ಪ್ರೊಕಾಮ್ ಇಂಟರ್ನ್ಯಾಷನಲ್, ‘HDOR – 100 ದಿನಗಳ ಓಟ’ (HDOR – 100 Days of Running) ಆಂದೋಲನದ ಹೊಸ ಆವೃತ್ತಿಯನ್ನು ಅಧಿಕೃತವಾಗಿ ಘೋಷಿಸಿದೆ. ಕಳೆದ 11 ವರ್ಷಗಳಿಂದ ಜನರಲ್ಲಿ ಫಿಟ್ನೆಸ್ ಸಂಸ್ಕೃತಿಯನ್ನು ಬೆಳೆಸಿಕೊಂಡು ಬರುತ್ತಿರುವ ಈ ಆಂದೋಲನವು ಈ ಬಾರಿ ಮತ್ತಷ್ಟು ವಿಸ್ತೃತ ರೂಪದಲ್ಲಿ ಮರಳಿದೆ.
ಫಿಟ್ ಇಂಡಿಯಾದ ಆಶಯದಿಂದ ಪ್ರೇರಣೆ ಪಡೆದಿರುವ HDOR – 100 ದಿನಗಳ ಓಟವು ಎಲ್ಲಾ ವಯಸ್ಸಿನ ಹಾಗೂ ವಿವಿಧ ಫಿಟ್ನೆಸ್ ಮಟ್ಟದ ಜನರನ್ನು ತಮ್ಮ ಅನುಕೂಲಕ್ಕೆ ತಕ್ಕಂತೆ ಓಡಲು, ನಡೆಯಲು, ಸೈಕಲ್ ತುಳಿಯಲು ಅಥವಾ ಡುವಾತ್ಲಾನ್ನಲ್ಲಿ ಭಾಗವಹಿಸಲು ಪ್ರೋತ್ಸಾಹಿಸುತ್ತದೆ. ಹೆಚ್ಚು ಸಕ್ರಿಯ ಜೀವನಶೈಲಿಯತ್ತ ಸಣ್ಣ ಹೆಜ್ಜೆಯನ್ನಾದರೂ ಇಡುವಂತೆ ಜನರನ್ನು ಪ್ರೇರೇಪಿಸುವುದೇ HDORನ ಪ್ರಮುಖ ಉದ್ದೇಶವಾಗಿದೆ.
ರಾಷ್ಟ್ರೀಯ ಕ್ರೀಡಾ ದಿನವಾದ ಆಗಸ್ಟ್ 29, 2026ರಂದು https://hdor.com/ ನಲ್ಲಿ ನೋಂದಣಿಗಳು ಆರಂಭವಾಗಲಿವೆ. ಕಾರ್ಯಕ್ರಮವು ಅಕ್ಟೋಬರ್ 10, 2026ರಂದು ಆರಂಭವಾಗಿ 2027ರ ಜನವರಿ 17ರಂದು ಮುಕ್ತಾಯಗೊಳ್ಳಲಿದೆ.

ಭಾರತದಲ್ಲಿ ಡಿಜಿಟಲ್ ಬಳಕೆ ವೇಗವಾಗಿ ಹೆಚ್ಚುತ್ತಿದ್ದು, ತಂತ್ರಜ್ಞಾನವು ಜನರ ದೈನಂದಿನ ಜೀವನದ ಪ್ರಮುಖ ಭಾಗವಾಗಿದೆ. ಒಂದು ಬಿಲಿಯನ್ಗಿಂತ ಹೆಚ್ಚು ಭಾರತೀಯರು ಈಗ ಇಂಟರ್ನೆಟ್ಗೆ ಸಂಪರ್ಕ ಹೊಂದಿರುವ ಹಿನ್ನೆಲೆಯಲ್ಲಿ, ಆರೋಗ್ಯಕರ ಜೀವನಶೈಲಿಯನ್ನು ರೂಢಿಸಿಕೊಳ್ಳಲು, ತಮ್ಮ ದೈಹಿಕ ಚಟುವಟಿಕೆಗಳನ್ನು ದಾಖಲಿಸಲು ಮತ್ತು ಉತ್ತಮ ಅಭ್ಯಾಸಗಳನ್ನು ಮುಂದುವರಿಸಲು ತಂತ್ರಜ್ಞಾನವು ಹೊಸ ಅವಕಾಶಗಳನ್ನು ಸೃಷ್ಟಿಸುತ್ತಿದೆ.
ಇದೇ ವೇಳೆ ಜೀವನಶೈಲಿಗೆ ಸಂಬಂಧಿಸಿದ ಆರೋಗ್ಯ ಅಪಾಯಗಳು ಹೆಚ್ಚುತ್ತಿರುವುದರಿಂದ, ನಿಯಮಿತ ದೈಹಿಕ ಚಟುವಟಿಕೆಯನ್ನು ದೈನಂದಿನ ಜೀವನದ ಭಾಗವಾಗಿಸಿಕೊಳ್ಳುವ ಅಗತ್ಯವೂ ಹೆಚ್ಚಿದೆ. ಈ ಹಿನ್ನೆಲೆಯಲ್ಲಿ HDOR, ತಂತ್ರಜ್ಞಾನ ಮತ್ತು ದೈಹಿಕ ಚಟುವಟಿಕೆಯನ್ನು ಒಟ್ಟುಗೂಡಿಸಿ, ಫಿಟ್ನೆಸ್ ಅನ್ನು ಹೆಚ್ಚು ಸರಳ, ಎಲ್ಲರಿಗೂ ಸುಲಭವಾಗಿ ತಲುಪುವ ಮತ್ತು ನಿರಂತರವಾಗಿ ಮುಂದುವರಿಸಬಹುದಾದ ರೀತಿಯಲ್ಲಿ ರೂಪಿಸಿದೆ.
ಪ್ರೊಕಾಮ್ ಇಂಟರ್ನ್ಯಾಷನಲ್ನ ಜಂಟಿ ವ್ಯವಸ್ಥಾಪಕ ನಿರ್ದೇಶಕ ವಿವೇಕ್ ಸಿಂಗ್ ಮಾತನಾಡಿ, “HDOR ಎನ್ನುವುದು ಕೇವಲ 100 ದಿನಗಳ ಓಟವಲ್ಲ. 100 ದಿನಗಳ ಕಾಲ ನಿರಂತರವಾಗಿ ದೈಹಿಕ ಚಟುವಟಿಕೆಯಲ್ಲಿ ತೊಡಗಿಸಿಕೊಂಡು, ಅದನ್ನು ಜೀವನದ ಒಂದು ಭಾಗವಾಗಿಸಿಕೊಳ್ಳುವುದೇ ಇದರ ಮುಖ್ಯ ಉದ್ದೇಶ. ಪ್ರತಿಯೊಂದು ಮನೆಗೂ ದೈಹಿಕ ಚಟುವಟಿಕೆಯನ್ನು ತಲುಪಿಸುವ ಮೂಲಕ ‘ಫಿಟ್ ಇಂಡಿಯಾ’ದ ದೊಡ್ಡ ಕನಸಿಗೆ ಕೊಡುಗೆ ನೀಡುವುದು ನಮ್ಮ ದೃಷ್ಟಿಕೋನ.
“ನೀವು ನಡೆಯುತ್ತಿರಲಿ, ಓಡುತ್ತಿರಲಿ, ಸೈಕಲ್ ತುಳಿಯುತ್ತಿರಲಿ ಅಥವಾ ಸಕ್ರಿಯ ಜೀವನಶೈಲಿಯತ್ತ ಮೊದಲ ಹೆಜ್ಜೆ ಇಡುತ್ತಿರಲಿ, HDORನಲ್ಲಿ ನಿಮಗೂ ಒಂದು ಸ್ಥಾನವಿದೆ. ‘ಮುಮ್ಕಿನ್ ಹೈ’ (Mumkin Hai) ಎಂಬುದು ನಮಗೆ ಇದೇ ಅರ್ಥ ನೀಡುತ್ತದೆ — ಎಲ್ಲಿದ್ದರೂ ಪರವಾಗಿಲ್ಲ, ಆರಂಭಿಸಿ, ಮುಂದುವರಿಯಿರಿ ಮತ್ತು 100 ದಿನಗಳ ಆಚೆಗೂ ಉಳಿಯುವಂತಹ ಉತ್ತಮ ಅಭ್ಯಾಸವನ್ನು ಬೆಳೆಸಿಕೊಳ್ಳಿ,” ಎಂದರು.
ಪ್ರಧಾನ ಮಂತ್ರಿ ಪೋಷಣ್ ಯೋಜನೆಯ ನೇರ ಅನುಷ್ಠಾನ ಪಾಲುದಾರರಾಗಿರುವ ದಿ ಅಕ್ಷಯ ಪಾತ್ರ ಫೌಂಡೇಶನ್, HDOR – 100 Days of Runningನ ವಿಶೇಷ ಕಮ್ಯೂನಿಟಿ ಇಂಪ್ಯಾಕ್ಟ್ ಪಾರ್ಟ್ನರ್ ಆಗಿ ಕೈಜೋಡಿಸಿದೆ.
HDOR ಹೇಗೆ ಕಾರ್ಯನಿರ್ವಹಿಸುತ್ತದೆ?
• ಆರಂಭಿಸಿ: Google Play ಅಥವಾ Apple App Storeನಿಂದ HDOR ಆ್ಯಪ್ ಡೌನ್ಲೋಡ್ ಮಾಡಿ.
• ನಿಮ್ಮ ಚಟುವಟಿಕೆಯನ್ನು ಆಯ್ಕೆಮಾಡಿ: ಓಟ, ನಡಿಗೆ, ಸೈಕ್ಲಿಂಗ್ ಅಥವಾ ಡುವಾತ್ಲಾನ್ನಲ್ಲಿ ಭಾಗವಹಿಸಿ.
• ನಿಮ್ಮದೇ ರೀತಿಯಲ್ಲಿ ಚಟುವಟಿಕೆಯಲ್ಲಿ ತೊಡಗಿಕೊಳ್ಳಿ: ಕನಿಷ್ಠ 2.5 ಕಿ.ಮೀ. ಓಟ ಅಥವಾ ನಡಿಗೆ, ಅಥವಾ 8 ಕಿ.ಮೀ. ಸೈಕ್ಲಿಂಗ್ ಪೂರ್ಣಗೊಳಿಸಿ.
• ಸವಾಲನ್ನು ಪೂರ್ಣಗೊಳಿಸಿ: 100 ದಿನಗಳಲ್ಲಿ ಕನಿಷ್ಠ 85 ದಿನ ಸಕ್ರಿಯವಾಗಿದ್ದರೆ ನೀವು HDOR ಫಿನಿಶರ್ ಆಗುತ್ತೀರಿ.
• ವಿಶ್ರಾಂತಿ ದಿನಗಳೂ ಇವೆ: ಕಾರ್ಯಕ್ರಮದಲ್ಲಿ 15 ವಿಶ್ರಾಂತಿ ದಿನಗಳನ್ನು ನೀಡಲಾಗಿದ್ದು, ನಿಮ್ಮ ಅನುಕೂಲಕ್ಕೆ ತಕ್ಕಂತೆ ಸವಾಲನ್ನು ಪೂರ್ಣಗೊಳಿಸಲು ಅವಕಾಶವಿದೆ.
• ನಿಮ್ಮ ಪ್ರಯಾಣವನ್ನು ಟ್ರ್ಯಾಕ್ ಮಾಡಿ: HDOR ಆ್ಯಪ್ ಮೂಲಕ ನಿಮ್ಮ ಚಟುವಟಿಕೆಗಳನ್ನು ದಾಖಲಿಸಿ ಅಥವಾ ಹೊಂದಾಣಿಕೆಯಾಗುವ ಸ್ಮಾರ್ಟ್ವಾಚ್ ಮತ್ತು ಫಿಟ್ನೆಸ್ ಪ್ಲಾಟ್ಫಾರ್ಮ್ಗಳನ್ನು ಸಿಂಕ್ ಮಾಡಿ.
• ಸಕ್ರಿಯವಾಗಿರಿ: ವಿವಿಧ ಸವಾಲುಗಳಲ್ಲಿ ಭಾಗವಹಿಸಿ, ಲೀಡರ್ಬೋರ್ಡ್ನಲ್ಲಿ ಸ್ಥಾನ ಪಡೆಯಿರಿ, ಮೈಲಿಗಲ್ಲುಗಳನ್ನು ತಲುಪಿ ಮತ್ತು ಒಟ್ಟು ₹10 ಲಕ್ಷ ಮೌಲ್ಯದ ಬಹುಮಾನಗಳನ್ನು ಗೆಲ್ಲುವ ಅವಕಾಶ ಪಡೆಯಿರಿ.
• ನಿಮ್ಮ ಫಿಟ್ನೆಸ್ ಗೆಳೆಯ ‘GoGo’: HDORನ ವರ್ಚುವಲ್ ಫಿಟ್ನೆಸ್ ಬಡ್ಡಿ GoGo ನಿಮ್ಮನ್ನು ಪ್ರೇರೇಪಿಸುತ್ತದೆ, ಮಾರ್ಗದರ್ಶನ ನೀಡುತ್ತದೆ ಮತ್ತು ನಿಮ್ಮ ಪ್ರಗತಿಯನ್ನು ಸಂಭ್ರಮಿಸುತ್ತದೆ.
• ಎಲ್ಲರಿಗೂ ಮುಕ್ತ: ನೋಂದಣಿ ಶುಲ್ಕ ₹599ರಿಂದ ಆರಂಭವಾಗಲಿದ್ದು, ಇದರಲ್ಲಿ GST ಒಳಗೊಂಡಿದೆ.
HDORನಲ್ಲಿ ವಯಸ್ಸು, ಸ್ಥಳ ಅಥವಾ ಅನುಭವದಂತಹ ಸಾಮಾನ್ಯ ಅಡೆತಡೆಗಳಿಗೆ ಯಾವುದೇ ಮಿತಿ ಇಲ್ಲ. ಎಲ್ಲರಿಗೂ ಫಿಟ್ನೆಸ್ ಸುಲಭವಾಗಿ ತಲುಪುವಂತೆ ಇದನ್ನು ರೂಪಿಸಲಾಗಿದೆ. ಮೊದಲ ಬಾರಿಗೆ ಭಾಗವಹಿಸುವವರು, ಹಿರಿಯ ನಾಗರಿಕರು, ಕುಟುಂಬಗಳು, ಕಾರ್ಪೊರೇಟ್ ಸಂಸ್ಥೆಗಳು ಅಥವಾ ರನ್ನಿಂಗ್ ಕ್ಲಬ್ಗಳು ಸೇರಿದಂತೆ ಪ್ರತಿಯೊಬ್ಬರೂ ತಮ್ಮದೇ ರೀತಿಯಲ್ಲಿ HDORನಲ್ಲಿ ಭಾಗವಹಿಸಬಹುದು.
