ಚನ್ನರಾಯಪಟ್ಟಣ: ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಯುವಕರ ಭವಿಷ್ಯ ರೂಪಿಸಿಕೊಳ್ಳಲು ಕೌಶಲ್ಯ ಅತ್ಯಂತ ಅಗತ್ಯವಾಗಿದ್ದು ಕರ್ನಾಟಕ ವಿದ್ಯುತ್ ಕಾರ್ಖಾನೆ ನಿಗಮದ ಅಧ್ಯಕ್ಷರಾದ ಹೆಚ್. ಸಿ. ಲಲಿತ್ ರಾಘವ್ ದೀಪು ಅವರ ನೇತೃತ್ವದಲ್ಲಿ ಯುವ ಕೌಶಲ್ಯ ಅಭಿಯಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಕಾಂಗ್ರೆಸ್ ಮುಖಂಡರಾದ ರುದ್ರೇಶ್ ಹಾಗೂ ಪುನೀತ್ ತಿಳಿಸಿದ್ದಾರೆ.
ಅವರು ಸುದ್ದಿಗಾರರೊಂದಿಗೆ ಮಾತನಾಡಿ ಚನ್ನರಾಯಪಟ್ಟಣ ತಾಲ್ಲೂಕಿನ ಯುವಕರ ಭವಿಷ್ಯವನ್ನು ಬಲಪಡಿಸುವ ಉದ್ದೇಶದಿಂದ ಯುವ ಕೌಶಲ್ಯ ಅಭಿಯಾನ-2026 ಎಂಬ ವಿಶೇಷ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮದ ಅಡಿಯಲ್ಲಿ ತಾಲೂಕಿನ ಸುಮಾರು 2,000ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಉಚಿತವಾಗಿ ಕೌಶಲ್ಯ ತರಬೇತಿಯನ್ನು ನೀಡಲಾಗುವುದು. ಬೇಸಿಕ್ ಕಂಪ್ಯೂಟರ್ ಎಜುಕೇಷನ್, ಸ್ಪೋಕನ್ ಇಂಗ್ಲೀಷ್, ಟೈಪಿಂಗ್, ಇಂಟರ್ವ್ಯೂ ಪ್ರಿಪರೇಷನ್, ಪರ್ಸನಾಲಿಟಿ ಡೆವಲಪ್ಮೆಂಟ್ ಹಾಗೂ ಮತ್ತಿತರ ಕೌಶಲ್ಯಗಳ ಬಗ್ಗೆ ವಿದ್ಯಾರ್ಥಿಗಳಿಗೆ ಶಿಕ್ಷಣವನ್ನು ಉಚಿತವಾಗಿ ನೀಡಲಾಗುವುದು.
ಇದರೊಂದಿಗೆ ಉದ್ಯೋಗ ಸಿದ್ದತೆಯ ತರಬೇತಿಯನ್ನೂ ನೀಡಲಾಗುತ್ತದೆ. ಶಿಕ್ಷಣಕ್ಕೆ ಹಣ ಅಡ್ಡಿಯಾಗಬಾರದು ಎಂಬ ಉದ್ದೇಶದಿಂದ ಈ ತರಬೇತಿಯನ್ನು ನಮ್ಮ ಯುವಜನತೆಗೆ ಸಂಪೂರ್ಣ ಉಚಿತವಾಗಿ ನೀಡಲಾಗುತ್ತಿದ್ದು, ಅರ್ಹ ವಿದ್ಯಾರ್ಥಿಗಳಿಗೆ ಪ್ಲೇಸ್ಮೆಂಟ್ ಸಪರ್ಟ್ ಕೂಡ ಒದಗಿಸಲಾಗುತ್ತದೆ ಎಂದರು.

ಗ್ರಾಮಪಂಚಾಯಿತಿ ಸದಸ್ಯ ಕಿರಣ್, ಅಹಿಂದ ಸಂಘಟನೆಯ ಜಿಲ್ಲಾ ಉಪಾಧ್ಯಕ್ಷ ಜಬೀಉಲ್ಲಾಬೇಗ್ ಮಾತನಾಡಿ ಈ ಯೋಜನೆಯ ಮುಖ್ಯ ಗುರಿ ಪ್ರತಿ ವಿದ್ಯಾರ್ಥಿಗೂ ಕೌಶಲ್ಯ, ಪ್ರತಿ ಮನೆಗೂ ಉದ್ಯೋಗ, ಗ್ರಾಮೀಣ ಹಾಗೂ ನಗರ ಪ್ರದೇಶದ ಯುವಕರು ಸಮಾನ ಅವಕಾಶ ಪಡೆಯಬೇಕು, ನಿರುದ್ಯೋಗ ಕಡಿಮೆಯಾಗಬೇಕು ಮತ್ತು ಯುವಕರು ಆತ್ಮವಿಶ್ವಾಸದಿಂದ ಉದ್ಯೋಗ ಕ್ಷೇತ್ರಕ್ಕೆ ಪ್ರವೇಶಿಸಬೇಕು ಎಂಬ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು ವಿದ್ಯಾರ್ಥಿಗಳು ಶ್ರೀಕಂಠಯ್ಯನವರ ಭವನದಲ್ಲಿ ಅರ್ಜಿಗಳನ್ನು ನೀಡಲಾಗುತ್ತಿದ್ದು ಅರ್ಜಿಯನ್ನು ಬರ್ತಿಮಾಡಿ ನೊಂದಣಿ ಮಾಡಿಸಿದ ನಂತರ ಪಟ್ಟಣದ ಬಾಲ್ಕ್ ಕಂಪ್ಯೂಟರ್ ಸೆಂಟರ್ನಲ್ಲಿ ಎಲ್ಲರಿಗೂ ಉಚಿತ ಶಿಕ್ಷಣವನ್ನು ನೀಡಲಾಗುವುದು.
ಯುವಕರ ಜೀವನದಲ್ಲಿ ದೀರ್ಘಕಾಲೀನ ಬದಲಾವಣೆ ತರುವ ಶಕ್ತಿಯನ್ನು ಹೊಂದಿದೆ. ತಾಲೂಕಿನ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಿ ಈ ಕಾರ್ಯಕ್ರಮಕ್ಕೆ ನೋಂದಾಯಿಸಿಕೊಳ್ಳುವ ಮೂಲಕ ಈ ತರಬೇತಿ ಕಾರ್ಯಕ್ರಮದ ಸಂಪೂರ್ಣ ಲಾಭ ಪಡೆದುಕೊಳ್ಳಬೇಕು ಎಂಬುದು ಶ್ರೀಕಂಠಯ್ಯನವರ ಅಭಿಮಾನಿಗಳ ಮೂಲ ಉದ್ದೇಶವಾಗಿದೆ.
ಈ ಯುವ ಕೌಶಲ್ಯ ಅಭಿಯಾನವು ಕೇವಲ ತರಬೇತಿ ಮಾತ್ರವಲ್ಲ, ಯುವಕರ ಭವಿಷ್ಯ ನಿರ್ಮಾಣದ ಒಂದು ದೊಡ್ಡ ಹೆಜ್ಜೆಯಾಗಿದ್ದು, ಇದರಿಂದ ನಮ್ಮ ತಾಲೂಕಿನ ಯುವಕರ ಭವಿಷ್ಯ ನಿರ್ಮಾಣವಾಗಲಿದೆ. ಯುವಕರ ಉತ್ತಮ ಭವಿಷ್ಯ ನಮ್ಮ ತಾಲೂಕಿನ ಅಭಿವೃದ್ಧಿಗೆ ಮಹತ್ವದ ಕೊಡುಗೆ ನೀಡಲಿದೆ ಎಂದರು.
ಸಭೆಯಲ್ಲಿ ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಎಂ ಎಸ್ ಪುನೀತ್, ಮಾಜಿ ಗ್ರಾಮ ಪಂಚಾಯಿತಿ ಸದಸ್ಯರಾದ ಏನ್ ಜಿ ಕಿರಣ್,ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಗಿರೀಶ್, ಯುವ ಕಾಂಗ್ರೆಸ್ ನ ಮುಖಂಡರಾದ ರುದ್ರೇಶ್ ಬಾಲ್ಕ್ ಕಂಪ್ಯೂಟರ್ ಸೆಂಟರ್ ಮುಖ್ಯಸ್ಥ ನವೀನ್, ಯುವ ಕಾಂಗ್ರೆಸ್ ಮುಖಂಡರಾದ ದಿಲೀಪ್, ಜಬಿವುಲ್ಲಾ ಬೇಗ್ ಸೇರಿದಂತೆ ಇತರರು ಹಾಜರಿದ್ದರು.
– ಮಂಜುನಾಥ್ ಐ ಕೆ
