ಹಾಸನ: ವರ್ಷಕ್ಕೊಮ್ಮೆ ಮಾತ್ರ ದರ್ಶನ ನೀಡುವ ಹಾಸನದ ಅಧಿದೇವತೆ ಶ್ರೀ ಹಾಸನಾಂಬೆ ದೇವಿಯ ಜಾತ್ರಾ ಮಹೋತ್ಸವಕ್ಕೆ ಭಕ್ತಸಾಗರವೇ ಹರಿದುಬರುತ್ತಿದೆ. ಇದರ ನಡುವೆ ಕೇವಲ ಎಂಟು ದಿನಗಳಲ್ಲಿ ವಿಶೇಷ ದರ್ಶನದ ಟಿಕೆಟ್ ಹಾಗೂ ಲಾಡು ಪ್ರಸಾದ ಮಾರಾಟದಿಂದ ದೇವಸ್ಥಾನದ ಬೊಕ್ಕಸಕ್ಕೆ ಬರೋಬ್ಬರಿ ₹10.21 ಕೋಟಿ ಆದಾಯ ಹರಿದುಬಂದಿದೆ.
ಅಕ್ಟೋಬರ್ 29ರಿಂದ ನವೆಂಬರ್ 5ರ ಸಂಜೆ 5.30ರವರೆಗೆ ಸಂಗ್ರಹವಾದ ಅಧಿಕೃತ ಮಾಹಿತಿಯಂತೆ, ₹300 ಮತ್ತು ₹1,000 ಮುಖಬೆಲೆಯ ವಿಶೇಷ ದರ್ಶನದ ಟಿಕೆಟ್ ಹಾಗೂ ಲಾಡು ಪ್ರಸಾದ ಮಾರಾಟದಿಂದ ಒಟ್ಟು ₹10,21,67,300 ಆದಾಯ ಸಂಗ್ರಹವಾಗಿದೆ.
ಟಿಕೆಟ್ ಮತ್ತು ಲಾಡು ಮಾರಾಟದ ವಿವರ:
-
₹1,000 ವಿಶೇಷ ದರ್ಶನ: 61,909 ಟಿಕೆಟ್ ಮಾರಾಟದಿಂದ ₹6,19,09,000 ಆದಾಯ.
-
₹300 ವಿಶೇಷ ದರ್ಶನ: 1,08,800 ಟಿಕೆಟ್ ಮಾರಾಟದಿಂದ ₹3,26,40,000 ಆದಾಯ.
-
ಲಾಡು ಪ್ರಸಾದ: 1,26,313 ಪ್ಯಾಕೆಟ್ ಮಾರಾಟದಿಂದ ₹76,18,300 ಆದಾಯ.
ಒಟ್ಟು 1,70,709 ವಿಶೇಷ ದರ್ಶನದ ಟಿಕೆಟ್ಗಳು ಮಾರಾಟವಾಗಿದ್ದು, ಟಿಕೆಟ್ಗಳಿಂದಲೇ ₹9,45,49,000 ಸಂಗ್ರಹವಾಗಿದೆ. ಇನ್ನು ಲಾಡು ಪ್ರಸಾದ ಮಾರಾಟದಿಂದ ₹76.18 ಲಕ್ಷ ಆದಾಯ ಬಂದಿದೆ.
ಒಟ್ಟಾರೆ ಆದಾಯದಲ್ಲಿ ₹1,000 ಮುಖಬೆಲೆಯ ವಿಶೇಷ ದರ್ಶನದ ಟಿಕೆಟ್ಗಳ ಪಾಲು ಅತಿ ಹೆಚ್ಚಾಗಿದ್ದು, ಭಕ್ತರು ಶೀಘ್ರ ದರ್ಶನಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಿರುವುದು ಅಂಕಿ-ಅಂಶಗಳಿಂದ ತಿಳಿದುಬಂದಿದೆ.
ಜಾತ್ರಾ ಮಹೋತ್ಸವದ ಮುಂದಿನ ದಿನಗಳಲ್ಲಿಯೂ ಭಕ್ತರ ಸಂಖ್ಯೆ ಹೆಚ್ಚಾಗುವ ನಿರೀಕ್ಷೆಯಿದ್ದು, ಟಿಕೆಟ್ ಹಾಗೂ ಪ್ರಸಾದ ಮಾರಾಟದ ಆದಾಯ ಮತ್ತಷ್ಟು ಏರಿಕೆಯಾಗುವ ಸಾಧ್ಯತೆಯಿದೆ.
