ್ಪಿಸಬೇಕು.
ಕೆಲಸ ಮುಗಿದ ತಕ್ಷಣ ಲಾಗ್ಔಟ್: ಬ್ರೌಸರ್ ಟ್ಯಾಬ್ ಮುಚ್ಚುವುದಷ್ಟೇ ಸಾಕಾಗುವುದಿಲ್ಲ. ವಾಟ್ಸ್ಆಯಪ್ ವೆಬ್ನಿಂದ ಕಡ್ಡಾಯವಾಗಿ ಲಾಗ್ಔಟ್ ಆಗಬೇಕು.
ಇನ್ಕಾಗ್ನಿಟೊ ಮೋಡ್ ಬಳಕೆ: ಅನಿವಾರ್ಯ ಸಂದರ್ಭಗಳಲ್ಲಿ ಬ್ರೌಸರ್ನ ಖಾಸಗಿ ಬ್ರೌಸಿಂಗ್ ಮೋಡ್ ಬಳಸಬಹುದು. ಆದರೆ ಇದು ಸಂಪೂರ್ಣ ಭದ್ರತೆಯನ್ನು ಖಾತರಿಪಡಿಸುವುದಿಲ್ಲ.
ಗೌಪ್ಯ ಮಾಹಿತಿ ಹಂಚಿಕೊಳ್ಳಬೇಡಿ: ಸಾರ್ವಜನಿಕ ಅಥವಾ ಹಂಚಿಕೆಯ ಕಂಪ್ಯೂಟರ್ಗಳ ಮೂಲಕ ಸರ್ಕಾರಿ, ಹಣಕಾಸು ಹಾಗೂ ಸಂಸ್ಥೆಗಳಿಗೆ ಸಂಬಂಧಿಸಿದ ಸೂಕ್ಷ್ಮ ಮಾಹಿತಿಗಳನ್ನು ವಿನಿಮಯ ಮಾಡಿಕೊಳ್ಳುವುದನ್ನು ತಪ್ಪಿಸಬೇಕು.
ಅನುಮಾನಾಸ್ಪದ ಚಟುವಟಿಕೆಗಳ ಮೇಲೆ ನಿಗಾ: ನಿಮ್ಮ ಖಾತೆಯಿಂದ ನೀವು ಕಳುಹಿಸದ ಸಂದೇಶಗಳು ಹೋಗಿರುವುದು ಅಥವಾ ಅಪರಿಚಿತ ಚಟುವಟಿಕೆಗಳು ಕಂಡುಬಂದರೆ ತಕ್ಷಣ ಪರಿಶೀಲಿಸಬೇಕು.
ಸಾಫ್ಟ್ವೇರ್ ಅಪ್ಡೇಟ್ ಮಾಡಿಕೊಳ್ಳಿ: ಮೊಬೈಲ್, ಕಂಪ್ಯೂಟರ್, ಬ್ರೌಸರ್ ಮತ್ತು ಭದ್ರತಾ ಸಾಫ್ಟ್ವೇರ್ಗಳನ್ನು ನಿಯಮಿತವಾಗಿ ನವೀಕರಿಸಬೇಕು. ಅಪರಿಚಿತ ಲಿಂಕ್ಗಳು ಹಾಗೂ ಫೈಲ್ಗಳನ್ನು ತೆರೆಯುವಾಗ ಎಚ್ಚರಿಕೆ ವಹಿಸಬೇಕು.
ಲಿಂಕ್ ಆಗಿರುವ ಸಾಧನಗಳನ್ನು ಪರಿಶೀಲಿಸಿ
ವಾಟ್ಸ್ಆಯಪ್ನ Settings ಅಥವಾ ಮೂರು ಚುಕ್ಕೆಗಳ ಮೆನುವಿನಲ್ಲಿರುವ Linked Devices ಆಯ್ಕೆಗೆ ತೆರಳಿ, ನಿಮ್ಮ ಖಾತೆಗೆ ಸಂಪರ್ಕಗೊಂಡಿರುವ ಸಾಧನಗಳನ್ನು ಪರಿಶೀಲಿಸಬೇಕು. ಅಪರಿಚಿತ ಸಾಧನ ಕಂಡುಬಂದರೆ ತಕ್ಷಣ ಅದರಿಂದ ಲಾಗ್ಔಟ್ ಮಾಡಬೇಕು.
ಸಾರ್ವಜನಿಕ ಕಂಪ್ಯೂಟರ್ನಲ್ಲಿ ವಾಟ್ಸ್ಆಯಪ್ ಬಳಸುವಾಗ ತೋರುವ ಸಣ್ಣ ನಿರ್ಲಕ್ಷ್ಯವೂ ಖಾಸಗಿತನ ಮತ್ತು ಹಣಕಾಸಿನ ಭದ್ರತೆಗೆ ಅಪಾಯ ಉಂಟುಮಾಡಬಹುದು. ಹೀಗಾಗಿ ಡಿಜಿಟಲ್ ವ್ಯವಹಾರಗಳಲ್ಲಿ ಎಚ್ಚರಿಕೆಯೇ ಮೊದಲ ರಕ್ಷಣೆ.
